Advertisement

ಸಿಡಿದೆದ್ದ ಬಿಜೆಪಿ: ನೇಹಾ ಸಾವು ಖಂಡಿಸಿ ಪ್ರತಿಭಟನೆ; ಸಿಬಿಐ ತನಿಖೆಗೆ ಆಗ್ರಹ

12:36 AM Apr 23, 2024 | Team Udayavani |

ಬೆಂಗಳೂರು/ಹುಬ್ಬಳ್ಳಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಹತ್ಯೆ ಖಂಡಿಸಿ ಹಾಗೂ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿ ಮೀರಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದ ಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಸಹಿತ ವಿವಿಧ ಸಂಘಟನೆಗಳು ಸೋಮವಾರ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

Advertisement

ಹಾಡಹಗಲೇ ಹುಬ್ಬಳ್ಳಿಯ ಕಾಂಗ್ರೆಸ್‌ ಕಾರ್ಪೊರೇಟರ್‌ ಪುತ್ರಿ ನೇಹಾ ಅವರನ್ನು ಹತ್ಯೆಗೈಯ್ಯಲಾಗಿದೆ. ಕಾಂಗ್ರೆಸ್‌ನ ಮತ ಓಲೈಕೆಯಿಂದ ಇಂತಹ ಕೃತ್ಯಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಹಂತಕ ಫ‌ಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು, ಪ್ರಕರಣದ ನಿಷ್ಪಕ್ಷ ತನಿಖೆಗೆ ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು.

ನೇಹಾ ಹಿರೇಮಠ ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಮಠಾಧೀಶರು, ಸಂಘಸಂಸ್ಥೆಗಳ ಸಹಿತ ಸಾವಿರಾರು ಜನ ಭಾಗಿಯಾಗಿದ್ದರು.ಬೆಳಗಾವಿಯಲ್ಲಿ ಹಿಂದೂ ಮಹಿಳಾ ಜಾಗೃತ ವೇದಿಕೆ ಮತ್ತಿತರ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ ನಡೆಸಿ ರಾಜ್ಯ ಸರಕಾರ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಎಬಿವಿಪಿಯಿಂದ ಬಿವಿಬಿ ಕಾಲೇಜು ಮುಂದೆ ನೇಹಾಗೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ಉಡುಪಿ, ಮಂಗಳೂರು, ಬೀದರ್‌, ದಾವಣಗೆರೆ, ಕಾರವಾರ, ಬಳ್ಳಾರಿ, ಧಾರವಾಡ, ವಿಜಯ ಪುರದಲ್ಲಿ ಬಿಜೆಪಿ, ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕೊಪ್ಪಳದಲ್ಲಿ ಬಿಜೆಪಿ- ಜೆಡಿಎಸ್‌ ಕಾರ್ಯ ಕರ್ತರು ಜಂಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮುಸ್ಲಿಂ ಸಮುದಾಯದಿಂದ ಅರ್ಧ ದಿನ ಧಾರವಾಡ ಬಂದ್‌ಗೆ ಕರೆ ನೀಡಲಾಗಿತ್ತು. ಗದಗದಲ್ಲಿ ಬಿಜೆಪಿ, ಎಬಿವಿಪಿ ಹಾಗೂ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು.

ನೇಹಾ ಹತ್ಯೆ ಖಂಡಿಸಿ ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ತುಮ ಕೂರಿನಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಕಾಂಗ್ರೆಸ್‌ ಸರಕಾರವು ಕರ್ನಾಟಕ ವನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದೆ. ತುಘಲಕ್‌ ದರ್ಬಾರ್‌ ನಡೆಸುತ್ತಿದೆ. ಇದು ತಾಲಿಬಾನ್‌ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಿಐಡಿ ತನಿಖೆಗೆ: ಸರಕಾರ
ಬೆಂಗಳೂರು: ನೇಹಾ ಹಿರೇಮಠ ಹತ್ಯೆ ಪ್ರಕರಣ ವನ್ನು ರಾಜ್ಯ ಸರಕಾರವು ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿ ಅಧಿಕಾರಿಗಳ ತಂಡ ಸೋಮವಾರವೇ ಹುಬ್ಬಳ್ಳಿಗೆ ತೆರಳಿ ಪೊಲೀಸರಿಂದ ನೇಹಾ ಹತ್ಯೆ ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ| ಪರಮೇಶ್ವರ್‌ ತುಮ ಕೂರಿನಲ್ಲಿ ತಿಳಿಸಿದ್ದಾರೆ. ನಿಷ್ಪಕ್ಷ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 10-12 ದಿನಗಳ ಒಳಗಾಗಿ ತನಿಖಾ ವರದಿಯನ್ನು ಸಲ್ಲಿಸುವಂತೆ ಸಮಯ ನಿಗದಿಪಡಿಸಿದ್ದೇವೆ ಎಂದರು. ಶಿವಮೊಗ್ಗದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಪ್ರಕರಣ ಸಂಬಂಧ ವಿಶೇಷ ಕೋರ್ಟ್‌ ರಚಿಸುವುದಾಗಿಯೂ ತಿಳಿಸಿದ್ದಾರೆ.

ಅಂಜುಮನ್‌ ನೇತೃತ್ವದಲ್ಲಿ ಪ್ರತಿಭಟನೆ
ಧಾರವಾಡದಲ್ಲಿ ಅಂಜುಮನ್‌ ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ಅಂಗಡಿ-ಮುಂಗಟ್ಟು ಬಂದ್‌ ಮಾಡಿದ್ದ ಮುಸ್ಲಿಂ ಸಮುದಾಯದವರು ಅಂಗಡಿಗಳ ಬಾಗಿಲಿಗೆ “ಜಸ್ಟಿಸ್‌ ಫಾರ್‌ ನೇಹಾ ಹಿರೇಮಠ’ ಎಂಬ ಪೋಸ್ಟರ್‌ ಅಂಟಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅನಂತರ ತೋಳಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್‌ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ಹುಬ್ಬಳ್ಳಿಯಲ್ಲೂ ಮುಸ್ಲಿಂ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್‌ ಮಾಡಿ ನೇಹಾ ಹತ್ಯೆಯನ್ನು ಬಲವಾಗಿ ಖಂಡಿಸಿದರು.

ಹುಬ್ಬಳ್ಳಿ ಘಟನೆಯನ್ನು ಖಂಡಿಸುತ್ತೇನೆ. ನಮ್ಮ ಅವಧಿಯಲ್ಲಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ. ಬಿಜೆಪಿ ಆಡಳಿತದ ವೇಳೆ 1,300ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ನಡೆದಿದ್ದವು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next