ಸೈಂಟ್ ಜೋನ್ಸ್: ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಸೂಪರ್ 12 ಸುತ್ತಿಗೂ ಅರ್ಹತೆ ಪಡೆಯಲು ವಿಫಲರಾದ ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಫಿಲ್ ಸಿಮನ್ಸ್ ಕೆಳಗಿಳಿದಿದ್ದಾರೆ. ಸಿಮನ್ಸ್ ರಾಜೀನಾಮೆ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಖಚಿತ ಪಡಿಸಿದೆ.
ನವೆಂಬರ್ 30 ರಿಂದ ಡಿಸೆಂಬರ್ 12 ರವರೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯು ಸಿಮನ್ಸ್ ಅವರ ಕೋಚ್ ಆಗಿ ಕೊನೆಯ ಸರಣಿಯಾಗಿರಲಿದೆ.
ಟಿ20 ವಿಶ್ವಕಪ್‌ನ ಮೊದಲ ಸುತ್ತಿನಲ್ಲೇ ಸೋತ ವೆಸ್ಟ್ ಇಂಡೀಸ್ ಅವಮಾನ ಅನುಭವಿಸಿದೆ. ನಾಲ್ಕು ತಂಡಗಳ ಬಿ ಗುಂಪಿನಲ್ಲಿ ಪೂರನ್ ನಾಯಕತ್ವದ ವಿಂಡೀಸ್ ಕೇವಲ ಒಂದು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಕೊನೆಯ ಸ್ಥಾನವನ್ನು ಗಳಿಸಿತು. ಮೊದಲ ಮತ್ತು ದ್ವಿತೀಯ ಸ್ಥಾನ ಪಡೆದ ಜಿಂಬಾಬ್ವೆ ಮತ್ತು ಐರ್ಲೆಂಡ್ ಟೂರ್ನಿಯ ಸೂಪರ್ 12 ಹಂತಕ್ಕೆ ಮುನ್ನಡೆದವು.
ಇದನ್ನೂ ಓದಿ:ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ
ಸಿಮನ್ಸ್ ಈ ಹಿಂದೆ 2016 ರ ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡಕ್ಕೆ ತರಬೇತುದಾರರಾಗಿದ್ದರು. ಇಂಗ್ಲೆಂಡ್ ವಿರುದ್ಧ ರಿಚರ್ಡ್ಸ್-ಬೋಥಮ್ ಟ್ರೋಫಿ ಟೆಸ್ಟ್ ಸರಣಿಯನ್ನು ಈ ವರ್ಷ ಗೆದ್ದಾಗ ಸಿಮನ್ಸ್ ಕೋಚ್ ಆಗಿದ್ದರು.
“ವೆಸ್ಟ್ ಇಂಡೀಸ್ ಮುಖ್ಯ ಕೋಚಾಗಿ ನಾನು ಆನಂದಿಸಿದ್ದೇನೆ. ನನ್ನ ಮ್ಯಾನೇಜ್‌ಮೆಂಟ್ ಅಚಲ ಬೆಂಬಲವನ್ನು ನೀಡಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್ ನಲ್ಲಿ ಕೆಲವು ಅಸಾಧಾರಣ ವ್ಯಕ್ತಿಗಳು ಉಳಿದಿದ್ದು, ಅವರು ಉತ್ತಮ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ” ಎಂದು ಕೋಚ್ ಸಿಮನ್ಸ್ ಹೇಳಿದ್ದಾರೆ.