Advertisement

ಫೋನಿ ಚಂಡಮಾರುತ: ನಗರದಲ್ಲಿ ಮತ್ತೆ ಮಳೆ

06:50 AM May 01, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ಮಂಗಳವಾರ ಫೋನಿ ಚಂಡಮಾರುತದ ಪರಿಣಾಮ ತುಸು ಜೋರಾಗಿತ್ತು. ಇದರಿಂದ ಗುಡುಗು-ಮಿಂಚು ಸಹಿತ ಮಳೆ ಸುರಿಯಿತು. ಇದರಿಂದ ಅಲ್ಲಲ್ಲಿ ಸಂಚಾರದಟ್ಟಣೆ ಉಂಟಾಗಿ ಜನ ಪರದಾಡಿದರು.

Advertisement

ಮಳೆ ಅಬ್ಬರ ಕಡಿಮೆ ಇತ್ತು. ಆದರೆ, ಅದರೊಂದಿಗೆ ಬಂದ ಗುಡುಗು-ಮಿಂಚು ನಗರವನ್ನು ನಲುಗಿಸಿತು. ಆರ್ಭಟಕ್ಕೆ ವಾಹನ ಸವಾರರು, ಉದ್ಯೋಗಿಗಳು ಗಡಿಬಿಡಿಯಿಂದ ಗೂಡು ಸೇರಲು ದೌಡಾಯಿಸುತ್ತಿರುವುದು ಕಂಡುಬಂತು.

ಆದರೆ, ಮಳೆ ಮತ್ತು ಅದರಿಂದ ಉಂಟಾದ ಸಂಚಾರದಟ್ಟಣೆ ಅದಕ್ಕೆ ಅವಕಾಶ ನೀಡಲಿಲ್ಲ. ಪ್ರಮುಖ ರಸ್ತೆಗಳು, ಅಂಡರ್‌ಪಾಸ್‌ಗಳು, ಜಂಕ್ಷನ್‌ಗಳಲ್ಲಿ ಕೆಲವೇ ಹೊತ್ತಿನಲ್ಲಿ ನೀರು ಆವರಿಸಿದ್ದರಿಂದ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿತು.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ?: ಶಾಂತಿನಗರ, ರಿಚ್‌ಮಂಡ್‌ ವೃತ್ತ, ವಿಲ್ಸನ್‌ ಗಾರ್ಡನ್‌, ಶಿವಾನಂದ ವೃತ್ತ, ಓಕಳೀಪುರ, ಮೆಜೆಸ್ಟಿಕ್‌ ಸುತ್ತ ಮಳೆ ಧಾರಾಕಾರವಾಗಿ ಸುರಿಯಿತು. ಈ ಭಾಗಗಳಲ್ಲಿ 2ರಿಂದ 8 ಮಿ.ಮೀ. ಅಂತರದಲ್ಲಿ ಮಳೆ ಬಿದ್ದಿದೆ.

ನಗರದ ಹೊರವಲಯದಲ್ಲಿ ಮಳೆ ಬಿರುಸಿನಿಂದ ಕೂಡಿತ್ತು. ಬೆಂಗಳೂರು ದಕ್ಷಿಣದ ಸೋಮನಹಳ್ಳಿಯಲ್ಲಿ ರಾತ್ರಿ 9ರ ಸುಮಾರಿಗೆ ಗಂಟೆಗೆ 68 ಮಿ.ಮೀ. ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

Advertisement

ಅದೇ ರೀತಿ, ಬನ್ನೇರುಘಟ್ಟ 14 ಮಿ.ಮೀ., ಅಂಜನಾಪುರ 14, ಗೊಟ್ಟಿಗೆರೆ 16.5, ಅರಕೆರೆ 15.5, ಬೇಗೂರು 19, ಕಗ್ಗಲೀಪುರ 16.5, ಹಿರಿಯೂರು 12, ಕೋರಮಂಗಲ 4.5 ಮಿ.ಮೀ. ಮಳೆಯಾಗಿದೆ ಎಂದು ಕೇಂದ್ರವು ತಿಳಿಸಿದೆ.

ಮಳೆಯ ಪರಿಣಾಮ ಹಲವೆಡೆ ಬಸ್‌ಗಳ ಕಾರ್ಯಾಚರಣೆಯಲ್ಲಿ ಕೊಂಚ ಏರುಪೇರು ಆಯಿತು. ಪ್ರಯಾಣಿಕರು ಬಸ್‌ಗಳಿಗಾಗಿ ಕಾದು ಸುಸ್ತಾದರು. ಕೆಲವರು ಆಟೋ, ಆ್ಯಪ್‌ ಆಧಾರಿತ ಕ್ಯಾಬ್‌ಗಳ ಮೊರೆಹೋದರು. ಮೆಟ್ರೋ ನಿಲ್ದಾಣಗಳಲ್ಲೂ ನೀರು ನುಗ್ಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಅದರಲ್ಲೂ ಎಂ.ಜಿ. ರಸ್ತೆಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯ ಇದ್ದುದರಿಂದ ಜನದಟ್ಟಣೆ ಎಂದಿಗಿಂತ ತುಸು ಹೆಚ್ಚಿತ್ತು. ಅಲ್ಲಿನ ಸಿಬ್ಬಂದಿ ಮಳೆ ನೀರು ತುಂಬಿ ಹೊರಹಾಕುತ್ತಿರುವುದು ಕಂಡುಬಂತು. ಈ ಮಧ್ಯೆ ಬೆಳಿಗ್ಗೆಯಿಂದ ಎಂದಿನಂತೆ ಬಿಸಿಲಿನ ವಾತಾವರಣ ಇತ್ತು. ಸಂಜೆ ಮೋಡಕವಿದ ವಾತಾವರಣ ಉಂಟಾಗಿ ಮಳೆ ಸುರಿಯಿತು.

ನಗರದಲ್ಲಿ ಬುಧವಾರ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣದ ಅಂಡಮಾನ್‌ನಲ್ಲಿ ಕಾಣಿಸಿಕೊಂಡ ಫೋನಿ ಚಂಡಮಾರುತವು ಒರಿಸ್ಸಾ ಕಡೆಗೆ ಹೊರಟಿದೆ. ಗಂಟೆಗೆ ಸುಮಾರು 120 ಕಿ.ಮೀ. ವೇಗದಲ್ಲಿದ್ದು,

ಮಂಗಳವಾರ ಅದು ಬೆಂಗಳೂರು, ಚೆನ್ನೈಗೆ ಹತ್ತಿರದಲ್ಲಿ ಹಾದುಹೋಗಿದ್ದರಿಂದ ನಗರದಲ್ಲಿ ಮಳೆ ಆಗಿದೆ. ಬುಧವಾರ ಬಹುತೇಕ ಕಡಿಮೆ ಆಗಲಿದ್ದು, ಅಲ್ಲಲ್ಲಿ ಸಾಧಾರಣ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌. ಪಾಟೀಲ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next