Advertisement

3000 ಅಡಿ ಎತ್ತರದಲ್ಲಿ ಮನುಷ್ಯ!

10:40 PM Sep 03, 2020 | mahesh |

ಲಾಸ್‌ ಏಂಜಲೀಸ್‌: ಬರೋಬ್ಬರಿ 3 ಸಾವಿರ ಅಡಿ ಎತ್ತರದಲ್ಲಿ ವಿಮಾನವು ಸಂಚರಿಸುತ್ತಿರುವಾಗಲೇ ಪಕ್ಕದಲ್ಲೇ ವ್ಯಕ್ತಿಯೊಬ್ಬ ಹಾರಾಡುತ್ತಿರುವುದು ಕಂಡು ಬಂದರೆ ನಿಮಗೆ ಏನಾಗಬೇಡ? ಇದು ‘ಶಕ್ತಿಮಾನ್‌’ ಅಥವಾ “ಐರನ್‌ ಮ್ಯಾನ್‌’ನ ದೃಶ್ಯವಿರಬಹುದು ಎಂದು ನೀವು ಭಾವಿಸಿದರೆ ಅದು ತಪ್ಪು. ಲಾಸ್‌ ಏಂಜಲೀಸ್‌ನಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. ಲಾಸ್‌ ಏಂಜಲೀಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್‌ ಮಾಡಿದ ಬಳಿಕ ಸ್ವತಃ ಅದರ ಪೈಲಟ್‌ ತಾನು ಕಣ್ಣಾರೆ ಕಂಡ ಈ ದೃಶ್ಯವನ್ನು ವಿವರಿಸಿದ್ದಾನೆ.

Advertisement

300 ಯಾರ್ಡ್‌ ದೂರದಲ್ಲಿದ್ದ: ಭಾನುವಾರ ಸಂಜೆ ಅಮೆರಿಕನ್‌ ಏರ್‌ಲೈನ್ಸ್‌ ವಿಮಾನವು ಫಿಲಿಡೆಲ್ಫಿಯಾದಿಂದ ಲಾಸ್‌ ಏಂಜಲಿಸ್‌ಗೆ ಪ್ರಯಾಣ ಬೆಳೆಸಿತ್ತು. ವಿಮಾನವು ಭೂಮಿಯಿಂದ 3 ಸಾವಿರ ಅಡಿ ಎತ್ತರದಲ್ಲಿ ಸಂಚರಿಸುತ್ತಿದ್ದಾಗ, ಅದರಿಂದ ಕೇವಲ 300 ಯಾರ್ಡ್‌ ದೂರದಲ್ಲಿ ಜೆಟ್‌ಪ್ಯಾಕ್‌ ಧರಿಸಿದ್ದ ವ್ಯಕ್ತಿಯೊಬ್ಬ ಹಾರಾಡುತ್ತಿರುವುದನ್ನು ಪೈಲಟ್‌ ನೋಡಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅವರು ಏರ್‌ ಟ್ರಾಫಿಕ್‌ ಕಂಟ್ರೋಲ್‌ಗೆ ಸಂದೇಶ ಕಳುಹಿಸಿ, ಈಗಷ್ಟೇ ಒಬ್ಬ ವ್ಯಕ್ತಿ ಹಾರಾಡುತ್ತಿರುವುದನ್ನು ನಾನು ನೋಡಿದೆ ಎಂದು ತಿಳಿಸಿದ್ದಾರೆ. ಇದಾದ, ಕೆಲವೇ ಕ್ಷಣಗಳಲ್ಲಿ ಮತ್ತೂಂದು ವಿಮಾನದ ಪೈಲಟ್‌ ಕೂಡ, ತಮ್ಮೆದುರಿಗೇ ಒಬ್ಬ ವ್ಯಕ್ತಿ ಜೆಟ್‌ ಪ್ಯಾಕ್‌ ಧರಿಸಿ ಹಾದುಹೋಗಿದ್ದಾಗಿ ಹೇಳಿದ್ದಾರೆ. ಆಶ್ಚರ್ಯಚಕಿತರಾದ ಏರ್‌ಕಂಟ್ರೋಲ್‌ ಸಿಬ್ಬಂದಿ, ಕೂಡಲೇ ಆ ದಾರಿಯಲ್ಲಿ ಸಂಚರಿಸುತ್ತಿದ್ದ ಎಲ್ಲ ವಿಮಾನಗಳ ಪೈಲಟ್‌ಗಳಿಗೂ ಸಂದೇಶ ರವಾನಿಸಿ ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ. ಈ ಘಟನೆ ಸಂಬಂಧ ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌(ಎಫ್ಎಎ) ತನಿಖೆ ಆರಂಭಿಸಿದೆ. ಆದರೆ, ಅಷ್ಟೊಂದು ಎತ್ತರದಲ್ಲಿ ಹಾರಾಡುತ್ತಿದ್ದ ವ್ಯಕ್ತಿ ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಕಾನೂನಿನ ಉಲ್ಲಂಘನೆ
ಇತ್ತೀಚೆಗಷ್ಟೇ ಕೆಲವು ಮಾನವ ಜೆಟ್‌ಪ್ಯಾಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದರ ಮೂಲಕ 12 ಸಾವಿರ ಅಡಿ ಎತ್ತರಕ್ಕೂ ಹಾರಲು ಸಾಧ್ಯವಿದೆ. ಆದರೆ, ಈ ರೀತಿಯಾಗಿ ಯಾವುದೇ ವ್ಯಕ್ತಿ ಹಾರಾಟ ನಡೆಸಿದರೂ, ಅದರಿಂದ ಆಗಸದಲ್ಲಿ ಸಂಚರಿಸುವ ವಿಮಾನಕ್ಕೆ ಅಪಾಯ ಉಂಟಾಗಬಹುದು. ಅಲ್ಲದೆ, ವಿಮಾನಗಳು ಸಂಚರಿಸುವ ಜಾಗದಲ್ಲಿ ಯಾರೇ ಜೆಟ್‌ಪ್ಯಾಕ್‌ನಲ್ಲಿ ಹಾರಾಡಿದರೂ ಅದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಎಫ್ಎಎ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next