ಬೆಂಗಳೂರು: ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಹಾಗೂ ಕಳವು ಮೊಬೈಲ್‌ಗಳ ಖರೀದಿಸುತ್ತಿದ್ದ ಮೂವರು ಸೇರಿ ಐವರನ್ನು ಐಫೋನ್‌ನಲ್ಲಿದ್ದ ಫೈಂಡ್ ಮೈ ಡಿವೈಸ್ ಆ್ಯಪ್ ಮೂಲಕ ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೀಣ್ಯದ ಪಾರ್ವತಿನಗರ ನಿವಾಸಿ ಮೊಹಮ್ಮದ್ ಫಾರೂಕ್(36), ಜಗಜೀವನ್‌ರಾಂನಗರ ನಿವಾಸಿ ಸೈಯದ್ ಪರ್ವೀಜ್(25) ಹಾಗೂ ಕಳವು ಮೊಬೈಲ್ ಖರೀದಿಸುತ್ತಿದ್ದ ಸುಧಾಮನಗರ ನಿವಾಸಿ ರೆಹಮಾನ್(31), ಸೈಯದ್ ಜಮೀರ್(26), ಸೈಯದ್ ಹಾಷಿಮ್(46) ಬಂಧಿತರು. ಆರೋಪಿಗಳಿಂದ 6.31 ಲಕ್ಷ ರೂ.ನ 32 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಬಂಧನದಿಂದ 3 ಮೊಬೈಲ್ ಸುಲಿಗೆ ಪ್ರಕರಣ ಪತ್ತೆಯಾಗಿದೆ. ಆರೋಪಿಗಳ ಪೈಕಿ ಮೊಹಮ್ಮದ್ ಫಾರೂಕ್, ಸೈಯದ್ ಪರ್ವೀಜ್ ಏ.23ರಂದು ನಾಗರಭಾವಿಯ ಸುವರ್ಣ ಲೇಔಟ್‌ನ ಪಾರ್ಕ್ ಬಳಿ ಹರ್ಷ ಎಂಬುವರ ಐ-ಪೋನ್ 14 ಪ್ರೊ ಮೊಬೈಲ್ ಸುಲಿಗೆ ಮಾಡಿದ್ದರು. ಈ ಸಂಬಂಧ ದೂರುದಾರ ಹರ್ಷ ಏ.24ರಂದು ದೂರು ನೀಡಿದ್ದರು. ಬಳಿಕ ಹರ್ಷರ ಮೊಬೈಲ್‌ನಲ್ಲಿದ್ದ “ಫೈಂಡ್ ಮೈ ಡಿವೈಸ್’ ಆ್ಯಪ್ ಮೂಲಕ ಮೊಬೈಲ್ ಲೋಕೇಷನ್ ಪತ್ತೆಯಾಗಿತ್ತು.
ಈ ಆಧಾರದ ಮೇಲೆ ಶಾಂತಿನಗರದ ಸುಧಾಮನಗರದಲ್ಲಿ ರೆಹಮಾನ್ ಅಂಗಡಿಗೆ ಹೋಗಿ ಪರಿಶೀಲಿಸಲಾಗಿತ್ತು. ಅಷ್ಟರಲ್ಲಿ ಆರೋಪಿ, ಇದು ಇ-ಸಿಮ್ ಐಫೋನ್ ಎಂಬುದು ಗೊತ್ತಾಗಿ, ಅದರ ಬಿಡಿಭಾಗಗಳನ್ನು ಬೇರ್ಪಡಿಸಿದ್ದ. ಮದರ್ ಬೋರ್ಡ್ ಅನ್ನು ತನ್ನ ಕಡೆ ಇಟ್ಟುಕೊಂಡು, ಅದರ ಡಿಸ್‌ಪ್ಲೇ ಅನ್ನು ಸೈಯದ್‌ಗೆ ಹಾಗೂ ಬ್ಯಾಕ್‌ಕೇಸ್ ಮತ್ತು ಬ್ಯಾಟರಿಯನ್ನು ಸೈಯದ್ ಹಾಷಿಮ್‌ಗೆ ಮಾರಾಟ ಮಾಡಿದ್ದ. ಬಳಿಕ ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರು ಮೊಬೈಲ್ ಸುಲಿಗೆಕೋರರ ಬಗ್ಗೆ ಮಾಹಿತಿ ನೀಡಿದ್ದರು.
ಬಳಿಕ ಮೊಹಮ್ಮದ್ ಫಾರೂಕ್, ಪರ್ವೇಜ್‌ನನ್ನು ಬಂಧಿಸಲಾಗಿದೆ.