ಹೊಸಪೇಟೆ: ನಗರದ ಭಟ್ಟರಳ್ಳಿ ಆಂಜನೇಯ ದೇವಾಲಯದ ಬಳಿ ಎರಡು ದಿನಗಳ ಕಾಲ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಣಿ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಕಾರ್ಯಕರ್ತರ ಮನ ಸೊರೆಗೊಂಡಿತು.
ಕರ್ನಾಟಕ ಬಿಜೆಪಿ ಹೋರಾಟ, ಪಕ್ಷ ಸವೆಸಿದ ಹಾದಿ ಚರಿತ್ರೆ ಛಾಯಾಚಿತ್ರಗಳನ್ನು ಕಂಡು ಕಾರ್ಯಕರ್ತರು ಉತ್ಸಾಹಭರಿತರಾಗಿ ವೀಕ್ಷಿಸಿದರು. ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಹೇಗೆ ಕಟ್ಟಲಾಯಿತು. ಬಿ.ಎಸ್. ಯಡಿಯೂರಪ್ಪ, ಅಟಲ್ ಬಿಹಾರಿ ವಾಜಪೇಯಿ, ಹುಬ್ಬಳ್ಳಿಯ ತಿರಂಗಾಯಾತ್ರೆಯಲ್ಲಿ ಉಮಾಭಾರತಿ ಭಾಗವಹಿಸಿದ ಕ್ಷಣಗಳು ವಸ್ತುಪ್ರದರ್ಶನದಲ್ಲಿ ಮೇಳೈಸಿತ್ತು. ಬಿಜೆಪಿ ಕಾರ್ಯಕರ್ತರು, ಮುಖಂಡರು ಆಗ ಪಕ್ಷವನ್ನು ಹೇಗೆ ಕಟ್ಟಿದರು ಎಂಬುದು ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.
ಒಂದು ಕಡೆಯಲ್ಲಿ ಪಕ್ಷದ ಸಾಧನೆಯ ಛಾಯಾಚಿತ್ರ ಪ್ರದರ್ಶನ ಇನ್ನೊಂದೆಡೆಯಲ್ಲಿ ಸರ್ಕಾರದ ಸಾಧನೆಗಳ ನೋಟವನ್ನು ಪ್ರದರ್ಶಿಸಲಾಗಿತ್ತು. ಈ ಪ್ರದರ್ಶನದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸಾಧನೆಯನ್ನು ಪ್ರದರ್ಶಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರಾಜ್ಯದ ಜನರ ಶ್ರೇಯೋಭಿವೃದ್ಧಿಗಾಗಿ ಕೈಗೊಂಡಿರುವ ಕಾರ್ಯ, ಯೋಜನೆಗಳನ್ನು ಪ್ರದರ್ಶಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ವಿವಿಧ ಬಗೆಯ ಚಿತ್ರಗಳನ್ನು ಕೂಡ ಪ್ರದರ್ಶಿಸಲಾಗಿತ್ತು. ಪ್ರಧಾನಿ ಅವರು ಭ್ರಷ್ಟಾಚಾರದ ವಿರುದ್ಧ ಬಾಣ ಬೀಡುತ್ತಿರುವುದನ್ನು ಕೂಡ ಕಲಾವಿದರೊಬ್ಬರು ಕುಂಚದಲ್ಲಿ ಅರಳಿಸಿರುವ ಫೋಟೊ ಎಲ್ಲರ ಗಮನ ಸೆಳೆಯುವಂತಿತ್ತು.
ವಿಜಯನಗರದ ಸಮರ್ಥ ದೊರೆ ಶ್ರೀ ಕೃಷ್ಣದೇವರಾಯರ ಎತ್ತರದ ಪ್ರತಿಮೆಯನ್ನು ಕಂಡು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕೂಡ ಫೋಟೋಗಳನ್ನು ಕೂಡ ಕ್ಲಿಕ್ಕಿಸಿಕೊಂಡರು. ಛಾಯಾಚಿತ್ರ ಪ್ರದರ್ಶನದಲ್ಲಿ ಶ್ರೀ ಕೃಷ್ಣದೇವರಾಯರ ಪ್ರತಿಮೆಯ ಬಳಿ ರಾಜಕಾರಣಿಗಳು ಹಾಗೂ ಮುಖಂಡರು ಕೂಡ ಫೋಟೋಗಳನ್ನು ತೆಗೆಸಿಕೊಂಡರು. ವಿಜಯನಗರದ ದೊರೆ ಶ್ರೀ ಕೃಷ್ಣದೇವರಾಯರಂತೇ ನಾವು ಕೂಡ ಉತ್ತಮ, ಸಮರ್ಥ ಆಡಳಿತ ನೀಡುತ್ತೇವೆ ಎಂದು ರಾಜಕಾರಣಿಗಳು ಸಾರಿದರು.
ಬಿಜೆಪಿ ಸಾಧನೆ, ಪಕ್ಷವನ್ನು ಹೇಗೆ ಸಂಘಟಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಬಿಜೆಪಿಯನ್ನು ದೇಶ ಹಾಗೂ ರಾಜ್ಯದಲ್ಲಿ ಹೇಗೆ ಬೆಳೆಸುತ್ತಿದ್ದಾರೆ ಎಂಬುದರ ಕುರಿತು ಟಿವಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಬಿಜೆಪಿ ಹಿರಿಯ ಮುಖಂಡ ಬಿ.ಎಲ್. ಸಂತೋಷ್, ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್, ಮುಖಂಡರಾದ ಲಕ್ಷ್ಮಣ ಸವದಿ, ಸಿ.ಟಿ. ರವಿ, ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ ಅವರು ಕೂಡ ವೀಕ್ಷಿಸಿದರು. ವಸ್ತು ಪ್ರದರ್ಶನವನ್ನು ಬಿಜೆಪಿ ಹಿರಿಯ ಮುಖಂಡ ಬಿ.ಎಲ್. ಸಂತೋಷ್, ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಅವರು ಉದ್ಘಾಟಿಸಿದರು. ಸಚಿವರು ಹಾಗು ಮುಖಂಡರು ಸಾಥ್ ನೀಡಿದರು.