Advertisement

ಡಮ್ಮಿ ಸಂಸ್ಥೆ ಹೊಂದಿದ್ದ ಪಿಎಫ್ಐ; ಎನ್‌ಐಎ, ಇ.ಡಿ. ತನಿಖೆಯಲ್ಲಿ ಬಹಿರಂಗ

12:38 AM Sep 25, 2022 | Team Udayavani |

ತಿರುವನಂತಪುರ/ಹೊಸದಿಲ್ಲಿ: ದೇಶದ ತನಿಖಾ ಸಂಸ್ಥೆಗಳ ದಿಕ್ಕು ತಪ್ಪಿಸಲು, ಬಂಧನ ದಿಂದ ಪಾರಾಗಲು ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್ಐ) ಅನೇಕ ಡಮ್ಮಿ ಸಂಸ್ಥೆಗಳನ್ನು ಹುಟ್ಟುಹಾಕಿದೆ ಎಂದು ಎನ್‌ಐಎ, ಇಡಿ ತನಿಖೆಯಿಂದ ಬಹಿರಂಗವಾಗಿದೆ.

Advertisement

“ಅಪರಾಧ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸರಕಾರ ಪಿಎಫ್ಐ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ಎಂಬ ಸುಳಿವು ಅದರ ಸದಸ್ಯರಿಗಿತ್ತು. ಹಾಗಾಗಿ ತನಿಖಾ ಸಂಸ್ಥೆಗಳು ಮತ್ತು ಗುಪ್ತಚರ ಸಂಸ್ಥೆಗಳ ದಿಕ್ಕು ತಪ್ಪಿಸಲು ಅನೇಕ ಡಮ್ಮಿ ಸಂಸ್ಥೆಗಳನ್ನು ಪಿಎಫ್ಐ ಸ್ಥಾಪಿಸಿತು,’ ಎಂದು ಮೂಲಗಳು ತಿಳಿಸಿವೆ.

“ದಿ ಕ್ಯಾಂಪಸ್‌ ಫ್ರಂಟ್‌ ಆಫ್ ಇಂಡಿಯಾ, ರೆಹಾಬ್‌ ಇಂಡಿಯಾ ಫೌಂಡೇಶನ್‌, ನ್ಯಾಶನಲ್‌ ವುಮೆನ್ಸ್‌ ಫ್ರಂಟ್‌, ಆಲ್‌ ಇಂಡಿಯಾ ಲೀಗಲ್‌ ಕೌನ್ಸಿಲ್‌ ಮತ್ತು ಎಸ್‌ಡಿಪಿಐ, ಇವುಗಳು ಪಿಎಫ್ಐ ಹುಟ್ಟುಹಾಕಿದ ಡಮ್ಮಿ ಸಂಸ್ಥೆಗಳು,’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಬಿಜೆಪಿ, ಆರ್‌ಎಸ್‌ಎಸ್‌ ನಾಯಕರ ಮೇಲೆ ದಾಳಿ ನಡೆಸಲು ಪಿಎಫ್ಐ ಸದಸ್ಯರು ಹೊಂಚು ಹಾಕಿದ್ದರು. ಉಗ್ರ ತರಬೇತಿ ಚಟುವಟಿಕೆಗಳಿಗಾಗಿ ಹೊರದೇಶಗಳಿಂದ ಪಿಎಫ್ಐ ದೇಣಿಗೆ ಸಂಗ್ರಹಿಸುತ್ತಿತ್ತು,’ ಎಂದು ತಿಳಿಸಿದ್ದಾರೆ.

ಪಿಎಫ್ಐ ಕಾರಣ: ಇದೇ ವೇಳೆ‌ದಲ್ಲಿ ಶುಕ್ರವಾರ ಬಂದ್‌ ವೇಳೆ ನಡೆದಿದ್ದ ಹಿಂಸಾಕೃತ್ಯಗಳಿಗೆ ಪಿಎಫ್ಐ ಕಾರಣ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆರೋಪಿಸಿದ್ದಾರೆ. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿನ ಕ್ರಮ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ತಿರುವನಂತಪುರದಲ್ಲಿ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್‌ “ರಾಜ್ಯದಲ್ಲಿ ಶುಕ್ರವಾರ ನಡೆದಿದ್ದ ಹಿಂಸಾಕೃತ್ಯಗಳು ಪೂರ್ವ ನಿರ್ಧರಿತ. ಇಂಥ ಘಟನೆಗಳ ಮೂಲಕ ರಾಜ್ಯಕ್ಕೆ ನಷ್ಟ ಉಂಟು ಮಾಡಲು ಪ್ರಯತ್ನ ನಡೆಸಲಾಗಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದವರ ಪೈಕಿ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ. ‘ ಎಂದು ಹೇಳಿದ್ದಾರೆ.

ದುಂಡಾವರ್ತಿ: ಕೇರಳದಾದ್ಯಂತ ಶುಕ್ರವಾರ ಪಿಎಫ್ಐ ಕಾರ್ಯಕರ್ತರು ಸಂಘಟಿತರಾಗಿ ಕುಕೃತ್ಯಗಳನ್ನು ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ. ಮುಖವನ್ನು ಮರೆಮಾಚಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಿದ್ದಾರೆ. ಹೀಗಾಗಿ, ಸಾರ್ವಜನಿಕರು ಮತ್ತು ವೈದ್ಯರು ಗಾಯಗೊಂಡಿದ್ದಾರೆಎಂದು ದೂರಿದ್ದಾರೆ.

1,013 ಮಂದಿ ಸೆರೆ: ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ 281 ಕೇಸುಗಳನ್ನು ದಾಖಲಿಸ ಲಾಗಿದೆ, 1,013 ಮಂದಿಯನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 819 ಮಂದಿ ಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದು ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಕಾರವೇ ಕಾರಣ: ಕೇರಳದಲ್ಲಿ ಉಂಟಾಗಿ ರುವ ಹಿಂಸಾಚಾರಕ್ಕೆ ಎಲ್‌ಡಿಎಫ್ ಸರಕಾರವೇ ಕಾರಣ ಎಂದು ಬಿಜೆಪಿ ಮುಖಂಡ ಪ್ರಕಾಶ್‌ ಜಾಬ್ಡೇಕರ್‌ ಹೇಳಿದ್ದಾರೆ. ಕೊಚ್ಚಿಯಲ್ಲಿ ಮಾತನಾಡಿದ ಅವರು, ಸಿಪಿಎಂ ಮತ್ತು ಪಿಎಫ್ಐ ರಾಜ್ಯದಲ್ಲಿ ರಹಸ್ಯ ಮೈತ್ರಿ ಹೊಂದಿದೆ. ಹೀಗಾಗಿಯೇ ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎಂದು ಆರೋಪಿಸಿದ್ದಾರೆ.

ಮೂವರ ಬಂಧನ: ಹೊಸದಿಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎನ್‌ಐಎ ಮೂವರು ಅಪ ರಾಧಿ ಗ್ಯಾಂಗ್‌ಗಳ ನಾಯಕರನ್ನು ಬಂಧಿಸಿದೆ. ಅವರನ್ನು ನೀರಜ್‌ ಶೆರಾವತ್‌, ಕೌಶಲ್‌, ಭೂಪಿಂದರ್‌ ಸಿಂಗ್‌ ಎಂದು ಗುರುತಿಸಲಾಗಿದೆ.
ಬಂದ್‌ಗೆ ನಿರಾಕರಣೆ: ಕಣ್ಣೂರಿನ ತಳಿಪರಂಬ ಎಂಬಲ್ಲಿ ಅಂಗಡಿ ಮಾಲಕನೊಬ್ಬ ಪಿಎಫ್ಐ ಕಾರ್ಯಕರ್ತರು ಬಲವಂತವಾಗಿ ಮಳಿಗೆ ಮುಚ್ಚಿಸುವುದರ ವಿರುದ್ಧ ಸಿಡಿದು ನಿಂತಿದ್ದ ವಿಚಾರ ಬಹಿರಂಗವಾಗಿದೆ.

ಪಾಕ್‌ ಪರ ಘೋಷಣೆ
ಎನ್‌ಐಎ ದಾಳಿ ಖಂಡಿಸಿ ಶುಕ್ರವಾರ ಪುಣೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆ ವೇಳೆ ಪಾಕಿಸ್ಥಾನ ಜಿಂದಾಬಾದ್‌ ಎಂಬ ಘೋಷಣೆ ಕೂಗಲಾಗಿದೆ. ಈ ಬಗೆಗಿನ ವೀಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆಯುವ ವೇಳೆ ಘೋಷಣೆ ಕೂಗುತ್ತಿ ರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.

ಅವಕಾಶ ಇಲ್ಲ: ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ “ಶಿವಾಜಿ ಮಹಾರಾಜರ ನಾಡಿನಲ್ಲಿ ಅದ ಕ್ಕೆಲ್ಲ ಅವಕಾಶ ಇಲ್ಲ. ಘೋಷಣೆ ಕೂಗಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ. ಶುಕ್ರವಾರದ ಘಟನೆಗೆ ಸಂಬಂಧಿಸಿ ದಂತೆ 60 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

ಪಿಎಫ್ಐ ಅನ್ನು ನಿಷೇಧಿಸುವ ಕಾಲ ಬಂದಿದೆ. ಈ ಬಗ್ಗೆ ಅಸ್ಸಾಂ ಸರಕಾರಕ್ಕೆ ಯಾವುದೇ ಗೊಂದಲ ಇಲ್ಲ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಸತತವಾಗಿ ಮನವಿ ಮಾಡುತ್ತಾ ಬಂದಿದ್ದೇನೆ.
-ಹಿಮಾಂತ ಬಿಸ್ವ ಶರ್ಮ,
ಅಸ್ಸಾಂ ಮುಖ್ಯಮಂತ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next