ಕಾಬೂಲ್ : ತಾಲಿಬಾನ್ ಸರ್ಕಾರ ರಚನೆಯಾದ ಬೆನ್ನಿಗೆ ಅಲ್ಲಿನ ಶಿಕ್ಷಣ ಸಚಿವ ಶೇಖ್ ಮೊಲ್ವಿ ನೂರುಲ್ಲಾ ಮುನೀರ್, ಪಿ ಎಚ್ ಡಿ ಹಾಗೂ ಸ್ನಾತಕೋತ್ತರ ಪದವಿಗಳು ಮಾನ್ಯತೆಯನ್ನು ಹೊಂದಿಲ್ಲ ಎಂದು ಹೇಳಿದ್ದು, ಇಡೀ ಜಗತ್ತು ತಾಲಿಬಾನ್ ಸರ್ಕಾರದ ಸಚಿವನೋರ್ವನ ಹೇಳಿಕೆಯತ್ತ ತಿರುಗಿ ನೋಡುವಂತೆ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶೇಖ್ ಮೊಲ್ವಿ ನೂರುಲ್ಲಾ ಮುನೀರ್, ನೋಡಿ ಅಫ್ಗಾನಿಸ್ತಾನದ ಅಧಿಕಾರ ಈಗ ತಾಲಿಬಾನ್ ನೊಂದಿಗಿದೆ. ತಾಲಿಬಾನ್ ನಾಯಕರು ಯಾರೂ ಪಿ ಎಚ್ ಡಿ ಹಾಗೂ ಸ್ನಾತಕೋತ್ತರ ಪದವಿಯನ್ನು ಹೊಂದಿದವರಲ್ಲ. ಪಿ ಎಚ್ ಡಿ ಹಾಗೂ ಸ್ನಾತಕೋತ್ತರ ಪದವಿಗೆ ಇಲ್ಲಿ ಯಾವುದೇ ಮಾನ್ಯತೆ ಇಲ್ಲ. ಬೆಲೆಯೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 38,875 ಕೋವಿಡ್ ಪ್ರಕರಣ ಪತ್ತೆ, 369 ಮಂದಿ ಸಾವು
ನಿನ್ನೆಯಷ್ಟೇ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಿದ್ದು, ವಿಶ್ವ ಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿರುವ ತಾಲಿಬಾನ್ ನಾಯಕ ಮೊಹಮ್ಮದ್ ಹಸನ್ ಅಖುಂದ್ ಹೊಸ ಪ್ರಧಾನಿ ಯಾಗಿದ್ದಾನೆ. ಅಬ್ದುಲ್ ಘನಿ ಬರಾದರ್ ಉಪ ಪ್ರಧಾನಿಯಾದರೆ, ಜಾಗತಿಕ ಉಗ್ರ ಸಿರಾಜುದ್ದೀನ್ ಹಖಾನಿಯನ್ನು ಆಂತರಿಕ ಸಚಿವ(ಗೃಹ ಸಚಿವ) ಎಂದು ಘೋಷಿಸಲಾಗಿದೆ.
ದೋಹಾ ಟೀಂ ಮತ್ತು ಹಖಾನಿ ತಂಡದ ಸಮ್ಮಿಶ್ರಣದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಇದು ಮಧ್ಯಂತರ ಸರ್ಕಾರವೆಂದು ತಾಲಿಬಾನ್ ಹೇಳಿಕೊಂಡಿದೆ. ಮುಲ್ಲಾ ಒಮರ್ ನ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ರಕ್ಷಣೆ, ಹಿದಾಯಿ ತುಲ್ಲಾ ಬದ್ರಿ ಹಣಕಾಸು, ಆಮೀರ್ ಖಾನ್ ಮುತ್ತಾ ಖೀ ವಿದೇಶಾಂಗ, ಶೇರ್ ಅಬ್ಟಾಸ್ ಸ್ಟಾನಿಕ್ ಝೈ ಉಪ ವಿದೇಶಾಂಗ ಸಚಿವ, ಅಬ್ದುಲ್ ಹಕೀಮ್ ಕಾನೂನು ಸಚಿವ, ಕೈರುಲ್ಲಾಹ್ ಖೈರುಕ್ವಾ ಮಾಹಿತಿ ಸಚಿವ, ಜಬೀಯುಲ್ಲಾಹ್ ಮುಜಾಹಿದ್ ಉಪ ಮಾಹಿತಿ ಸಚಿವನಾಗಿದ್ದಾನೆ.
ಸದ್ಯ ಈ ಹೆಸರುಗಳನ್ನು ಪ್ರಕಟಿಸಲಾಗಿದ್ದು, ಉಳಿದ ಸಚಿವರ ಹೆಸರುಗಳನ್ನು ಮುಂದೆ ಪ್ರಕಟಿಸಲಾಗುತ್ತದೆ ಎಂದು ತಾಲಿಬಾನ್ ಉಗ್ರ ಪಡೆಯ ವಕ್ತಾರ ಜಬೀವುಲ್ಲಾಹ್ ಮುಜಾಹಿದ್ ಹೇಳಿರುವುದಾಗಿ ವರದಿ ತಿಳಿಸಿದೆ.
ಇನ್ನು, ತಾಲಿಬಾನ್ ಸರ್ಕಾರದ ಶಿಕ್ಷಣ ಸಚಿವ ಶೇಖ್ ಮೊಲ್ವಿ ನೂರುಲ್ಲಾ ಮುನೀರ್, ನೀಡಿರುವ ಹೇಳಿಕೆ ತಾಲಿಬಾನ್ ಸರ್ಕಾರದ ಪರಮೋಚ್ಛ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಅಫ್ಗಾನಿಸ್ತಾನದಲ್ಲಿ ರಚನೆಯಾಯ್ತು ಹಂಗಾಮಿ ಸರ್ಕಾರ : ಮೊಹಮ್ಮದ್ ಯಾಕೂಬ್ ರಕ್ಷಣಾ ಸಚಿವ