ಬೆಂಗಳೂರು: ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ರೈಲು ಸೇವೆಗೆ ವರ್ಷಗಳಾದರೂ ನಿರೀಕ್ಷಿತ ಸ್ಪಂದನೆ ವ್ಯಕ್ತ ವಾಗದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮನೆಗಳಿಂದಲೇ ಪ್ರಯಾಣಿಕರನ್ನು “ಪಿಕ್‌ಅಪ್’ ಮಾಡಲು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಚಿಂತನೆ ನಡೆಸಿದೆ.
ವಿಮಾನ ನಿಲ್ದಾಣ ಹಾಲ್ಟ್ಸ್ಟೇಷನ್‌ಗೆ ಬಂದಿಳಿ ಯುವ ಪ್ರಯಾಣಿಕರಿಗೆ ಅಲ್ಲಿಂದ ನಿಲ್ದಾಣಕ್ಕೆ ತೆರಳಲು ಶೆಟಲ್ ಸೇವೆಗಳನ್ನು ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲಿ ಯಶವಂತಪುರ, ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಗಳಿಂದ ಹೊರಡುವ ಪ್ರಯಾಣಿಕರಿಗೂ “ಪಿಕ್ ಅಪ್’ ಮತ್ತು “ಡ್ರಾಪ್’ ಸೇವೆಗಳನ್ನು ಒದಗಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಪ್ರಯಾಣಿಕರು ಲಗೇಜು ಗಳನ್ನು ಹೊತ್ತು ಬಸ್ ಅಥವಾ ಮೆಟ್ರೋ ಸೇರಿ ದಂತೆ ವಿವಿಧ ಮಾದರಿಯ ವಾಹನಗಳ ಮೂಲಕ ರೈಲು ನಿಲ್ದಾಣಗಳಿಗೆ ಬಂದು, ಅಲ್ಲಿಂದ ವಿಮಾನ ನಿಲ್ದಾಣದ ಹಾಲ್ಟ್ಸ್ಟೇಷನ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಈಗಾಗಲೇ ಇರುವ ಓಲಾ, ಉಬರ್ ಮತ್ತಿ ತರ ಆ್ಯಪ್ ಆಧಾರಿತ ಕ್ಯಾಬ್‌ಗಳು ಪ್ರಯಾಣಿಕರನ್ನು ಹೊತ್ತುತರುತ್ತಿವೆ. ಇದೇ ರೀತಿ, ಸ್ವತಃ ರೈಲ್ವೆಯು ಪ್ರಯಾಣಿಕರನ್ನು ಕರೆತರಲು ಸಾಧ್ಯವಿದೆ. ಇದಕ್ಕೆ ಪೂರಕವಾದ ತಂತ್ರಜ್ಞಾನದ ನೆರವಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಹೆಸರು ಹೇಳ ಲಿಚ್ಛಿಸದ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (ಯುಟಿಎಸ್) ಆ್ಯಪ್ ಇದೆ. ಅದರ ಬಗ್ಗೆ ಇನ್ನಷ್ಟು ಜನರಿಗೆ ಮಾಹಿತಿ ನೀಡುವುದು. ಅದೇ ವೇದಿಕೆಯಲ್ಲಿ ಅಥವಾ ಈಗಾಗಲೇ ಇರುವ ಅಗ್ರಿಗೇಟರ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಆ ಮೂಲಕ ಪ್ರಯಾಣಿಕರನ್ನು ಪಿಕ್‌ಅಪ್ ಮಾಡಲು ಅವಕಾಶಗಳಿವೆ. ಇದರಿಂದ ಪ್ರಯಾಣಿಕರಿಗೂ ಅನುಕೂಲ ಆಗುತ್ತದೆ. ಜತೆಗೆ ರೈಲ್ವೆಗೆ ಆದಾಯವೂ ಬರುತ್ತದೆ. ಸಾಧ್ಯವಾದರೆ ಲಗೇಜುಗಳನ್ನು ರೈಲಿ ನಿಂದ ಇಳಿಯುವಷ್ಟರಲ್ಲಿ ಚೆಕ್‌ಇನ್ ಮಾಡಿ, ಪ್ರಯಾಣಿಕರಿಗೆ ಮತ್ತಷ್ಟು ಸುಲಲಿತ ಪ್ರಯಾಣಿಕ್ಕೆ ಅವ ಕಾಶ ಮಾಡಿಕೊಡಬಹುದೇ ಎಂಬುದರ ಬಗ್ಗೆಯೂ ಚಿಂತನೆ ಇದೆ. ಆದರೆ, ಈ ಯೋಚನೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಪ್ರಸ್ತಾವನೆಯ ಚರ್ಚೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.
8 ರೈಲು18 ಪ್ರಯಾಣಿಕರು! : ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್ಸ್ಟೇಷನ್‌ಗೆ ರೈಲು ಸೇವೆ ಆರಂಭಗೊಂಡು ಎರಡು ವರ್ಷಗಳಾಗು ತ್ತಿದ್ದರೂ (2022ರ ಸೆ. 29ರಂದು 8 ರೈಲು ಸೇವೆ ಆರಂಭಿಸಲಾಗಿದೆ), ನಿತ್ಯ ಸಂಚರಿಸುವ ಪ್ರಯಾ ಣಿಕರ ಸಂಖ್ಯೆ ಸರಾಸರಿ ಎರಡಂಕಿಯೂ ದಾಟು ತ್ತಿಲ್ಲ. ಇದು ರೈಲ್ವೆ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಉದ್ದೇಶಿತ ಈ ಮಾರ್ಗದಲ್ಲಿ ದಿನಕ್ಕೆ ಒಟ್ಟಾ ರೆ 8 ಮೆಮು ರೈಲುಗಳು ಸಂಚರಿ ಸುತ್ತಿದ್ದು, ಅಷ್ಟೂ ರೈಲುಗಳಲ್ಲಿ ದಿನಕ್ಕೆ ಸರಾಸರಿ 18 ಜನ ಪ್ರಯಾಣಿಸುತ್ತಿದ್ದಾರೆ.
ಸಿಟಿಜನ್ ರ್ಫಾ ಸಿಟಿಜನ್ (ಸಿ4ಸಿ) ಸಂಘ ಟನೆ ಮಾಡಿರುವ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ವಿಮಾನ ನಿಲ್ದಾಣದ ಕಡೆಗೆ ಸರಾಸರಿ 18 ಜನ ಮತ್ತು ವಿಮಾನ ನಿಲ್ದಾಣದ ಕಡೆಯಿಂದ ಬೆಂಗಳೂರಿಗೆ 14 ಜನ ಪ್ರಯಾಣ ಮಾಡುತ್ತಿದ್ದಾರೆ. ಕೆಲವು ದಿನ ಒಬ್ಬರೂ ಪ್ರಯಾಣಿಕರಿಲ್ಲದೆ ರೈಲು ಸಂಚರಿಸಿದ ಉದಾಹರಣೆಯೂ ಇದೆ ಎಂದು ಸಮೀಕ್ಷೆ ತಿಳಿಸಿದೆ.
ರೈಲು ಇಳಿದು ಬಸ್ ಹತ್ತಿ ಹೋಗುವುದು ಪ್ರಯಾಣಿಕರಿಗೆ ಕಿರಿಕಿರಿ ಎನಿಸುತ್ತಿದೆ. ಆದ್ದರಿಂ ದಲೇ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಉದ್ಯೋಗಿಗಳೂ ರೈಲುಗಳನ್ನು ಬಳಸುತ್ತಿಲ್ಲ. ನಿಲುಗಡೆ ತಾಣದಲ್ಲಿ ಇಳಿಯುವ ಪ್ರಯಾಣಿಕ ರನ್ನು ಕರೆದೊಯ್ಯಲು ಬಸ್‌ಗಳ ವ್ಯವಸ್ಥೆಯನ್ನೂ ಬಿಐಎಎಲ್ ಮಾಡಿದೆ. ಆದರೂ, ಪ್ರಯಾಣಿಕರ ರೈಲುಗಳನ್ನು ಹತ್ತಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಿ4ಸಿ ಸಂಸ್ಥಾಪಕ ರಾಜಕುಮಾರ್ ದುಗರ್ ಬೇಸರ ವ್ಯಕ್ತಪಡಿಸುತ್ತಾರೆ.
-ವಿಜಯಕುಮಾರ ಚಂದರಗಿ