Advertisement

ಹಿಂದೂ ದೇಗುಲ, ಮುಖಂಡರೇ ಶಂಕಿತರ ಗುರಿ!

12:50 AM Apr 15, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸೂತ್ರಧಾರಿ ಅಬ್ದುಲ್‌ ಮತೀನ್‌ ತಾಹಾ ಹಾಗೂ ಬಾಂಬರ್‌ ಮುಸಾವೀರ್‌ ಹುಸೇನ್‌ ಶಾಜೀಬ್‌ ಗೆ ಹಿಂದೂ ಮುಖಂಡರು, ಹಿಂದೂ ದೇವಾಲಯಗಳು ಹಾಗೂ ಹಿಂದೂ ಧಾರ್ಮಿಕ ಹೆಸರಿನ ಪ್ರಸಿದ್ಧ ಸ್ಥಳಗಳೇ ಗುರಿ ಆಗಿದ್ದವು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

Advertisement

2020ರಲ್ಲಿ ಸದ್ದುಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ಗುರಪ್ಪನಪಾಳ್ಯದಲ್ಲಿ ಐಸಿಸ್‌ ಪ್ರೇರಿತ ಅಲ್‌-ಹಿಂದ್‌ ಸಂಘಟನೆ ಮುಖಂಡ (ಅಮೀರ್‌) ಖ್ವಾಜಾ ಮೊಹಿನುದ್ದೀನ್‌, ಮೆಹಬೂಬ್‌ ಪಾಷಾ ಹಾಗೂ ಇತರರು ರಾಜ್ಯದಲ್ಲಿ ಹಿಂದೂ ಮುಖಂಡರು, ದೇವಾಲಯಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮತೀನ್‌ ಮತ್ತು ಮುಸಾವೀರ್‌ ಕೂಡ ಪಾಲ್ಗೊಂಡಿದ್ದರು. ತಮಿಳುನಾಡಿನ ಹಿಂದೂ ಮುಖಂಡ ಸುರೇಶ್‌ ಹತ್ಯೆ ಹಾಗೂ ಕೇರಳದ ಪಿಎಸ್‌ಐ ವಿಲ್ಸನ್‌ ಹತ್ಯೆ ಮಾದರಿಯಲ್ಲೇ ರಾಜ್ಯದಲ್ಲಿ ಹಿಂದೂ ಮುಖಂಡರ ಹತ್ಯೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು.

ಈ ಮಾಹಿತಿ ಮೇರೆಗೆ ಸಿಸಿಬಿ ಹಾಗೂ ಎನ್‌ಐಎ ಅಧಿಕಾರಿಗಳು 2020ರ ಜನವರಿ 2ನೇ ವಾರದಲ್ಲಿ ದಾಳಿ ನಡೆಸಿ ಮೆಹಬೂಬ್‌ ಪಾಷಾ ಹಾಗೂ ಇತರರನ್ನು ಬಂಧಿಸಿದ್ದವು. ಅಷ್ಟರಲ್ಲಿ ಖ್ವಾಜಾ ಮೊಹಿನುದ್ದೀನ್‌ ದಿಲ್ಲಿಗೆ ಪರಾರಿಯಾಗಿದ್ದ. ತನಿಖಾ ಸಂಸ್ಥೆಗಳ ದಾಳಿ ವೇಳೆ ಮತೀನ್‌ ಮತ್ತು ಮುಸಾವೀರ್‌ ಸಮೀಪದಲ್ಲೇ ಟೀ ಅಂಗಡಿಗೆ ತೆರಳಿದ್ದರು. ದಾಳಿ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದರು. ಅನಂತರ ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ವಾಸವಾಗಿದ್ದರು.

ವಿದೇಶಿ ಹ್ಯಾಂಡ್ಲರ್‌ ಸಂಪರ್ಕ
ಈ ಮಧ್ಯೆ ಅಬ್ದುಲ್‌ ಮತೀನ್‌ ತಾಹಾನ ಕಾರ್ಯವೈಖರಿಯನ್ನು ಕಂಡು ಈ ಹಿಂದೆಯೇ ಮೆಹಬೂಬ್‌ ಪಾಷಾ ಮತ್ತು ಖ್ವಾಜಾ ಮೊಹಿನುದ್ದೀನ್‌ ಒಂದು ವೇಳೆ ತಾವು ಬಂಧನಕ್ಕೊಳಗಾದರೆ ರಾಜ್ಯ ಮತ್ತು ತಮಿಳುನಾಡಿನಲ್ಲಿ ಸಂಘಟನೆ ಬಲಪಡಿಸಬೇಕು ಎಂದು ಸೂಚಿಸಿದ್ದರು. ಅಲ್ಲದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹ್ಯಾಂಡ್ಲರ್‌ಗಳನ್ನು ಪರಿಚಯಿಸಿಕೊಟ್ಟಿದ್ದರು. ಅನಂತರ ಕೆಲವು ತಿಂಗಳಲ್ಲೇ ಖ್ವಾಜಾ ಮೊಹಿನುದ್ದೀನ್‌ನನ್ನು ದಿಲ್ಲಿಯ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿತ್ತು. ಆ ಬಳಿಕವೂ ಮತೀನ್‌ ತಾಹಾನ ಮೇಲೆ ಹೆಚ್ಚು ನಿಗಾ ಇರಿಸಲಾಗಿತ್ತು. ಆದರೆ ಆರೋಪಿ ಹಿಂದೂ ಹೆಸರಿಟ್ಟುಕೊಂಡು ಓಡಾಡುತ್ತಿದ್ದ. ಐಇಡಿ ತಯಾರಿಕೆ ತರಬೇತಿಯನ್ನು ಖ್ವಾಜಾ ಮೊಹಿನುದ್ದೀನ್‌ ಹಾಗೂ ಇತರರ ಮೂಲಕ ಮತೀನ್‌ ಪಡೆದುಕೊಂಡಿದ್ದ. ಈತ ಮುಸಾವೀರ್‌ ಹುಸೇನ್‌ ಶಾಜೀಬ್‌, ಚಿಕ್ಕಮಗಳೂರಿನ ಮುಜಾಮೀಲ್‌ ಷರೀಫ್ಗೂ ತರಬೇತಿ ನೀಡಿದ್ದಾನೆ.

ಈ ಮಧ್ಯೆ ಎಂಡ್‌ ಟು-ಎಂಟು ಎನ್‌ಕ್ರಿಪ್ಟ್ ಮಾಡಿದ ಆ್ಯಪ್‌ಗಳನ್ನು ಬಳಸಿಕೊಂಡು ವಿದೇಶಿ ಹ್ಯಾಂಡ್ಲರ್‌ಗಳಿಂದ ಕ್ರಿಪ್ಟೋ ಕರೆನ್ಸಿ ಮೂಲಕ ಲಕ್ಷಾಂತರ ರೂ. ಪಡೆದುಕೊಂಡು ಕರ್ನಾಟಕ, ತಮಿಳುನಾಡು ಭಾಗದಲ್ಲಿ ಸಂಘಟನೆ ಕಾರ್ಯ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡಿದ್ದ ಮತೀನ್‌, ಅವರ ಸೂಚನೆ ಮೇರೆಗೆ ಹಿಂದೂ ಮುಖಂಡರು, ಹಿಂದೂ ದೇವಾಲಯಗಳನ್ನು ಗುರಿ ಮಾಡಿಕೊಂಡಿದ್ದ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಹಿಂದೂ ಮುಖಂಡರು, ದೇವಾಲಯಗಳು ಗುರಿ
ದೇಶದಲ್ಲಿ ಐಸಿಸ್‌ ಸಂಘಟನೆ ನಿಷೇಧಿಸಿದ ಬಳಿಕ ಖ್ವಾಜಾ ಮೊಹಿನುದ್ದೀನ್‌ ರಾಷ್ಟ್ರೀಯ ಹ್ಯಾಂಡ್ಲರ್‌ ಪಾಷಾ ಎಂಬಾತನ ಸೂಚನೆ ಮೇರೆಗೆ ಅಲ್‌-ಹಿಂದ್‌ ಸಂಘಟನೆ ಸ್ಥಾಪಿಸಿದ್ದ. ಈ ಸಂಘಟನೆಯ ಉದ್ದೇಶ ಹಿಂದೂ ಮುಖಂಡರು, ಪ್ರಸಿದ್ಧ ಹಿಂದೂ ದೇವಾಲಯಗಳು ಹಾಗೂ ಹಿಂದೂ ಪರ ತೀರ್ಪು ನೀಡುವ ನ್ಯಾಯಾಧೀಶರು, ಪೊಲೀಸ್‌ ಅಧಿಕಾರಿಗಳನ್ನು ಗುರಿ ಮಾಡಿ ಹತ್ಯೆ ಮಾಡುವುದಾಗಿತ್ತು. ಈ ಹಿನ್ನೆಲೆಯಲ್ಲಿ 2018-2019ರಲ್ಲಿ ತಮಿಳುನಾಡಿನಲ್ಲಿ ಹಿಂದೂ ಮುಖಂಡ ಸುರೇಶ್‌ ಹತ್ಯೆ ಮಾಡಲಾಗಿತ್ತು. ಬಳಿಕ ಕೇರಳದ ವಿಶೇಷ ತನಿಖಾಧಿಕಾರಿ ವಿಲ್ಸನ್‌ ಹತ್ಯೆಗೈಯಲಾಗಿತ್ತು. ಆ ಬಳಿಕ ರಾಜ್ಯದಲ್ಲಿ ಹಿಂದೂ ಮುಖಂಡರ ಹತ್ಯೆ ಸಭೆ ಕರೆಯಲಾಗಿತ್ತು. ಆದರೆ ಪೊಲೀಸರು ದಾಳಿ ನಡೆಸಿದ್ದರು. ಆಗ ಮತೀನ್‌ ತನ್ನ ಕೆಲವು ಸಹಚರರ ಮೂಲಕ ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದ. ಅದಕ್ಕಾಗಿ ವಿದೇಶಗಳಿಂದ ಹಣ ಪಡೆದುಕೊಂಡಿದ್ದಾನೆ.

ಮೊದಲಿಗೆ ಶಿವಮೊಗ್ಗ ತುಂಗಾ ತೀರದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಲು ಆರ್ಥಿಕ ನೆರವನ್ನು ಆನ್‌ಲೈನ್‌ ಮೂಲಕ ಮತ್ತು ಬಾಂಬ್‌ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ಚಿಕ್ಕಮಗಳೂರಿನ ಮುಜಾಮೀಲ್‌ ಷರೀಫ್ ಮೂಲಕ ತಲುಪಿಸಿದ್ದ. ಮಂಗಳೂರು ಕುಕ್ಕರ್‌ ಸ್ಫೋಟದ ಬಾಂಬರ್‌ ಮೊಹಮ್ಮದ್‌ ಶಾರೀಕ್‌ಗೆ ಕದ್ರಿ ದೇವಸ್ಥಾನ ಸ್ಫೋಟಿಸಲು ಮತೀನ್‌ ಸೂಚನೆ ನೀಡಿದ್ದ. ಅಲ್ಲದೆ ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಫೋಟದಲ್ಲೂ ಮತೀನ್‌ ಕೈವಾಡ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಮೇಶ್ವರಂ ಕೆಫೆ ಮೇಲೇಕೆ ದಾಳಿ?
ಹಿಂದೂ ಮುಖಂಡರು, ಹಿಂದೂ ದೇವಾಲಯಗಳು ಮಾತ್ರವಲ್ಲದೆ ಧಾರ್ಮಿಕ ಹಾಗೂ ದೇವರ ಹೆಸರು ಇರಿಸಿಕೊಂಡು ಹೆಚ್ಚು ಪ್ರಸಿದ್ಧಿ ಪಡೆದ ಹೊಟೇಲ್‌, ಮತ್ತಿತರ ಸ್ಥಳಗಳ ಮೇಲೆ ನಿಗಾ ಇರಿಸಿದ್ದ ಶಂಕಿತರು ಇತ್ತೀಚೆಗೆ ರಾಮೇಶ್ವರಂ ಕೆಫೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದನ್ನು ಗಮನಿಸಿದ್ದರು. ಈ ಮಧ್ಯೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಲಾಗಿತ್ತು. ಹೊಟೇಲ್‌ಗ‌ೂ ಅದೇ ಹೆಸರು ಇದ್ದ ಕಾರಣ ರಾಮೇಶ್ವರಂ ಕೆಫೆಯನ್ನೇ ಗುರಿ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್‌ಗೆ ಪರಾರಿ ಸಂಚು!
ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ಮುಸಾವೀರ್‌ ಹುಸೇನ್‌ ಶಾಜೀಬ್‌ ಮತ್ತು ಮತೀನ್‌ ತಾಹಾ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಕೊನೆಗೆ ಕೋಲ್ಕತಾಗೆ ತೆರಳಿದ್ದರು. ಮಾ. 25ರಿಂದ 28ರ ವರೆಗೆ ಕೋಲ್ಕೊತ್ತಾದ ಡ್ರೀಮ್‌ ಗೆಸ್ಟ್‌ ಹೌಸ್‌ನಲ್ಲಿ ತಂಗಿದ್ದರು. ಬಳಿಕ ದಿಘಾದ ಹೊಟೇಲ್‌ನಲ್ಲಿ ವಾಸವಾಗಿದ್ದರು. ಅನಂತರ ಬಾಂಗ್ಲಾದೇಶಕ್ಕೆ ಪರಾರಿಯಾಗಿ, ಅಲ್ಲಿಂದ ನೇಪಾಲಕ್ಕೆ ತೆರಳುವ ಯೋಜನೆ ಹೊಂದಿದ್ದರು. ಬಳಿಕ ನಕಲಿ ಪಾಸ್‌ಪೋರ್ಟ್‌ ಮಾಡಿಸಿಕೊಂಡು, ಕಾಠ್ಮಂಡುವಿನಿಂದ ಪಾಕಿಸ್ಥಾನ, ಕೊನೆಯದಾಗಿ ಅಫ್ಘಾನಿಸ್ಥಾನಕ್ಕೆ ತೆರಳಿ ಸಂಘಟನೆಯ ಹ್ಯಾಂಡ್ಲರ್‌ಗಳ ಭೇಟಿಗೆ ಸಿದ್ಧತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next