Advertisement

ಛಾಯಾಗ್ರಾಹಕರ ಸಾರ್ಥಕ ಸಮಾರಂಭ

10:04 AM Feb 04, 2020 | Lakshmi GovindaRaj |

ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘಕ್ಕೆ ಈಗ 35 ವರ್ಷದ ಸಂಭ್ರಮ. ಈ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸಬೇಕು ಎಂಬ ಕಾರಣಕ್ಕೆ ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ ವಿಶೇಷ ಕಾರ್ಯಕ್ರಮ ಆಯೋಜಿಸಲು ಸಜ್ಜಾಗಿದೆ. ಹೌದು, 35 ವರ್ಷದ ಸಂಭ್ರಮದಲ್ಲಿರುವ ಛಾಯಾಗ್ರಾಹಕರ ಸಂಘ ಇದೀಗ “ಸಿನಿ 35′ ಎಂಬ ಕಾರ್ಯಕ್ರಮಕ್ಕೆ ಮುಂದಾಗಿದೆ.

Advertisement

ಈ ಕಾರ್ಯಕ್ರಮ ಮೂಲಕ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಅಪರೂಪದ ತಾಂತ್ರಿಕ ವರ್ಗದವರನ್ನು ಸನ್ಮಾನಿಸಿ, ಗೌರವಿಸುವ ಕೆಲಸಕ್ಕೆ ಕೈ ಹಾಕಿದೆ. ಈ ಕುರಿತು ಹೇಳಿಕೊಳ್ಳಲೆಂದೇ, ಸಂಘದ ಅಧ್ಯಕ್ಷರಾದ ಜೆ.ಜಿ.ಕೃಷ್ಣ ಅವರು ತಮ್ಮ ಪದಾಧಿಕಾರಿಗಳ ಜೊತೆ ಪತ್ರರ್ತರ ಮುಂದೆ ಬಂದಿದ್ದರು. ತಮ್ಮ ಕಾರ್ಯಕ್ರಮದ ರೂಪುರೇಷೆ ಕುರಿತು ಕೊಂಚ ಭಾವುಕರಾಗಿಯೇ ಹೇಳಿಕೊಂಡ ಜೆ.ಜಿ.ಕೃಷ್ಣ, “ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರ ಸಂಘ ಉದಯವಾಗಿ ಈಗ 35 ವರ್ಷ ಗತಿಸಿದೆ.

ಈ ಸವಿನೆನಪಿಗೆ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿದ ಕೆಳವರ್ಗದ ನೌಕರರು ಹಾಗು ಟಾಪ್‌ ವರ್ಗದಲ್ಲಿರುವ ತಾಂತ್ರಿಕ ವರ್ಗದವರನ್ನು ಗುರುತಿಸಿ, ಗೌರವಿಸಲು ನಿರ್ಧರಿಸಲಾಗಿದೆ. ಫೆಬ್ರವರಿ 9 ರಂದು “ಸಿನಿ 35′ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಅಂದು ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ರವರೆಗೂ ಕಾರ್ಯಕ್ರಮ ಜರುಗಲಿದೆ.

ಸುಮಾರು 108 ಮಂದಿಯನ್ನು ಸನ್ಮಾನಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕ್ಲಾಪ್‌ ಬಾಯ್‌ನಿಂದ ಹಿಡಿದು, ಕಾಫಿ ಕೊಡುವ, ಲೈಟ್‌ಹಿಡಿಯುವ, ಛತ್ರಿ ಹಿಡಿವ, ಊಟ ಒದಗಿಸಿಕೊಟ್ಟ, ಜನರೇಟರ್‌ ಆಪರೇಟ್‌ ಮಾಡಿದ್ದ, ಛಾಯಾಗ್ರಾಹಕರಿಗೆ ಸಹಾಯಕರಾಗಿ ದುಡಿದ, ಟಿಕೆಟ್‌ ಕೊಟ್ಟವರು ಹೀಗೆ ಎಲ್ಲಾ ವಿಭಾಗದಿಂದಲೂ ಗುರುತಿಸಿ ಸನ್ಮಾನಿಸಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ, ಅನೇಕರು ತಮ್ಮ ಬಯೋಡಟಾ ಕಳುಹಿಸಿಕೊಟ್ಟಿದ್ದಾರೆ.

ಇನ್ನು ಕೆಲವರು ಕಚೇರಿಗೆ ಬಂದು ಕೊಟ್ಟಿದ್ದಾರೆ. ಬಂದವರ ಸ್ಥಿತಿ ನೋಡಿದಾಗ, ಕಣ್ಣೀರು ಬಂತು’ ಎಂದು ಗದ್ಗದಿತರಾದ ಕೃಷ್ಣ, “ಬಹಳಷ್ಟು ಮಂದಿ ಇಂದು ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಅಂತಹವರನ್ನು ಯಾರೂ ಗುರುತಿಸಿಲ್ಲ. ಅವರಿಗೆ ಗುರುತಿಸಿ, ಗೌರವಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಅವರಿಗೆ ನೆಮ್ಮಿದಿ, ಖುಷಿ ಆದರಷ್ಟೇ ಸಾಕು. ನಮ್ಮ ಈ ಪ್ರಯತ್ನಕ್ಕೆ ಚಿತ್ರರಂಗದ ಅನೇಕ ನಟರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸಹಕಾರ ನೀಡಿದ್ದಾರೆ.

Advertisement

ಈ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಕುಟುಂಬ ವರ್ಗದವರನ್ನೂ ಸತ್ಕರಿಸುವ ಕೆಲಸ ಆಗಲಿದೆ. ಅವರ ಕುಟುಂಬದವರಿಗೆ ಸೀರೆ, ಹೂವು, ಹಣ್ಣು ಕೊಡುವ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು ಅವರು. ಹಿರಿಯ ಛಾಯಾಗ್ರಾಹಕ ಅಣಜಿನಾಗರಾಜ್‌ ಮಾತನಾಡಿ, “ಇದೊಂದು ಸಾರ್ಥಕ ಸಮಾರಂಭ. ಈ ಸಮಾರಂಭದಲ್ಲಿ ಎಲ್ಲಾ ಸ್ಟಾರ್‌ ನಟರು, ಕಲಾವಿದರು ಪಾಲ್ಗೊಳ್ಳಬೇಕು.

ಚಿತ್ರರಂಗದ ಎಲ್ಲಾ ವಿಭಾಗದ ಜನರು ಸಿನಿಮಾ ಏಳಿಗೆಗೆ, ನಟರ ಪ್ರಗತಿಗೆ ದುಡಿದಿದ್ದಾರೆ. ಅವರನ್ನು ಸನ್ಮಾನಿಸುವ ಕಾರ್ಯ ಇದಾಗಿರುವುದರಿಂದ ದಯವಿಟ್ಟು, ನಟರು, ನಿರ್ಮಾಪಕ, ನಿರ್ದೇಶಕರು ಎಲ್ಲರೂ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕು’ ಎಂದರು ಅಣಜಿ ನಾಗರಾಜ್‌. ಈ ವೇಳೆ ಚಂದ್ರಶೇಖರ್‌, ಜ್ಞಾನಮೂರ್ತಿ, ಮುತ್ತೋಜಿರಾವ್‌ ಚವ್ಹಾಣ್‌, ಎಂ.ಮುತ್ತುರಾಜ್‌, ತುಳಸಿ ಗಣೇಶ್‌ ಕುಮಾರ್‌ ಎನ್‌.ಉಮೇಶ್‌, ಶೇಖರ್‌ ಚಂದ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next