Advertisement

ಡಂಪಿಂಗ್‌ ಯಾರ್ಡ್‌: ಫೋನ್‌ ಅಭಿಯಾನ

04:48 PM Mar 30, 2017 | Team Udayavani |

ಪುತ್ತೂರು : ಬನ್ನೂರಿನಲ್ಲಿರುವ ಪುತ್ತೂರು ನಗರಸಭೆಯ ಡಂಪಿಂಗ್‌ ಯಾರ್ಡ್‌ ಸಮಸ್ಯೆ ನಿವಾರಣೆ ಕುರಿತ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಸ್ಪಂದಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಯವರಿಗೆ ದೂರವಾಣಿ ಮೂಲಕ ಮನವಿ ಮಾಡುವ ಅಭಿಯಾನವನ್ನು ಸ್ಥಳೀಯ ನಿವಾಸಿಗಳು ಆರಂಭಿಸಿದ್ದಾರೆೆ. ಈಗಾಗಲೇ ಹಲವು ಮಂದಿ ದೂರವಾಣಿ ಮೂಲಕ ಸಮಸ್ಯೆ ತೋಡಿಕೊಂಡಿದ್ದಾರೆ.

Advertisement

ಬನ್ನೂರು ಡಂಪಿಂಗ್‌ ಯಾರ್ಡ್‌ ನಲ್ಲಿ ಬೆಂಕಿ ಕಾಣಿಸಿಕೊಂಡು ತಿಂಗಳು ಸಮೀಪಿಸಿತು. ಈಗಲೂ ಹೊಗೆಯಾಡು ವುದು ನಿಂತಿಲ್ಲ. ಸೋಮವಾರ ಸಂಜೆ ಮತ್ತೆ ಸ್ವಲ್ಪ ಮಟ್ಟಿನ ಬೆಂಕಿ ಕಾಣಿಸಿಕೊಂಡಿದೆ. ಈ ಪ್ರದೇಶದ ಮಂದಿಗೆ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಅನಾರೋಗ್ಯವೂ ಕಾಡುತ್ತಿದೆ. ಹೀಗಾಗಿ ಬನ್ನೂರು ಡಂಪಿಂಗ್‌ ಯಾರ್ಡ್‌ ಪ್ರದೇಶಕ್ಕೆ ತ್ಯಾಜ್ಯ ಸುರಿಯದಂತೆ ಈಗಾಗಲೇ ಜಿಲ್ಲಾಧಿಕಾರಿ ಸಹಿತ ಎಲ್ಲ ಅಧಿಕಾರಿಗಳಿಗೆ ಬನ್ನೂರಿನ ಜನತೆ ಮನವಿ ಮಾಡಿದ್ದಾರೆ.

ಮುಗಿದ ಗಡುವು
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮೌಖೀಕ ಸೂಚನೆ ನೀಡಿ ಸಮಸ್ಯೆ ಬಗೆಹರಿಸಬೇಕು, ಹೊಗೆಯಾಡದಂತೆ ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಿದ್ದರು. ಈ ನಡುವೆ ಪೌರಾಯುಕ್ತರು ಹಾಗೂ ಶಾಸಕರು ಮತ್ತು ನಗರಸಭಾ ಆಡಳಿತ 20 ದಿನಗಳ ಕಾಲಾವಕಾಶವನ್ನು ಗ್ರಾಮದ ಜನರಲ್ಲಿ ಕೇಳಿದ್ದು, ಇದೀಗ ಆ ಗಡುವೂ ಮುಗಿದಿದೆ. ಆದರೂ ಪ್ರತಿಕ್ರಿಯೆ ಇಲ್ಲ. ಇದಕ್ಕಾಗಿ ಈಗ ಗ್ರಾಮದ ಜನತೆ ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ.

ಇದರ ಆರಂಭದ ಹಂತವಾಗಿ ಜಿಲ್ಲಾಧಿಕಾರಿಗಳಿಗೆ ಗ್ರಾಮದ ಜನತೆ ಕರೆ ಮಾಡಿ ಸಮಸ್ಯೆ ಕಡೆಗೆ ಗಮನಹರಿಸುವಂತೆ ಒತ್ತಾಯ ಮಾಡಿದ್ದಾರೆ. ಈಗಾಗಲೇ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಮಂದಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ.

ಜಿಲ್ಲಾಧಿಕಾರಿ ಮತ್ತೆ ಭರವಸೆ
ಬನ್ನೂರಿನ ಸಮಸ್ಯೆ ಇಂದಿನಿಂದ ನಾಳೆ ಬದಲಾಯಿಸಲು ಸಾಧ್ಯವಿಲ್ಲದಿರುವುದ ರಿಂದ ಈಗಾಗಲೇ ವಿಶೇಷ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಮೂಲಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸೂಚಿಸಿ ಆದೇಶ ಮಾಡಲಾಗಿದೆ. ಆ ಬಳಿಕ ಸ್ಥಳಕ್ಕೆ ಬಂದು ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿ ಕಾರಿ ತಿಳಿಸಿದ್ದಾರೆ ಎಂದು ಫೋನ್‌ ಕರೆ ಮಾಡಿದವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next