ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಬೆಲೆ 81.63 ರೂಪಾಯಿ ಆಗಿದ್ದು, ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಬೆಲೆ 89.01 ರೂಪಾಯಿಯಾಗಿದೆ ಎಂದು ಎಎನ್ ಐ ವರದಿ ಮಾಡಿದೆ.
ಏತನ್ಮಧ್ಯೆ ಪೆಟ್ರೋಲ್ ದರ ನೂರು ರೂ. ದಾಟಲಿದೆ ಎಂದು ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲಿ ಟೀಕಿಸತೊಡಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗುತ್ತಿರುವುದು ಪೆಟ್ರೋಲ್, ಡೀಸೆಲ್ ಬೆಲೆ ಏರಲು ಕಾರಣವಾಗಿದೆ.
ಏತನ್ಮಧ್ಯೆ ಪೆಟ್ರೋಲ್, ಡೀಸೆಲ್ ದರ 99.99ರೂಪಾಯಿಗಿಂತ ಒಂದೇ ಒಂದು ಪೈಸೆ ಜಾಸ್ತಿಯಾಗಲು ಸಾಧ್ಯವಿಲ್ಲವಂತೆ! ಅರೇ ಇದೇನಪ್ಪಾ ಅಂತ ಹುಬ್ಬೇರಿಸುತ್ತಿದ್ದೀರಾ? ಹೌದು ಅದಕ್ಕೊಂದು ಬಲವಾದ ಕಾರಣವಿದೆ. ಈಗಿರುವ ಹಾಲಿ ಪೆಟ್ರೋಲ್, ಡೀಸೆಲ್ ದರ ತೋರಿಸುವ ಯಂತ್ರದಲ್ಲಿ 99.99 ರೂ.ಗಿಂತ ಹೆಚ್ಚು ತೋರಿಸುವ ಸಂಖ್ಯೆ ಇಲ್ಲವಂತೆ!
ಸಾಮಾನ್ಯ ಪೆಟ್ರೋಲ್ ಉಪಯೋಗಿಸುವ ಗ್ರಾಹಕರಿಗೆ ಇದೊಂದು ಖುಷಿಯ ವಿಚಾರವೇ! ಸೆಪ್ಟೆಂಬರ್ 8ರಂದು ಅಕ್ಟೇನ್ ಗುಣಮಟ್ಟದ ಪೆಟ್ರೋಲ್ ದರ ಲೀಟರ್ ಗೆ 100.33 ರೂಪಾಯಿಗೆ ಏರಿತ್ತು. ಆದರೆ ಮೆಷಿನ್ ನಲ್ಲಿ ತೋರಿಸುತ್ತಿದ್ದ ದರ 0.33 ರೂ. ಅಂತೆ..ಈ ಬಗ್ಗೆ ಇಂಡಿಯಾ ಟೈಮ್ಸ್ ಪೆಟ್ರೋಲ್ ಬಂಕ್ ಮಾಲೀಕರನ್ನು ಮಾತನಾಡಿಸಿದ್ದು, ನಾವೇ ವೈಯಕ್ತಿಕವಾಗಿ ಪೆಟ್ರೋಲ್ ದರವನ್ನು ದಾಖಲಿಸುತ್ತಿದ್ದೇವೆ. ಮೆಷಿನ್ ನಲ್ಲಿ 100 ರೂ.ಗಿಂತ ಹೆಚ್ಚಿನ ದರಪಟ್ಟಿ ತೋರಿಸುವ ತಂತ್ರಜ್ಞಾನ ಇಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಅಲ್ಲದೇ ಪೆಟ್ರೋಲ್ ದರ ತೋರಿಸುವ ಪಟ್ಟಿಯನ್ನು ಬದಲಾಯಿಸಬೇಕಿದ್ದು, ಅದಕ್ಕಾಗಿ ಪೆಟ್ರೋಲ್ ಪಂಪ್ ಸರ್ವಿಸ್ ಸ್ಥಗಿತಗೊಳಿಸಿ, ನುರಿತ ತಂತ್ರಜ್ಞರನ್ನು ಕರೆದು ಮೆಷಿನ್ ನಲ್ಲಿ ದರ ಪಟ್ಟಿ ಬದಲಾವಣೆ ಮಾಡಬೇಕಾಗಿದೆ. ಇದಕ್ಕೆ ಸಮಯ ಹಿಡಿಯುವುದಾಗಿ ವರದಿ ತಿಳಿಸಿದೆ.