ಹೊಸದಿಲ್ಲಿ: ದೇಶದ ಮೊದಲ ಲೋಕಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರು ಮಂಗಳವಾರ ನೇಮಕವಾಗಿದ್ದಾರೆ.
ಆಯ್ಕೆ ಸಮಿತಿಯು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ ಹೆಸರನ್ನು ಅಂತಿಮಗೊಳಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಘೋಷ್ ಮತ್ತು ಇತರ ಸದಸ್ಯರ ನೇಮಕಕ್ಕೆ ಸಹಿ ಮಾಡಿದ್ದಾರೆ.
ನ್ಯಾಯಮೂರ್ತಿಗಳಾದ ದಿಲೀಪ್ ಬಿ ಬೊಸ್ಸಾಲೆ, ಪ್ರದೀಪ್ ಕುಮಾರ್ ಮೊಹಂತಿ, ಅಭಿಲಾಶಾ ಕುಮಾರಿ ಮತ್ತು ಅಜಯ್ ಕುಮಾರ್ ತ್ರಿಪಾಠಿ ಲೋಕಪಾಲದ ಮೂವರು ನ್ಯಾಯಾಂಗ ಸದಸ್ಯರಾಗಿದ್ದಾರೆ. ನ್ಯಾಯಾಂಗೇತರ ಸದಸ್ಯರಾಗಿ ದಿನೇಶ್ ಕುಮಾರ್ ಜೈನ್, ಅರ್ಚನಾ ರಾಮಸುಂದರ್, ಮಹೇಂದರ್ ಸಿಂಗ್ ಮತ್ತು ಡಾ.ಇಂದ್ರಜೀತ್ ಪ್ರಸಾದ್ ಗೌತಮ್ ಅವರು ನೇಮಕವಾಗಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯ ಮೂರ್ತಿ ರಂಜನ್ ಗೊಗೋಯ್, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಜ್ಯೂರಿಸ್ಟ್‌ರನ್ನು ಒಳಗೊಂಡ ಸಮಿತಿ ಈ ನಿರ್ಧಾರ ಕೈಗೊಂಡಿತ್ತು. ಈಗಾಗಲೇ ಲೋಕ ಪಾಲ ಶೋಧ ಸಮಿತಿಯು ಪಟ್ಟಿ ಮಾಡಿದ 10 ಸಂಭಾವ್ಯ ಅಭ್ಯರ್ಥಿಗಳ ಪೈಕಿ ಜಸ್ಟೀಸ್ ಘೋಷ್ ಪ್ರಮುಖ ವ್ಯಕ್ತಿಯಾಗಿದ್ದರು.
2017ರ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ ನಿಂದ ನಿವೃತ್ತರಾದ ಘೋಷ್, ಸದ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದಾರೆ.