ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ವಿಕಲಚೇತನರಿಗೂ ಆದ್ಯತೆ ನೀಡಬೇಕೆನ್ನುವ ಉದ್ದೇಶದಿಂದಲೇ ಪೌಷ್ಟಿಕ ತರಕಾರಿ ಕೈತೋಟ ನಿರ್ಮಿಸಲಾಗಿದ್ದು, ವಿಕಲಚೇತನರ ಗುಂಪು ರಚಿಸಿ ಅವರಿಗೆ ನಿರ್ವಹಣೆ ಮಾಡಿ ಆದಾಯ ಪಡೆಯಲು ತಾಪಂ, ಜಿಪಂ ವಿಶೇಷ ಯೋಜನೆ ರೂಪಿಸಿದೆ. ಇದು ಯಶಸ್ವಿಯಾದರೆ ಜಿಲ್ಲಾದ್ಯಂತ ಇದನ್ನು ವಿಸ್ತರಣೆಗೂ ಚಿಂತನೆ ನಡೆಸಿದೆ.
ಪ್ರತಿ ವರ್ಷವೂ ಜಿಪಂ, ತಾಪಂ, ಗ್ರಾಪಂ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ. ಸಾಮೂಹಿಕ ಬಂಡ್ ನಿರ್ಮಾಣ, ಬದು ನಿರ್ಮಾಣ, ಕೆರೆ ಹೂಳು ತೆಗೆಯುವುದು, ಚೆಕ್ ಡ್ಯಾಂ ಸ್ವತ್ಛಗೊಳಿಸುವುದು, ರೈತರ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿ ಜೊತೆಗೆ ಸಮುದಾಯ ಕಾಮಗಾರಿಗಳನ್ನೂ ನೀಡಲಾಗುತ್ತಿದೆ. ಈ ವೇಳೆ ವಿಕಲಚೇತನರು ನರೇಗಾ ಕೆಲಸಕ್ಕೆ ಆಗಮಿಸಿದಾಗ ಅವರಿಗೆ ಕೆಲಸ ಮಾಡುವ ಸಾಮರ್ಥ್ಯ ಕಡಿಮೆ ಇರುತ್ತದೆ. ಶೇ. 100ರಷ್ಟು ಅವರಿಗೆ ಕೆಲಸ ಮಾಡಲು ಆಗುವುದಿಲ್ಲ. ಅದನ್ನರಿತು ಗಂಗಾವತಿ ತಾಲೂಕಿನ ವಡ್ಡರಟ್ಟಿ ಗ್ರಾಪಂನಲ್ಲಿನ ವಿಕಲಚೇತನರಿಗಾಗಿಯೇ ತರಕಾರಿ ಕೈತೋಟ ನಿರ್ಮಿಸಿ ಕೊಡಲಾಗಿದೆ.
ಏನಿದು ಯೋಜನೆ?: ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ವಿಕಲಚೇತನರಿಗೆ ಕೆಲಸದ ಹೊರೆ ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ತಾಪಂನಿಂದ ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿನ ಒಂದು ಎಕರೆ ಸರ್ಕಾರಿ ಜಮೀನು ಹದಗೊಳಿಸಿ ತರಕಾರಿ ತೋಟ ನಿರ್ಮಿಸಲಾಗಿದೆ. ಆರಂಭಿಕ ಸಂಪೂರ್ಣ ವೆಚ್ಚವನ್ನು ತಾಪಂ ಭರಿಸಿದೆ. ಆದರೆ ತೋಟದಿಂದ ಬರುವ ಆದಾಯ ವಿಕಲಚೇತನರ ಕೈ ಸೇರಲಿದೆ. ನರೇಗಾದಡಿ ಸಣ್ಣಪುಟ್ಟ ಕೆಲಸ ನಿರ್ವಹಣೆಯನ್ನು ಅವರೇ ಮಾಡಿಕೊಳ್ಳಬೇಕಿದೆ. ಗ್ರಾಮದಲ್ಲೇ 12 ವಿಕಲಚೇತನರನ್ನು ಗುರುತಿಸಿದ್ದು, ಅವರಿಗಾಗಿಯೇ ಈ ಕೈತೋಟ ನಿರ್ಮಿಸಿ ಕೊಟ್ಟಿದೆ. ಅಲ್ಲದೇ, ವಿಚೇತನರಿಗಾಗಿಯೇ ಒಂದು ಸಂಘ ರಚಿಸಿದ್ದು, ಎನ್‌ಆರ್‌ಎಲ್‌ಎಂ ಮೂಲಕವೂ ಸರ್ಕಾರದಿಂದ ಸಾಲ ಸೌಲಭ್ಯ ಕಲ್ಪಿಸಲು ತಾಪಂ ಮುಂದಾಗಿದೆ. ಈಗಾಗಲೇ ವಿಕಲಚೇತನ ಮಹಿಳೆಯರು ಈ ಕೈತೋಟದಲ್ಲಿ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ನೀರು ಹರಿಸುವುದು, ಗಿಡಗಳ ರಕ್ಷಣೆ ಮಾಡಿಕೊಳ್ಳುವುದು, ಅವುಗಳಿಗೆ ಬೇಕಾದ ಗೊಬ್ಬರ ಪೂರೈಸುವ ಕೆಲಸವನ್ನೂ ನೋಡಿಕೊಳ್ಳಬೇಕಿದೆ. ಮೇಲುಸ್ತುವಾರಿಯಾಗಿ ಗ್ರಾಪಂ, ತಾಪಂ ನಿಗಾ ವಹಿಸಲಿದೆ. ವಿಕಲಚೇತನರ ಯಾವುದೇ ವೆಚ್ಚವೂ ಇಲ್ಲಿ ಇರುವುದಿಲ್ಲ. ಆದಾಯ ಮಾತ್ರ ಇವರ ಕೈ ಸೇರಲಿದೆ. ಕೈತೋಟದಲ್ಲಿ ಕೆಲಸ ಮಾಡಿದರೆ ಆ ಕೂಲಿ ಹಣವೂ ವಿಕಲಚೇತನರ ಖಾತೆಗೆ ಜಮೆಯಾಗಲಿದೆ.
ಇದೊಂದು ಪೈಲೆಟ್ ಪ್ರೋಗ್ರಾಮ್: ನರೇಗಾದಡಿ ಈ ರೀತಿ ಸಾಮುದಾಯಿಕ ಗುಂಪಿಗೂ ಕೆಲಸ ನೀಡಲು ಅವಕಾಶವಿದೆ. ಆದರೆ ವಿಕಲಚೇತನ ವ್ಯಕ್ತಿಗಳು ದೂರದ ಸ್ಥಳಕ್ಕೆ ತೆರಳಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಜನರು ದೂರದ ಸ್ಥಳಕ್ಕೆ ಹೋಗಿ ಕೆಲಸ ಮಾಡಲು ಅವಕಾಶವಿರುತ್ತದೆ. ಹಾಗಾಗಿ ಇದೆಲ್ಲವನ್ನು ಅವಲೋಕಿಸಿ ಗಂಗಾವತಿ ತಾಪಂ ವಿಕಲಚೇತನರಿಗೆ ಪ್ರಾಯೋಗಿಕ ಯೋಜನೆ ಆರಂಭಿಸಿದೆ. ಬಹುಪಾಲು ಕೈತೋಟ ನಿರ್ಮಾಣವಾಗಿದೆ. ಅದರಿಂದ ತರಕಾರಿ ಇಳುವರಿ ಬರುವುದು ಬಾಕಿಯಿದೆ. ಆ ಆದಾಯವು ವಿಚೇತನರಿಗೆ ಬರಲಿದೆ. ಈ ಯೋಜನೆ ಯಶಸ್ವಿಯಾದರೆ ಜಿಲ್ಲಾದ್ಯಂತ ವಿವಿಧ ಗ್ರಾಪಂನಲ್ಲಿರುವ ವಿಕಲಚೇನರ ಸಂಖ್ಯೆಗೆ ಅನುಗುಣವಾಗಿ ವಿಸ್ತರಣೆ ಮಾಡಲು ಜಿಪಂ ಚಿಂತನೆ ನಡೆಸಿದೆ.
ವಡ್ಡರಟ್ಟಿ ಗ್ರಾಪಂನಲ್ಲಿ ನರೇಗಾದಡಿ ವಿಚೇತನರಿಗೆ ಸರ್ಕಾರಿ ಜಮೀನಿನಲ್ಲಿ ತರಕಾರಿ ಕೈತೋಟ ನಿರ್ಮಿಸಿಕೊಟ್ಟಿದ್ದೇವೆ. ಆರಂಭಿಕ ವೆಚ್ಚವನ್ನು ನಾವೇ ಭರಿಸಿದ್ದೇವೆ. ತರಕಾರಿ ಮಾರಾಟದಿಂದ ಬರುವ ಆದಾಯವನ್ನು ಅವರಿಗೆ ಸಂಪೂರ್ಣ ಸಿಗಲಿದೆ. ಮುಂದೆ ಬೀಜ ಸೇರಿ ಇತರೆ ವೆಚ್ಚವನ್ನು ಅವರು ನೋಡಿಕೊಳ್ಳಬೇಕಿದೆ. ವಿಚೇತನರ ಗುಂಪು ರಚಿಸಿ ಅವರಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲೂ ಯೋಜಿಸಿದ್ದೇವೆ.
-ಡಾ| ಮೋಹನ್, ಗಂಗಾವತಿ ತಾಪಂ ಇಒ
ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಪಂನಲ್ಲಿ ನರೇಗಾದಡಿ ವಿಕಲಚೇತನರಿಗಾಗಿಯೇ ವಿಶೇಷ ಯೋಜನೆ ರೂಪಿಸಿ ಅವರಿಗೆ ಪೌಷ್ಟಿಕ ಕೈತೋಟ ನಿರ್ಮಿಸಿ ಕೊಡಲಾಗಿದೆ. ವಿಚೇತನರು ಆಸಕ್ತಿಯಿಂದಲೇ ಕೈತೋಟ ನಿರ್ವಹಣೆ ಮಾಡುತ್ತಿದ್ದಾರೆ. ಅದರಿಂದ ಬರುವ ಆದಾಯವೂ ಅವರಿಗೆ ಸಿಗಲಿದೆ. ನರೇಗಾ ಕೂಲಿ ಹಣವು ಅವರಿಗೆ ಜಮೆಯಾಗಲಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಯಶಸ್ವಿಯಾದರೆ ಜಿಲ್ಲಾದ್ಯಂತ ವಿಚೇತನರಿಗೆ ವಿಸ್ತರಣೆ ಮಾಡಲು ಚಿಂತನೆ ನಡೆಸಿದ್ದೇವೆ.
-ಫೌಜಿಯಾ ತರನುಮ್, ಜಿಪಂ ಸಿಇಒ
-ದತ್ತು ಕಮ್ಮಾರ