Advertisement
ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ವಂಚನೆ ಮತ್ತು ದುರುಪಯೋಗ ವಿಭಾಗದ ಅಧಿಕಾರಿಗಳ ತನಿಖೆಯಲ್ಲಿ ಈ ಅಂಶ ಬೆಳಕಿಗೆಬಂದಿದ್ದು, ಅನಧಿಕೃತ ಸಾಫ್ಟ್ವೇರ್‌ಗಳನ್ನು ಬಳಸಿಕೊಂಡು ನಕಲಿ ಪ್ರಮಾಣ ಪತ್ರ ನೀಡುತ್ತಿರುವುದು ಹಾಗೂ ಸರ್ಕಾರದ ಅಧಿಕೃತ ಹಾಲೋಗ್ರಾಂಗಳನ್ನು ನಕಲು ಮಾಡುತ್ತಿರುವುದು ಕಂಡುಬಂದಿದೆ. ಈಗಾಗಲೇ ವಾಹನಗಳದಟ್ಟಣೆಯಿಂದ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಮಧ್ಯೆ ನಕಲಿ ಪ್ರಮಾಣಪತ್ರದ ಹಾವಳಿಯು ಮತ್ತಷ್ಟು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
Related Articles
Advertisement
ಆದರೆ, ಕೆಲ ವ್ಯಕ್ತಿಗಳು ಸಾರಿಗೆ ಇಲಾಖೆಯನ್ನು ಸಂಪರ್ಕಿಸದೆ ನೇರವಾಗಿ ಕೇಂದ್ರಗಳನ್ನು ತೆರೆದು, ಖಾಸಗಿ ಕಂಪನಿಯ ಯಂತ್ರೋಪಕರಣಗಳನ್ನು ಬಳಸಿಕೊಂಡು, ಇಲಾಖೆಯ ಸಾಫ್ಟ್ವೇರ್ ಮಾದರಿಯ ನಕಲಿ ಸಾಫ್ಟ್ವೇರ್‌ಗಳನ್ನು ಕಂಪ್ಯೂಟರ್‌ಗೆ ಅಳವಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಕಲಿ ಹಾಲೋಗ್ರಾಂಗಳನ್ನು ತಾವೇ ಸಿದ್ಧಪಡಿಸಿಕೊಂಡು ನಕಲಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿದ್ದಾರೆ ಎಂಬುದು ತನಿಖೆ ವೇಳೆ ಬಯಲಾಗಿದೆ.
ಡಿಸೇಲ್ ವಾಹನಗಳು 60ರಿಂದ 65 ಹ್ಯಾಟ್ರಿಡ್ಜ್ ಸ್ಮೋಕ್ ಯೂನಿಟ್(ಎಚ್‌ಎಸ್‌ಯು) ಇರಬೇಕು. ಪೆಟ್ರೋಲ್ ವಾಹನಗಳು “ಸಿ ಓ’ (ಕಾರ್ಬನ್ ಮೊನಾಕ್ಸೈಡ್) ಇಂತಿಷ್ಟು ಪ್ರಮಾಣದಲ್ಲಿ ಇರಬೇಕು ಎಂಬ ನಿಯಮ ಇದೆ. ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ದಂಧೆಕೋರರು ಹೆಚ್ಚು ವಿಷಯುಕ್ತ ಹೊಗೆ ಉಗುಳುವ ವಾಹನಗಳಿಗೂ ದೃಢಿಕೃತ ಪ್ರಮಾಣ ಪತ್ರ ವಿತರಣೆ ಮಾಡುತ್ತಿದ್ದಾರೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದರು.
ಪರಿಶೀಲನೆ ಹೀಗೆ: ಪರೀಕ್ಷಾ ಕೇಂದ್ರಗಳ ವಿರುದ್ಧ ಆರೋಪ ಕೇಳಿ ಬಂದ ಕೂಡಲೇ ದಾಳಿ ನಡೆಸಲಾಗುತ್ತಿತ್ತು. ಆದರೆ, ಕಳೆದೊಂದು ದಶಕಗಳಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ವಾಹನ ಅಥವಾ ಮಾಲಿನ್ಯ ಪರೀಕ್ಷಾ ಕೇಂದ್ರಗಳ ಮೇಲೆ ಹೆಚ್ಚು ನಿಗಾವಹಿಸಲು ಪ್ರತ್ಯೇಕ ವಿಭಾಗ ತರೆಯಲಾಗಿದ್ದು, ಅಗತ್ಯಬಿದ್ದಲ್ಲಿ ಕೂಡಲೇ ಅಧಿಕೃತ ಯಂತ್ರಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೇಂದ್ರಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ.
ಒಂದು ವೇಳೆ ನಕಲಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದರೆ ಸಾರ್ವಜನಿಕರು ಕೂಡಲೇ ಸಾರಿಗೆ ಇಲಾಖೆಗೆ ಮಾಹಿತಿ ನೀಡಬಹುದು. ನಂತರ ತಪ್ಪಿತಸ್ಥ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿ ವಿವರಿಸಿದರು. ಆದರೆ, ಇದುವರೆಗೂ ರಾಜ್ಯದ ಯಾವುದೇ ಅಕ್ರಮ ಪರೀಕ್ಷಾ ಕೇಂದ್ರಗಳ ಮೇಲೆ ಸ್ವಯಂಪ್ರೇರಿತವಾಗಿ ಇಲಾಖೆ ದಾಳಿಯೇ ಮಾಡಿಲ್ಲ ಎಂಬ ಅಂಶವು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಗೊಂದಲವೇ ಅಕ್ರಮಕ್ಕೆ ದಾರಿ?: ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರ ತಪಾಸಣೆ ಗೊಂದಲವೇ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಲಾಗಿದೆ. ಮೋಟಾರ್ ವಾಹನ ಕಾಯ್ದೆ ಪ್ರಕಾರ ಸಾರಿಗೆ ಮತ್ತು ಸಂಚಾರ ವಿಭಾಗದ ಪೊಲೀಸರಿಗೆ ಮಾತ್ರ ಹೊಗೆ ಉಗುಳುವ ವಾಹನಗಳ ತಪಾಸಣೆ ಮಾಡುವ ಅಧಿಕಾರ ಇದೆ. ಆದರೆ, ಈ ಎರಡು ಇಲಾಖೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ಮಾಲಿನ್ಯ ತಪಾಸಣಾ ಯಂತ್ರೋಪಕರಣಗಳು ಇಲ್ಲದಿರುವುದರಿಂದ ವಾಹನಗಳ ಹೊಗೆ ಪ್ರಮಾಣ ಪರೀಕ್ಷೆ ಮಾಡುವುದಿಲ್ಲ. ಆದರೆ, ಪ್ರಮಾಣ ಪತ್ರದ ಬಗ್ಗೆ ಮಾತ್ರ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎನ್ನುತ್ತಾರೆ ಸಂಚಾರ ಪೊಲೀಸರು. ಇನ್ನು ಸಾರಿಗೆ ಇಲಾಖೆ ಬಳಿ ಉಪಕರಣಗಳು ಇದ್ದರೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಇದು ನಕಲಿ ಪ್ರಮಾಣ ಪತ್ರಗಳ ವಿತರಣೆಗೆ ಮತ್ತಷ್ಟು ಅವಕಾಶ ನೀಡಿದಂತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸುತ್ತವೆ.
ಆರೋಗ್ಯದ ಮೇಲೆ ಪರಿಣಾಮ: ಪೆಟ್ರೋಲ್ ಆಧಾರಿತ ವಾಹನಗಳು ಉಗುಳುವ ಕಾರ್ಬನ್‌ಮೋನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಹಾಗೂ ಡಿಸೇಲ್ ವಾಹನಗಳಿಂದ ಹೊರ ಬರುವ ಹೊಗೆಯಿಂದ ನೈಟ್ರೋಜನ್ ಆಕ್ಸಿಡ್, ಸಲ್‌ಫ್ಯೂರ್ ಡೈಆಕ್ಸಿಡ್‌ನಿಂದ ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಮಂಡಳಿಯಿಂದ ತಪಾಸಣೆ ಇಲ್ಲ!: ಪರಿಸರದಲ್ಲಿ ಉಂಟಾಗುವ ನೀರು, ಶಬ್ಧ ಮತ್ತು ವಾಯು ಮಾಲಿನ್ಯದ ಬಗ್ಗೆ ಮಾತ್ರ ಮಾಹಿತಿ ಸಂಗ್ರಹಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಮಾಲಿನ್ಯ ಪರೀಕ್ಷಾ ಪ್ರಮಾಣ ಪತ್ರ ಕೇಂದ್ರಗಳಾಗಲಿ, ಹೊಗೆ ಉಗುಳುವ ವಾಹನಗಳ ತಪಾಸಣೆ ಮಾಡುವುದಿಲ್ಲ. ಮಾಲಿನ್ಯ ಪರೀಕ್ಷಾ ಕೇಂದ್ರಗಳಿಗೆ ಪರವಾನಿಗೆ ಕೊಡುವುದು ಹಾಗೂ ವಾಹನ ತಪಾಸಣೆ ಮಾಡುವುದು ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರ ಕೆಲಸ. ಒಂದು ವೇಳೆ ಸಾರಿಗೆ ಇಲಾಖೆ ಅಥವಾ ಸಂಚಾರ ಪೊಲೀಸರ ಮನವಿ ಮೇರೆಗೆ ಇಲಾಖೆಯ ಅಧಿಕಾರಿ ಹಾಗೂ ಮಾಲಿನ್ಯ ಪರೀಕ್ಷಾ ಯಂತ್ರವನ್ನೊಳಗೊಂಡ ವಾಹನ ಕಳುಹಿಸುತ್ತೇವೆ. ಅಕ್ರಮ ಕೇಂದ್ರಗಳ ಬಗ್ಗೆ ಸಾರಿಗೆ ಇಲಾಖೆಯೇ ನಿಗಾ ವಹಿಸಬೇಕು ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು.
ಬಿಎಂಟಿಸಿ ಬಸ್‌ಗಳ ಪರೀಕ್ಷೆ: ನಗರದಲ್ಲಿ ಸಂಚರಿಸುವ ಸಾವಿರಾರು ಬಿಎಂಟಿಸಿ ಬಸ್‌ಗಳ ಹೊಗೆ ತಪಾಸಣೆ ನಡೆಸಲು ಘಟಕಗಳಲ್ಲಿ ಪ್ರತ್ಯೇಕ ಯಂತ್ರ ಅಳವಡಿಸಿಕೊಂಡಿದ್ದು, ಪ್ರತಿ ಮೂರು ದಿನಕ್ಕೊಮ್ಮೆ ಎಲ್ಲ ಬಸ್‌ಗಳನ್ನು ಪರಿಶೀಲಿಸುತ್ತಾರೆ. ಆದರೂ ನಗರದಲ್ಲಿ ಸಂಚರಿಸುವ ಬಸ್‌ಗಳು ದಟ್ಟವಾದ ಹೊಗೆ ಉಗುಳುತ್ತಿವೆ. ಹೀಗಾಗಿ ಬಿಎಂಟಿಸಿ ಘಟಕಗಳಲ್ಲಿರುವ ತಪಾಸಣಾ ಯಂತ್ರಗಳನ್ನು ಪರಿಶೀಲಿಸುವ ಅಗತ್ಯವಿದೆ ಎನ್ನುತ್ತಾರೆ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು.
ಮಾಲಿನ್ಯ ಪ್ರಮಾಣ ಪತ್ರ ವಿತರಣಾ ಕೇಂದ್ರಗಳು (ಸಾರಿಗೆ ಇಲಾಖೆ ಪ್ರಕಾರ)ಬೆಂಗಳೂರು 356
ಬೆಂಗಳೂರು ಹೊರತು ಪಡಿಸಿ 654
ಒಟ್ಟು- 1,010 ನಕಲಿ ಸೆಂಟರ್‌ಗಳ ಮೇಲೆ ನಿಗಾವಹಿಸಲಾಗಿದ್ದು, 21 ಕೇಂದ್ರಗಳ ವಿರುದ್ಧ ವಿಲ್ಸನ್‌ಗಾರ್ಡ್‌ನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ಪರಿಗಣಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಅಕ್ರಮ ಮಾಲಿನ್ಯ ಪರೀಕ್ಷಾ ಪ್ರಮಾಣ ಪತ್ರ ವಿತರಿಸುವ ಕೇಂದ್ರಗಳ ಮೇಲೆ ಇ-ಆಡಳಿತ ಮತ್ತು ಪರಿಸರ ವಿಭಾಗದ ಅಧಿಕಾರಿಗಳಿಂದ ವಿಶೇಷ ಕಾರ್ಯಾಚರಣೆಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಕ್ರಮ ದಂಧೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ.
-ಶಿವರಾಜ್ ಬಿ.ಪಾಟೀಲ್, ಅಪರ ಸಾರಿಗೆ ಆಯುಕ್ತರು * ಮೋಹನ್ ಭದ್ರಾವತಿ