Advertisement

ಪಿಲಿಕುಳ ನಿಸರ್ಗಧಾಮ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ

12:55 AM Jun 11, 2020 | Sriram |

ಮಹಾನಗರ: ಲಾಕ್‌ಡೌನ್‌ ಸಡಿಲಿಕೆ ಆದ ಹಿನ್ನೆಲೆಯಲ್ಲಿ ಪಿಲಿಕುಳದ ಡಾ| ಶಿವರಾಮ ಕಾರಂತ ನಿಸರ್ಗಧಾಮ ಬುಧವಾರದಿಂದ ಸಾರ್ವಜನಿಕ ಪ್ರವೇಶಕ್ಕೆ ತೆರೆದುಕೊಂಡಿದೆ.

Advertisement

ಪಿಲಿಕುಳದಲ್ಲಿ ಪ್ರವಾಸಿಗರು ತೆರಳುವ ವ್ಯಾಪ್ತಿ ಹಾಗೂ ಪ್ರಾಣಿಗಳ ಆವರಣದ ಹೊರಭಾಗದಲ್ಲಿ ಸ್ಯಾನಿಟೈಸರ್‌ ಮಾಡಿ ಎಚ್ಚರಿಕೆ ಕೈಗೊಳ್ಳಲಾಯಿತು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸ್ಯಾನಿಟೈಸರ್‌ ಮಾಡಲಾಗುತ್ತಿದೆ.

ಬುಧವಾರ ಬೆಳಗ್ಗೆ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಮಳೆ ಇದ್ದ ಕಾರಣ ಮೊದಲ ದಿನ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಕೋವಿಡ್-19 ನಿಯಂತ್ರಣ ಮಾರ್ಗಸೂಚಿಯನ್ನು ಪಾಲಿಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿ ವಿಶೇಷ ಒತ್ತು ನೀಡಲಾಗಿದೆ.

ಪಿಲಿಕುಳ ನಿಸರ್ಗಧಾಮದ ಆಕರ್ಷಣೆ ವೀಕ್ಷಿಸಲು ಭೇಟಿ ನೀಡುವ ಸಮಯದಲ್ಲಿ ಜನರು ಕನಿಷ್ಠ 6 ಅಡಿ ಭೌತಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಸೂಚನೆ ನೀಡಲಾಗುತ್ತಿದೆ. ಮಾಸ್ಕ್ ಧರಿಸದಿದ್ದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಆಗಮಿಸುವ ಎಲ್ಲ ಸಂದರ್ಶಕರನ್ನು ಥರ್ಮಲ್‌ ಸ್ಕ್ಯಾನಿಂಗ್‌ ಮೂಲಕ ತಪಾಸಣೆ ನಡೆಸಿ ದೇಹದ ಉಷ್ಣತೆ ಮಿತಿಗಿಂತ ಹೆಚ್ಚಿದ್ದರೆ ಅಂತಹ ವ್ಯಕ್ತಿಗಳಿಗೆ, ಜ್ವರ, ಕೆಮ್ಮು, ಶೀತ, ಗಂಟಲು ನೋವು ಅಥವಾ ಉಸಿರಾಟದ ತೊಂದರೆ ಇದ್ದವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಪಿಲಿಕುಳ ಮೃಗಾಲಯದ ಪ್ರಮುಖರು ತಿಳಿಸಿದ್ದಾರೆ.

ಮಾಂಸದ ಕೊರತೆ ಈಗ ಇಲ್ಲ!
ಜೈವಿಕ ಉದ್ಯಾನವನದಲ್ಲಿ ಸುಮಾರು 100ಕ್ಕೂ ಹೆಚ್ಚು ಜಾತಿಯ 1,200ರಷ್ಟು ಪ್ರಾಣಿ-ಪಕ್ಷಿಗಳಿವೆ. ಇದರಲ್ಲಿ 13 ಹುಲಿ, 4 ಸಿಂಹ, 12 ಚಿರತೆ, 2 ಕರಡಿ, ಕಾಡುಬೆಕ್ಕು, ಚಿರತೆ ಬೆಕ್ಕು ಸಹಿತ ಹಲವು ಮಾಂಸಾಹಾರಿ ಪ್ರಾಣಿಗಳಿವೆ. ನಿತ್ಯ ಇವುಗಳಿಗೆ ಸುಮಾರು 150 ಕೆ.ಜಿ.ಗಿಂತಲೂ ಹೆಚ್ಚು ವಿವಿಧ ರೀತಿಯ ಮಾಂಸ, ಸುಮಾರು 50 ಕೆ.ಜಿ. ಕೋಳಿ ಮಾಂಸ ಅಗತ್ಯವಿದೆ. ಇದರಲ್ಲಿ ಪ್ರತಿ ಹುಲಿಗೆ ದಿನಕ್ಕೆ 8ರಿಂದ 10 ಕಿಲೋ ಮಾಂಸ ಅಗತ್ಯವಿದೆ. ಇದನ್ನು ಪ್ರತಿದಿನ ಆಡಳಿತ ಮಂಡಳಿಯು ಟೆಂಡರ್‌ ಪಡೆದವರಿಂದ ತರಿಸುತ್ತದೆ. ಆದರೆ ದೇಶಾದ್ಯಂತ ಲಾಕ್‌ಡೌನ್‌ ಆದ ಬಳಿಕ ಇಲ್ಲಿನ ಪ್ರಾಣಿಗಳಿಗೆ ಮಾಂಸದ ಕೊರತೆ ಎದುರಾಗಿತ್ತು. ಬದಲಾಗಿ ಕೋಳಿ ಮಾಂಸ ಕೆಲವು ಸಮಯ ನೀಡಲಾಗಿತ್ತು. ಲಾಕ್‌ಡೌನ್‌ ಸಡಿಲಿಕೆ ಆದ ಹಿನ್ನೆಲೆಯಲ್ಲಿ ಈ ಸಮಸ್ಯೆ ಈಗ ನಿವಾರಣೆಯಾಗಿದೆ.

Advertisement

ತಾರಾಲಯಕ್ಕೆ ಪ್ರವೇಶವಿಲ್ಲ
ಪಿಲಿಕುಳದ ಜೈವಿಕ ಉದ್ಯಾನ, ಲೇಕ್‌ ಗಾರ್ಡನ್‌, ಸಂಸ್ಕೃತಿ ಗ್ರಾಮ, ಆಬೋìರೇಟಮ್‌ ಮತ್ತು ಗುತ್ತು ಮನೆಯ ಆಕರ್ಷಣೆಗಳನ್ನು ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಸದ್ಯ ತೆರೆಯಲಾಗಿದೆ. ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯಗಳಿಗೆ ಸದ್ಯಕ್ಕೆ ಸಾರ್ವಜನಿಕ ಪ್ರವೇಶವಿಲ್ಲ.

 ಸುರಕ್ಷತೆಗೆ ಕ್ರಮ
ಪಿಲಿಕುಳದ ಡಾ| ಶಿವರಾಮ ಕಾರಂತ ನಿಸರ್ಗಧಾಮ ಬುಧವಾರದಿಂದ ಸಾರ್ವಜನಿಕ ಪ್ರವೇಶಕ್ಕೆ ತೆರೆದುಕೊಂಡಿದೆ. ಪ್ರವಾಸಿಗರ ಆರೋಗ್ಯ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸರದಲ್ಲಿ ಪ್ರತಿದಿನ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಎಲ್ಲ ಪ್ರವಾಸಿಗರು ಮಾಸ್ಕ್ ಧರಿಸಿಕೊಂಡು ಬರಬೇಕು.
-ಎಚ್‌.ಜಯಪ್ರಕಾಶ್‌ ಭಂಡಾರಿ
ನಿರ್ದೇಶಕ, ಪಿಲಿ ಕುಳ ಜೈವಿಕ ಉದ್ಯಾನವನ

Advertisement

Udayavani is now on Telegram. Click here to join our channel and stay updated with the latest news.

Next