ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ ಇಲಾಖೆ ಕೊರೊನಾ ಕಾರಣದಿಂದ ಮುಚ್ಚುಗಡೆಯಾದ ಸಂಸ್ಥೆಗಳ ಬಡ ಕಾರ್ಮಿಕರಿಗಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು (ಪಿಎಂಜಿಕೆವೈ) ಮಾ. 26ರಿಂದ ಅನ್ವಯವಾಗುವಂತೆ ಘೋಷಿಸಿದೆ.
ಇದು 15,000 ರೂ. ಗಿಂತ ಕಡಿಮೆ ವೇತನ ಪಡೆಯುವ ಕಾರ್ಮಿಕರಿಗೆ ಅನ್ವಯವಾಗುತ್ತದೆ. ನೂರು ನೌಕರರ ವರೆಗೆ ಇರುವ ನೌಕರರ ಭವಿಷ್ಯನಿಧಿ ಕಚೇರಿಯಲ್ಲಿ ನೋಂದಣಿಯಾದ ಸಂಸ್ಥೆಗಳಿಗೆ ಅನ್ವಯವಾಗಲಿದೆ. ಸದಸ್ಯರ ಮೂರು ತಿಂಗಳ ಇಪಿಎಫ್ ಮತ್ತು ಇಪಿಎಸ್ ದೇಣಿಗೆಯನ್ನು (ನೌಕರರ ಪಾಲು ಶೇ. 12, ಪಿಂಚಣಿ ನಿಧಿ ಶೇ. 8.33, ಉದ್ಯೋಗದಾತರ ಪಾಲು
ಶೇ. 3.27 ಒಟ್ಟು ಶೇ. 24) ಕೇಂದ್ರ ಸರಕಾರ ಭರಿಸಲಿದೆ.
ಈಗಾಗಲೇ ಪಾವತಿಯಾಗಿದ್ದರೆ ಸರಕಾರ ಪಾವತಿಸುವುದಿಲ್ಲ. ಪಾವತಿಯಾಗದೇ ಇದ್ದರೆ ಮಾ. 26ರ ವರೆಗಿನ ವೇತನ ಪಾವತಿಯ ಲೆಕ್ಕಾಚಾರಗಳನ್ನು ಉದ್ಯೋಗದಾತ ಸಂಸ್ಥೆ ಭವಿಷ್ಯನಿಧಿ ಕಚೇರಿಗೆ ಇಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಮೂಲಕ ಫೈಲಿಂಗ್ ಮಾಡಿದ ಬಳಿಕ ಸರಕಾರ ತನ್ನ ಪಾಲಿನ ಮೊತ್ತವನ್ನು ಭರಿಸಲಿದೆ. ಇದರ ವಿವರಗಳು ಇಪಿಎಫ್ಒ ವೆಬ್‌ಸೈಟ್‌ನ ಹೋಮ್ ಪೇಜ್‌ನ ಟಿಎಬಿ “ಕೋವಿಡ್-19′ ವಿಭಾಗದಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.