Advertisement

ಮನೆಯ ಸೊಗಸು ಹೆಚ್ಚಿಸುವ ಫೋಟೋ ಫ್ರೇಮ್  ಗಳು 

04:49 PM Sep 17, 2018 | |

ನಮಗಿಷ್ಟವಾದ ಚಿತ್ರ-ಫೋಟೋಗಳಿಗೆ ಒಂದು ಚೌಕಟ್ಟನ್ನು ಹಾಕಿ ಅದರ ಚಂದವನ್ನು ಮತ್ತಷ್ಟು ಹಿಗ್ಗಿಸುವುದು ಎಲ್ಲರ ಬಯಕೆ ಆಗಿರುತ್ತದೆ. ಫೋಟೋ ನಮ್ಮ ಪ್ರೀತಿಪಾತ್ರರದ್ದು ಆಗಿರಬಹುದು, ಇಲ್ಲವೇ ದೇವರು, ಗುರು ಹಿರಿಯರದ್ದು ಇರಬಹುದು.  ಆಯಾ ಚಿತ್ರಕ್ಕೆ ತಕ್ಕಂತೆ, ಒಂದೊಂದು ಚೌಕಟ್ಟನ್ನು ಆಯ್ಕೆ ಮಾಡುವುದೇ ಒಂದು ಮುಖ್ಯ ಕೆಲಸವೂ ಆಗಿರುತ್ತದೆ. ಕೆಲವೊಮ್ಮೆ, ಚಿತ್ರಕ್ಕಿಂತ ಚೌಕಟ್ಟೇ ಭಾರ ಎಂದೆನಿಸಿದರೂ,  ಮಿಕ್ಕ ಕೆಲವಲ್ಲಿ ಮತ್ತೂ ಹೆಚ್ಚು ಸುಂದರವಾದ ಫ್ರೆàಮ್‌ ಹಾಕಬಹುದಿತ್ತು ಎಂದಿನಿಸುವುದೂ ಇದ್ದದ್ದೇ. ಚಿತ್ರಗಳ ಮಿತಿ ಕೆಲವಾರು ಅಡಿಗಳಿಗೆ ಸೀಮಿತವಾಗಿದ್ದರೆ, ನಮ್ಮೆಲ್ಲರ ಅಚ್ಚುಮೆಚ್ಚಿನ ಮನೆಯ ಸೌಂದರ್ಯ ಹಿಗ್ಗಿಸಲೂ ಕೂಡ ನಾವು ಒಂದಷ್ಟು ಫ್ರೇಮ್ ವರ್ಕ್‌ ಮಾಡಬೇಕಾಗುತ್ತದೆ. 

Advertisement

ಅದು ಮನೆಯನ್ನು ಪ್ರವೇಶಿಸಿದೊಡನೆ ಏನೇನು ಕಣ್ಣಿಗೆ ಬೀಳಬೇಕು ಹಾಗೂ ಯಾವ ರೀತಿಯ ಚಿತ್ರಣವನ್ನು ಮನೆಯವರ ಬಗ್ಗೆ ನೀಡಬೇಕು ಎಂಬುದನ್ನು ಆಧರಿಸಿರುತ್ತದೆ. ಹಾಗೆಯೇ, ಮನೆಯಲ್ಲಿ ಹೆಚ್ಚು ಸಮಯ ಕಳೆಯುವ ಲಿವಿಂಗ್‌ ಇಲ್ಲವೇ ಮಲಗುವ ಕೋಣೆಯಲ್ಲಿ ಯಾವುದು ಚೌಕಟ್ಟಿನ ಒಳಗೆ ಇರಬೇಕು ಎಂಬುದೂ ನಮ್ಮ ಮನಃಸ್ಥಿತಿಯನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಮನೆಗೆ ಕಳೆ ಕಟ್ಟುವ ಚೌಕಟ್ಟುಗಳು
ಮುಖ್ಯದ್ವಾರದ ಮೂಲಕ ಒಳ ಪ್ರವೇಶಿಸುತ್ತಿದ್ದಂತೆ ಒಂದು ಆರ್ಚ್‌-ಕಮಾನು ಕಂಡುಬಂದು ನಂತರ ಅದರ ಚೌಕಟ್ಟಿನೊಳಗಿಂದ ಸುಸಜ್ಜಿತವಾದ ಲಿವಿಂಗ್‌ ಕೋಣೆ ಹಾಗೂ ಅದರ ಪೀಠೊಪಕರಣಗಳು ಕಂಡುಬಂದರೆ, ಒಳಾಂಗಣಕ್ಕೆ ಮತ್ತಷ್ಟು ಮೆರಗನ್ನು ಒದಗಿಸುತ್ತದೆ. ಅದೇ ರೀತಿಯಲ್ಲಿ ಲಿವಿಂಗ್‌ ಹಾಗೂ ಡೈನಿಂಗ್‌ ಪ್ರದೇಶ ಒಂದೇ ಹಾಲಿನಲ್ಲಿ ಇದ್ದರೂ ಸಾಂಕೇತಿಕವಾಗಿ ಒಂದು ಭಜನೆ ಮಾಡುತ್ತಲೇ ಅದರ ಸೊಬಗನ್ನು ಹಿಗ್ಗಿಸಲು ಈ ಎರಡರ ಮಧ್ಯೆ ಒಂದು ಆರ್ಚ್‌ ಮಾಡಬಹುದು. ಈ ಮಾದರಿಯ ಕಮಾನುಗಳು ಸ್ಥಳವನ್ನು ಕುಗ್ಗಿಸದೆ, ಎರಡೂ ಪ್ರದೇಶಕ್ಕೂ ತಮ್ಮದೇ ಆದ ಪ್ರಾಮುಖ್ಯತೆ ಹಾಗೂ ವಿಶೇಷತೆಗಳನ್ನು ನೀಡುತ್ತವೆ. 

ಚೌಕಟ್ಟಿನೊಳಗಿನ ಚೌಕಟ್ಟುಗಳು
ಪೆರ್ಪೆಕ್ಟಿವ್‌ ಅಂದರೆ ಹತ್ತಿರ ದೂರದ ಪರಿಕಲ್ಪನೆ ಪ್ರತಿ ಸ್ಥಳವನ್ನೂ ವಿಶೇಷವಾಗಿಸಬಲ್ಲದು. ಎಲ್ಲವೂ ಮಟ್ಟಸವಾಗಿದ್ದರೆ ನಮಗೆ ಸ್ಥಳದ ಪರಿವೆ ಆಗುವುದಿಲ್ಲ. ರಸ್ತೆ ಉದ್ದ ಇದ್ದರೆ, ಅದರ ಬದಿಯ ಸಾಲು ಮರಗಳು ಇಲ್ಲವೇ ದೀಪದ ಕಂಬಗಳು ಆ ಒಂದು ರಸ್ತೆಗೆ ಹೆಚ್ಚಿನ ಮೆರಗನ್ನು ನೀಡುತ್ತಲೇ ಅದರ ವಿಶಾಲತೆಯನ್ನೂ ಹೆಚ್ಚಿಸುತ್ತದೆ. ಹಾಗೆಯೇ ಮನೆ ಚಿಕ್ಕದಿದ್ದರೂ ಚೌಕಟ್ಟಿನೊಳಗಿಂದ ಮತ್ತೂಂದು ಮಗದೊಂದು ತೆರೆದು ಕೊಳ್ಳುತ್ತಲೇ ಮನೆಯ ವಿಶೇಷತೆಗಳನ್ನು ಪ್ರದರ್ಶಿಸಿದರೆ, ಒಳಾಂಗಣ ಮತ್ತೂ ಹಿಗ್ಗಿದಂತೆ ಅನಿಸುತ್ತದೆ. ಅದೇ ಎಲ್ಲವೂ ಮಟ್ಟಸವಾಗಿ, ಯಾವುದೇ ಏರಿಳಿತ ಇಲ್ಲದೆ ಇದ್ದರೆ, ಚೌಕಟ್ಟುಗಳ ಸಿಂಗಾರವಿಲ್ಲದಿದ್ದರೆ, ಸಣ್ಣಮನೆಗಳು ಮತ್ತೂ ಕುಗ್ಗಿದಂತೆ ಕಾಣಬಲ್ಲವು.

ನಾನಾ ಬಗೆಯ ಚೌಕಟ್ಟುಗಳು
ಬಗೆಬಗೆಯ ಆಕಾರ ವಿನ್ಯಾಸ ಹಾಗೂ ಗಾತ್ರದಲ್ಲಿ ನಾವು ನಮ್ಮ ಮನೆಯ ಹೆಗ್ಗಳಿಕೆಗಳನ್ನು ಚೌಕಟ್ಟುಗಳನ್ನು ಹಾಕುವುದರ ಮೂಲಕ ಹೈಲೈಟ್‌ ಮಾಡಬಹುದು. ಕಮಾನು ಆಕಾರಗಳು ಕಮಾನುಗಳಿಗೆ ಪೂರಕವಾಗಿದ್ದರೆ ಆರ್ಚಿನ ಸಪೂರ ರೂಪ ಚಚ್ಚೌಕದ ಫ್ರೆàಮ್‌ ಮೂಲಕ ಹೆಚ್ಚು ಕಂಗೊಳಿಸಬಹುದು. ಅದೇ ರೀತಿಯಲ್ಲಿ ಬಣ್ಣ ಟೆಕ್ಸ್‌ಚರ್‌ಗಳ ಮೂಲಕವೂ ನಾವು ಚೌಕಟ್ಟುಗಳಿಗೆ ವಿಶೇಷ ಮೆರುಗನ್ನು ನೀಡಬಹುದು. ಕೆಲವೊಮ್ಮೆ ಚೌಕಟ್ಟುಗಳನ್ನು ತೆರೆದ ವೈರ್‌ ಕಟ್‌ ಇಟ್ಟಿಗೆ, ಅಂದರೆ ಪ್ಲಾಸ್ಟರ್‌ ಮಾಡದ ಇಟ್ಟಿಗೆಗಳನ್ನು ಉಪಯೋಗಿಸಿ ಕಮಾನುಗಳನ್ನು ಮಾಡಿದರೆ, ಮಾಮೂಲಿ ಇಟ್ಟಿಗೆಗಳನ್ನೂ ಸಹ ಉಪಯೋಗಿಸಿ ಸುಲಭದಲ್ಲಿ ಆರ್ಚ್‌ ಗಳನ್ನು ಮಾಡಿ ನಮಗಿಷ್ಟವಾದ ರೀತಿಯಲ್ಲಿ ಪ್ಲಾಸ್ಟರ್‌ ನಲ್ಲೇ ವಿವಿಧ ವಿನ್ಯಾಸಗಳನ್ನು ರೂಪಿಸಿಕೊಳ್ಳಬಹುದು.

Advertisement

ದೇವರ ಮನೆಗೆ ಅಂದದ ಕಮಾನು
ನಮ್ಮಲ್ಲಿ ಆರ್ಚ್‌ಬಳಕೆ ಬಹಳ ಹಿಂದಿನಿಂದ ಏನೂ ಇಲ್ಲವಾದ ಕಾರಣ, ಸನಾತನ ಗುಡಿ ಗೋಪುರಗಳಲ್ಲಿ ಕಮಾನುಗಳ ಬಳಕೆ ಬಹಳ ಕಡಿಮೆ. ಆರ್ಚ್‌ಗೆ ಪರ್ಯಾಯವಾಗಿ ನಮ್ಮಲ್ಲಿ “ಕಾರ್ಬೆಲ್‌’ ಅಂದರೆ ಪ್ರತಿ ವರಸೆಯನ್ನೂ ಒಂದಷ್ಟು ಮುಂದಕ್ಕೆ ಒತ್ತರಿಸಿ ಇಟ್ಟು, ಅದು ಬಿದ್ದು ಹೋಗದಂತೆ ಅದರ ಮೇಲಿನ ವರಸೆ ಇಡುತ್ತ, ಮೆಟ್ಟಿಲು ಮೆಟ್ಟಿಲಾಗಿ ತೆರೆದ ಸ್ಥಳಗಳಿಗೆ ಪ್ಲಾನ್‌ ಮಾಡುತ್ತಿದ್ದರು. ಒಂದು ಪಕ್ಷ ಹೀಗೆ ಆಗದಿದ್ದರೆ- ನಮ್ಮಲ್ಲಿ ಹತ್ತಿರಹತ್ತಿರಕ್ಕೆ ಕಂಬಗಳನ್ನು ಇಟ್ಟು ಆದಷ್ಟೂ ಸ್ಪಾನ್‌ (ಎರಡು ಭೀಮಿನ ನಡುವಿನ ಜಾಗ) ಗಳನ್ನು ಕಡಿಮೆ ಮಾಡುವ ಪರಿಪಾಠ ಬೆಳೆದು ಬಂತು. ನಿಮಗೆ ನಮ್ಮ ಪರಂಪರೆಗೆ ಹೊಂದುವಂತಹ ಚೌಕಟ್ಟು ಬೇಕೆಂದರೆ- ಪೂಜಾ ಕೋಣೆಗೆ ಕಾರ್ಬೆಲ್‌ ಆರ್ಚ್‌ ಅಳವಡಿಸಬಹುದು. ಮತ್ತೂ ಸರಳವಾದ ವಿನ್ಯಾಸ ಬೇಕೆಂದರೆ, ಗರ್ಭಗುಡಿಯ ದ್ವಾರಕ್ಕೆ ಮೆರಗು ಕೊಡುವ ಅಕ್ಕಪಕ್ಕದ ಕಂಬ ಹಾಗೂ ಮೇಲೊಂದು ಕಲಾತ್ಮಕ ತೊಲೆಯ ವಿನ್ಯಾಸ ಮಾಡಿಯೂ ನಮ್ಮ ಮನೆಯ ಪೂಜಾಸ್ಥಳದ ಅಂದವನ್ನು ಹೆಚ್ಚಿಸಬಹುದು.

ಮನೆ ಕಟ್ಟುವಾಗ ಸಿಮೆಂಟ್‌, ಗಾರೆ, ಮೆಶ್‌ನಲ್ಲಿ ಕಮಾನು ಹಾಗೂ ಇತರೆ ವಿನ್ಯಾಸಗಳನ್ನು ಮಾಡುವುದು ದುಬಾರಿ ಆಗುವುದಿಲ್ಲ. ಆದರೆ ಗೋಡೆ ಕಟ್ಟಿದ ನಂತರ, ಸೂರೂ ಹಾಕಿದ ಮೇಲೆ ಚೌಕಟ್ಟುಗಳನ್ನು ವಿನ್ಯಾಸ ಮಾಡುವುದು ಸ್ವಲ್ಪ ದುಬಾರಿ ಆಗಬಹುದು. ಮನೆಗೆ ಪ್ಲಾಸ್ಟರ್‌ ಬಳಿದ ಮೇಲೆ ಮತ್ತೆ ಸಿಮೆಂಟ್‌ ಕೆಲಸ ಶುರುಮಾಡಲು ಮನಸ್ಸು ಆಗದ ಕಾರಣ, ಒಳಾಂಗಣ ವಿನ್ಯಾಸದ ರೂಪದಲ್ಲೂ ನಾವು ಚೌಕಟ್ಟುಗಳನ್ನು ಅಳವಡಿಸಿಕೊಳ್ಳಬಹುದು. ಆದರೆ ಇವುಗಳನ್ನು ಬಹುತೇಕ ಮರ ಇಲ್ಲ ಪ್ಲೆ„ವುಡ್‌ ನಿಂದ ಮಾಡಲಾಗುವುದರಿಂದ, ಸ್ವಲ್ಪ ದುಬಾರಿ ಎಂದೆನಿಸಬಹುದು. ಜನಸಾಮಾನ್ಯರಿಗೆ ಅದರಲ್ಲೂ ಮೊದಲ ಬಾರಿಗೆ ಮನೆ ಕಟ್ಟುತ್ತಿರುವವರಿಗೆ, ಗೋಡೆ ಕಟ್ಟಿ ಸೂರು ಹಾಕುವವರೆಗೂ ಮನೆಯ ರೂಪರೇಶೆ ಹೇಗಿರುತ್ತದೆ ಎಂದು ತಿಳಿಯುವುದಿಲ್ಲ. ಆದುದರಿಂದ, ದುಬಾರಿ ಆದರೂ ನಿಖರವಾಗಿ ನಮಗೆ ವಿನ್ಯಾಸದ ರೂಪರೇಶೇ ಅರಿವಾಗುವುದರಿಂದ ಹೆಚ್ಚು ನಿಖರತೆಯಿಂದ ಮನೆಯ ಒಳಾಂಗಣ ವಿನ್ಯಾಸವನ್ನು ನಂತರವೂ ರೂಪಿಸಿಕೊಳ್ಳಬಹುದು.

ಚೌಕಟ್ಟುಗಳ ಅಳವಡಿಕೆ
ಮನೆ ವಿನ್ಯಾಸ ಮಾಡುವಾಗಲೇ ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ ಗಳಿಂದ ಎಲ್ಲ ವಿವರಗಳನ್ನೂ ಪಡೆದು ಕಟ್ಟಿಕೊಂಡರೆ ನಂತರ ಹೆಚ್ಚು ಯೋಚಿಸುವ ಅಗತ್ಯ ಇರುವುದಿಲ್ಲ. ಆದರೆ ಕೆಲವೊಮ್ಮೆ ಮನೆಗೆ ಸೂರು ಹಾಕಿದ ಮೇಲೆ ನಮಗೆ ವಿವಿಧ ಯೋಚನೆಗಳು, ಮನೆಯ ಅಂದವನ್ನು ಮತ್ತೂ ಹೆಚ್ಚಿಸುವ ಆಲೋಚನೆಗಳು ಬರುತ್ತದೆ. ಮನೆ ಫಿನಿಶ್‌ ಮಾಡುವ ಮೊದಲು ಮುಖ್ಯ ಸ್ಥಳಗಳನ್ನು, ಫೊಟೊ ಪ್ರೇಮ್‌ ಹಾಕುವಂಥ ಸ್ಥಳಗಳನ್ನು ಗುರುತಿಸಿ, ಅದರ ಮೆರಗನ್ನು ಹೆಚ್ಚಿಸಲು ಚೌಕಟ್ಟುಗಳನ್ನು ಹಾಕಿಕೊಳ್ಳಬಹುದು.  ಹೆಚ್ಚಿನ ಮಾತಿಗೆ ಫೋನ್‌ 98441 32826
ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next