Advertisement

ಧರ್ಮನಿಷ್ಠೆಯೂ ಲೋಕ ಜ್ಞಾನವೂ…

12:52 AM Nov 11, 2021 | Team Udayavani |

ಮಾನವ ಸಂಬಂಧಗಳ ಪ್ರಾಮುಖ್ಯ ಲೋಕಜ್ಞಾನದ ವ್ಯಾಖ್ಯಾನದ ಚೌಕಟ್ಟಿ ನೊಳಗೆ ಬರುತ್ತದೆ. ನಾವು ಹೆಚ್ಚೆಚ್ಚು ವ್ಯಾಪಕವಾಗಿ ತೆರೆದುಕೊಳ್ಳುತ್ತಾ ಹೋಗುವಾಗ ವಿವಿಧ ಜಾತಿ, ಮತ, ಕುಲ, ಗೋತ್ರಗಳ ಜನರೊಡನೆ ಬೆರೆತಾಗ, ಮತ್ತು ಅನ್ಯಾನ್ಯ ಭಾಷೆ ಮತ್ತು ಸಂಸ್ಕೃತಿಗಳ ಒಳಹೊಕ್ಕು ಬಂದಾಗ, ಮಾನವ ಸಂಬಂಧಗಳು ಹೇಗೆ ನಮ್ಮ ಬದುಕನ್ನು ಸರ್ವಾಂಗ ಸುಂದರವಾಗಿ ರೂಪಿಸಿ ಕೊಡಬಲ್ಲವು ಎಂಬ ಅರಿವು ಮೂಡುತ್ತದೆ. ಸಾಧನೆಗಳ ಹಾದಿಗಳು ನೂರೆಂಟಿದ್ದರೂ ಅವು ಎಲ್ಲರಿಗೂ ಅರ್ಥವಾಗುವುದೂ ಇಲ್ಲ.

Advertisement

ಸೋಗಿನ ಮತ್ತು ಆಡಂಬರದ ಧರ್ಮನಿಷ್ಠೆ ಯವರೇ ತುಂಬಿರುವ ಇಂದಿನ ಸಮಾಜದಲ್ಲಿ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಸ್ತರಗಳಲ್ಲಿ ನೈತಿಕತೆ ಕರ್ತವ್ಯದ ಮಟ್ಟದಿಂದ ಪ್ರಚಾರದ ಮಟ್ಟಕ್ಕಿಳಿದಿರುವುದು ನಿಜಕ್ಕೂ ದುರಂತದ ಸಂಗತಿ. ಧರ್ಮನಿಷ್ಠೆಯಿಲ್ಲದ ಲೋಕಜ್ಞಾನ ಅಪ್ರಾಯೋಗಿಕ ಸರಕಾದರೆ ಲೋಕಜ್ಞಾನವಿಲ್ಲದ ಧರ್ಮನಿಷ್ಠೆ ತನ್ನದೇ ಪರಿಧಿಯೊಳಗೆ ಕೂಪಮಂಡೂಕಗಳನ್ನು ಸೃಷ್ಟಿಸಿ ವ್ಯಕ್ತಿತ್ವ ವಿಕಾಸದ ಎಲ್ಲ ಹಾದಿಗಳನ್ನು ಮುಚ್ಚಿಬಿಡಬಹುದು. ಆಗ ನಾನು ಹೇಳಿದ್ದೇ ಸರಿ; ನಾನು ಸುರಿಸಿದ್ದೇ ತೀರ್ಥ ಎಂಬ ವಾದ ಮೆರೆಯುತ್ತದೆ. ಮಾನವನ ಸಾಂ ಕ ಬದುಕಿನ ನೆಮ್ಮದಿ ಮತ್ತು ಸಂತೋಷ ಹಾಳಾಗುತ್ತದೆ.

ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಧರ್ಮ ನಿಷ್ಠೆಯ ಕೆಲಸ. ಅದು ಕರ್ತವ್ಯವೂ ಹೌದು. ಆದರೆ ಅದಕ್ಕೆ ಈಗ ಪ್ರಚಾರದ ಬಣ್ಣ ಮೆತ್ತಿಕೊಂಡಿದೆ. ವಾರ್ಷಿಕವಾಗಿ ನಿರ್ದಿಷ್ಟ ದಿನವೊಂದು ನಿಗದಿ ಯಾಗಿದೆ. ಅಪ್ಪಂದಿರ ದಿನ, ಅಮ್ಮಂದಿರ ದಿನ, ಮಗಳಂದಿರ ದಿನ. ಹೀಗೆ ಎಲ್ಲದಕ್ಕೂ ಎಲ್ಲರಿಗೂ ಒಂದೊಂದು ಪ್ರತ್ಯೇಕ ದಿನ. ಆ ದಿನಗಳಲ್ಲಿ ಮಾತ್ರ ಪ್ರಶಂಸೆಗಳ ಸುರಿಮಳೆ. ಒಳಿತಾಗಲೆಂಬ ಹಾರೈಕೆ. ಶಿಕ್ಷಕರ ದಿನದ ಹಾಗೆ. ಒಳ್ಳೆಯ ಒಂದೆರಡು ಮಾತು ಕೇಳಿಸಿಕೊಳ್ಳುವ ಸುಯೋಗ ಶಿಕ್ಷಕರಿಗೆ ಒದಗಿ ಬರುವುದು ಸೆಪ್ಟಂಬರ್‌ 5ರಂದು ಮಾತ್ರ. ಪ್ರತಿಯೊಬ್ಬರು ಅವರವರ ದಿನಕ್ಕಾಗಿ ಕಾದು ಅಂದಿನ ಮಟ್ಟಿಗಾದರೂ ಬೆನ್ನು ತಟ್ಟಿಕೊಳ್ಳುವ ಸೌಭಾಗ್ಯದ ಮುದ ಪಡೆದು ಧನ್ಯರೆನಿಸಿಕೊಳ್ಳುವ ಕಾಲ ಇದು.
ಮಾನವ ಸಂಬಂಧಗಳ ಪ್ರಾಮುಖ್ಯ ನನ್ನ

ಮಟ್ಟಿಗೆ ಲೋಕಜ್ಞಾನದ ವ್ಯಾಖ್ಯಾನದ ಚೌಕಟ್ಟಿ ನೊಳಗೆ ಬರುತ್ತದೆ. ನಾವು ಹೆಚ್ಚೆಚ್ಚು ವ್ಯಾಪಕವಾಗಿ ತೆರೆದುಕೊಳ್ಳುತ್ತಾ ಹೋಗುವಾಗ ವಿವಿಧ ಜಾತಿ, ಮತ, ಕುಲ, ಗೋತ್ರಗಳ ಜನರೊಡನೆ ಬೆರೆತಾಗ, ಮತ್ತು ಅನ್ಯಾನ್ಯ ಭಾಷೆ ಮತ್ತು ಸಂಸ್ಕೃತಿಗಳ ಒಳಹೊಕ್ಕು ಬಂದಾಗ, ಮಾನವ ಸಂಬಂಧಗಳು ಹೇಗೆ ನಮ್ಮ ಬದುಕನ್ನು ಸರ್ವಾಂಗ ಸುಂದರವಾಗಿ ರೂಪಿಸಿ ಕೊಡಬಲ್ಲವು ಎಂಬ ಅರಿವು ಮೂಡುತ್ತದೆ. ಕೂಪ ಮಂಡೂಕ ಗಳಾಗಿಯೇ ಇದ್ದರೆ ನಾವು ಸ್ವತಃ ಮಾನವರೆಂಬುದನ್ನೇ ಮರೆಸಿ ಬಿಡುವ, ನಮಗೆ ನಮ್ಮ ಬದುಕು ಮಾತ್ರ ಮುಖ್ಯ ಎಂಬ ಧೋರಣೆ ಯನ್ನು ಬಿಂಬಿಸುವ, ಸಂಕುಚಿತ ಮನಸ್ಸು “ಕ್ಯಾರೇ’ ಎನ್ನದ ರೀತಿಯಲ್ಲಿ ಎಲ್ಲವನ್ನೂ ಕುಲಗೆಡಿಸಿಬಿಡಬಹುದು. ಆಧುನಿಕ ಬದುಕು ಹಗ್ಗದ ಮೇಲಿನ ನಡಿಗೆಯಂತೆ. ಎಲ್ಲವೂ ಅನಿಶ್ಚಿತ. ಗುರಿಮುಟ್ಟುವ ಭರವಸೆಯೂ ಇಲ್ಲ. ಸಾಧನೆಗಳ ಹಾದಿಗಳು ನೂರೆಂಟಿದ್ದರೂ ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವ ಅನಿವಾರ್ಯತೆ ಎಲ್ಲರಿಗೂ ಅರ್ಥವಾಗುವುದೂ ಇಲ್ಲ. ಸಾಧ್ಯವಾಗುವುದೂ ಇಲ್ಲ.

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು. ಈ ಕವಿವಾಣಿ ಸಾರ್ವಕಾಲಿಕ ಸತ್ಯವೊಂದನ್ನು ತೆರೆದಿಡುತ್ತದೆ. ಯಾರೊಡನೆ ಎಲ್ಲಿ, ಹೇಗೆ, ಯಾಕೆ ಇರಬೇಕು ಎಂಬುದನ್ನು ಕಲಿಯುವ ವ್ಯವಧಾನವಿಲ್ಲದ ಮನುಷ್ಯ ನಡೆಯುವಾಗ ಎಡತಾಕುವ ಕಲ್ಲಿನಂತೆ. ಕಾಲಿಗೆ ನೋವಾದಾಗ ತಾಳ್ಮೆ ಗೆಟ್ಟು ಕಲ್ಲನ್ನು ಎತ್ತಿ ಬಿಸಾಕಿ ಬಿಡುತ್ತೇವೆ-ಮತ್ತೆಂದೂ ಅದು ನಮ್ಮ ಬದುಕಿನ ಹಾದಿಗೆ ಅಡ್ಡ ಬರಬಾರದು ಎಂಬ ರೀತಿಯಲ್ಲಿ. ಹೌದು. ನಾವೆಂದೂ ಇತರರಿಗೆ ನೋವುಂಟುಮಾಡುವ ಕೊರಕಲು ಹಾದಿಗಲ್ಲುಗಳಾಗಬಾರದೆಂಬ ಎಚ್ಚರಿಕೆ ಬೇಕು. ಹಾಗೇನಾದರೂ ಆದರೆ ಮತ್ತೆ ನಮ್ಮನ್ನು ಮೂಸಿ ನೋಡುವವರು ಯಾರೂ ಇರಲಾರರು.

Advertisement

ಇದನ್ನೂ ಓದಿ:ಐಎನ್‌ಕ್ಸ್‌ ಮೀಡಿಯಾ ಪ್ರಕರಣ: ದಾಖಲೆ ಪರಿಶೀಲಿಸಲು ಚಿದು, ಪುತ್ರಗೆ ಅವಕಾಶ

ಮಾತೆತ್ತಿದರೆ ಸಾಕು, ನಾವು ನಮ್ಮ ಸಂಬಂಧಗಳ ನಿಕಟತೆಯ ಬಗ್ಗೆ ಅಭಿಮಾನಪಟ್ಟು ಅಷ್ಟುದ್ದ ನಾಲಗೆ ಹರಿಯಬಿಡುತ್ತೇವೆ. ಈ ನಿಕಟತೆ ರಕ್ತ ಮುಖೇನ ದೊರೆಯುವ ಬಂಧುತ್ವಕ್ಕಿಂತ ಹೃದಯ, ಆತ್ಮ ಮತ್ತು ಮನಸ್ಸಿಗೆ ಹತ್ತಿರವಾಗಿರಬೇಕು. ನೆರೆಹೊರೆ ಚೆನ್ನಾಗಿರಬೇಕು ಎನ್ನುವವರೇ ಗಡಿ ಪ್ರದೇಶಗಳಲ್ಲಿ ಆತಂಕ ಸೃಷ್ಟಿಸುತ್ತಾರೆ. ಹಿಂದೂಸ್ಥಾನದ ಏಳಿಗೆಗೆ ಹಿಂದೂಗಳೇ ಅಡ್ಡಿಯಾಗಿದ್ದಾರೆ. ದೇವರು ನಮ್ಮನ್ನು ಚೆನ್ನಾಗಿ ಇಟ್ಟಿರಲಿ ಎಂದು ಹಾರೈಸಿ ಪಾರಾಯಣ ಪಠnಗಳಲ್ಲಿ ತೊಡಗಿಕೊಳ್ಳುತ್ತೇವೆ. ಹೋಮ ಹವನಾದಿಗಳಿಗೆ ದುಡ್ಡು ಸುರಿಯುತ್ತೇವೆ. ಆದರೆ ನಾವೆಲ್ಲರೂ ಒಂದೇ ಎನ್ನುವ ಅನನ್ಯ ಪ್ರೀತಿಯ ಭಾವನೆ ಹೃದಯ ಬಗೆದು ತಡಕಾಡಿದರೂ ಎಳ್ಳುಕಾಳಷ್ಟೂ ದೊರೆಯುವುದಿಲ್ಲ. ಇಂತಹ ಧರ್ಮನಿಷ್ಠೆಯಿಂದ ನಮ್ಮ ವ್ಯಕ್ತಿತ್ವವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಮಾತ್ರವಲ್ಲ, ನಮ್ಮ ಮನೆಗೆ ನಾವೇ ಮಾರಿಗಳಾಗುವ ಸಾಧ್ಯತೆಗಳೇ ಹೆಚ್ಚು.

ಒಳ್ಳೆಯ ಮನುಷ್ಯರಾಗಬೇಕಾದರೆ ಪೂಜೆ ಪುನಸ್ಕಾರಗಳಿಗಿಂತ ನಾವಾಡುವ ಮಾತು, ತೋರುವ ಪ್ರೀತಿ, ಬೆರೆಯುವ ಕ್ರಮ, ನಂಜಿಲ್ಲದ ನಡೆನುಡಿ, ಎಲ್ಲರೊಡನೆ ಒಂದಾಗುವ ಔದಾರ್ಯ, ಸಕಲರಿಗೆ ಲೇಸನೇ ಬಯಸುವ ಹೃದಯ ವೈಶಾಲ್ಯ, ನಾನು ಎಂಬುದನ್ನು ಬಿಟ್ಟು ಅಹಂಭಾವದಿಂದ ಅನುನಯದೆಡೆಗೆ ಸಾಗುವ ಹಪಹಪಿ ಇವೆಲ್ಲವೂ ಇದ್ದರೆ “ಅಹಂ ಬ್ರಹ್ಮಾಸ್ಮಿ’. ಎದುರಿಗೊಂದು ಬೆನ್ನಿಗೊಂದು ಮಾತನಾಡುವುದಾದರೆ ರಕ್ಕಸರಿಗೂ ಮಾನವರೆಂದು ಕರೆಸಿಕೊಳ್ಳುವ ನಮಗೂ ಏನು ವ್ಯತ್ಯಾಸ ಉಳಿಯಿತು? ಪಾಕಿಸ್ಥಾನ ಮತ್ತು ಭಾರತವನ್ನು ಹೋಲಿಸಲಾದೀತೇ? ಎತ್ತಣ ಮಾಮರ ಎತ್ತಣ ಕೋಗಿಲೆ?’When you do not want to be troubled, you have no right to trouble others’.

ತೊಂದರೆ, ಅನ್ಯಾಯ, ಹಿಂಸೆ ಆಗಬಾರದು ಎಂದು ಬಯಸುವ ನಮಗೆ ಬೇರೆಯವರಿಗೆ ತೊಂದರೆ ಕೊಡುವ, ಅನ್ಯಾಯವನ್ನುಂಟುಮಾಡುವ ಅಥವಾ ಹಿಂಸೆ ನೀಡುವ ಅಧಿಕಾರವಿಲ್ಲ. ಇದು ಲೋಕ ಜ್ಞಾನ. ಈ ವಿಚಾರ ಅರ್ಥವಾಗುವುದು ಲೋಕಕ್ಕೆ ನಮ್ಮನ್ನು ನಾವು ತೆರೆದುಕೊಂಡಾಗ ಮಾತ್ರ. ಅಲ್ಲಿನ ಅನುಭವ ಸಿಕ್ಕಾಗ ಮಾತ್ರ. ನಾವು ಸಂಘಜೀವಿಗಳು. ನಮಗೆ ಎಲ್ಲರೂ ಬೇಕು. ನೀನು ನಾನೆಂಬ ತರತಮ ಭಾವ ಬೇಡ. ಪ್ರೀತಿಗೆ ಮಾತ್ರ ಹೃದಯಗಳನ್ನು ಗೆಲ್ಲುವ ಪವಾಡ ಮಾಡುವುದು ಸಾಧ್ಯ. ಬೇರೆಯವರನ್ನು ನೋಯಿಸುವುದರಿಂದ ನಮಗೇನೂ ಲಾಭವಿಲ್ಲ. ನಾವು ಮಾಡಿದ್ದು ಎನ್ನುವುದಕ್ಕೆ ಇಲ್ಲಿ ಏನಿದೆ ಹೇಳಿ? ಪೂಜಾನಿರತ ವ್ಯಕ್ತಿ ಮಂತ್ರಗಳ ಜತೆ ಜತೆಗೆ ಹೊರಗೆ ಅಂಗಳದಲ್ಲಿ ಬೊಗಳಿಕೊಂಡು ರಗಳೆ ಕೊಡುವ ನಾಯಿಯನ್ನು ಅವಾಚ್ಯವಾಗಿ ಬೈಯುತ್ತಾ ದೇವರಿಗೆ ಆರತಿ ಎತ್ತಿದರೆ ಹೇಗಿರುತ್ತದೆ? ಧರ್ಮನಿಷ್ಠೆ ನಮಗೆ ನಿಯತ್ತನ್ನು ಕಲಿಸಬೇಕು. ಒಳ್ಳೆಯ ಮಾತುಗಾರಿಕೆಯನ್ನು ಕಲಿಸಬೇಕು. ಲೋಕಾನುಭವ ಸುಮಧುರ ಬಾಂಧವ್ಯದ ಹೆಚ್ಚುಗಾರಿಕೆಯನ್ನು ಉಣಬಡಿಸಬೇಕು. ಇಂದಿನ ಪರಿಸ್ಥಿತಿ ಇವೆರಡರಿಂದ ದೂರ, ಬಹುದೂರ ನಮ್ಮನ್ನು ಕೊಂಡೊಯ್ಯುತ್ತಿದೆ.

ಈ ವಿಚಾರವಾಗಿ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೃದಯದಾಳದಿಂದ ಆಡಿದ ಮಾತಿನ ಸಾರವನ್ನು ಇಲ್ಲಿ ಉಲ್ಲೇಖಿಸುವುದು ಹೆಚ್ಚು ಪ್ರಸ್ತುತವೆನಿಸುತ್ತದೆ:

“ನಾನು ಪ್ರಾಮಾಣಿಕ ಮನಸ್ಸಿನಿಂದ ಟೀಕಾಕಾರ ರನ್ನು ಗೌರವಿಸುತ್ತೇನೆ. ಆದರೆ ದುರದೃಷ್ಟವಶಾತ್‌, ರಚನಾತ್ಮಕ ಟೀಕಾಕಾರರ ಸಂಖ್ಯೆ ಬಹಳ ಕಡಿಮೆ ಯಿದೆ. ಕೇವಲ ಆರೋಪಗಳನ್ನು ಮಾಡುವವರು, ಪೂರ್ವಾಗ್ರಹಪೀಡಿತರಾಗಿ ಟೀಕಿಸುವವರೇ ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಟೀಕೆ ಮಾಡುವವರು ಸಾಕಷ್ಟು ಅಧ್ಯಯನ, ಸಂಶೋಧನೆ ನಡೆಸದೆ ಹಾಗೆ ಮಾತನಾಡುತ್ತಾರೆ. ಆದರೆ ಈಗಿನ ಧಾವಂತದ ಜಗತ್ತಿನಲ್ಲಿ ಅಷ್ಟೆಲ್ಲ ಮಾಡಲು ಯಾರೂ ಹೋಗುವುದಿಲ್ಲ. ಲಂಗುಲಗಾಮಿಲ್ಲದೆ ಸೀದಾ ಮಾತನಾಡುತ್ತಾರೆ. ಪೂರ್ವಾಗ್ರಹ ಇಟ್ಟುಕೊಂಡೇ ಜನರನ್ನು ಅಳೆಯುತ್ತಾರೆ. ನೀವು ಅವರನ್ನು ಮಾತನಾಡಿಸಿ ಅವರಲ್ಲಿರುವ ವಿಶೇಷ ಗುಣ ಗಳನ್ನು ಅರಿತುಕೊಂಡರೂ ಅದನ್ನು ಸ್ವೀಕರಿಸಲು ನಿಮ್ಮ ಅಹಂ ಬಿಡುವುದಿಲ್ಲ. ಮುಂದೊಂದು ಹಿಂದೊಂದು ಮಾತನಾಡುವುದು ಕೆಲವರಿಗೆ ಹುಟ್ಟುಗುಣವಾಗಿಬಿಟ್ಟಿದೆ’.

ಧರ್ಮನಿಷ್ಠೆ ಮತ್ತು ಲೋಕಜ್ಞಾನ ಮೇಳೈಸಿದರೆ ಇಂಥ ಟೀಕಾಕಾರರ ಸಂಖ್ಯೆ ಕಡಿಮೆಯಾಗಬಹುದು. ಹೋದಲ್ಲಿ ಬಂದಲ್ಲಿ ಪ್ರೀತಿಯಿಂದ ಮಾತನಾಡಿಸು ವವರ ಸಂಖ್ಯೆ ಹೆಚ್ಚಾಗಬಹುದು. ವ್ಯಕ್ತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವನನ್ನು ಗೌರವ ಭಾವದಿಂದ ಕಾಣುವ ಮನಸ್ಸು ಮೂಡಬಹುದು.

ಅದು ದೇಶಕ್ಕೂ ಒಳ್ಳೆಯದು. ವ್ಯಕ್ತಿಗೂ ಒಳ್ಳೆಯದು.ಎಲ್ಲರ ಬದುಕಿನಲ್ಲೂ ಅಂತಹ ದಿನವೊಂದು ಬರಲಿ ಎಂದು ಹಾರೈಸೋಣ.

-ರಾಮಭಟ್ಟ ಸಜಂಗದ್ದೆ, ಬಾರಕೂರು

Advertisement

Udayavani is now on Telegram. Click here to join our channel and stay updated with the latest news.

Next