Advertisement

ಮನೆ ಬಾಗಿಲಿಗೆ ಬರುತ್ತೆ ಪೆಟ್ರೋಲ್‌, ಡೀಸೆಲ್‌ ! 

03:45 AM Apr 22, 2017 | |

ನವದೆಹಲಿ: ಮುಂದೊಂದು ದಿನ ಅಡುಗೆ ಅನಿಲ ಸಿಲಿಂಡರ್‌ ಮಾದರಿಯಲ್ಲೇ ಪೆಟ್ರೋಲ್‌, ಡೀಸೆಲ್‌ ಕೂಡ ಮನೆ ಬಾಗಿಲಿಗೆ ಬರುತ್ತದೆ! ಕೇಂದ್ರ ಸರ್ಕಾರ ಇಂಥದ್ದೊಂದು ಆಲೋಚನೆಯಲ್ಲಿದೆ.

Advertisement

ತೈಲೋತ್ಪನ್ನ ವಸ್ತುಗಳನ್ನು ಮನೆ ಬಾಗಿಲಿಗೆ ಕಳಿಸುವುದರಿಂದ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಕಿರಿಕಿರಿ ತಪ್ಪಲಿದೆ. ಸಮಯವೂ ಉಳಿತಾಯ ಆಗಲಿದೆ. ಜನರ ಅಗತ್ಯತೆಗೆ ಅನುಗುಣವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದರೆ, ಸಮೀಪದಲ್ಲಿ ಇರುವ ಬಂಕ್‌ಗಳು ಮನೆಬಾಗಿಲಿಗೆ ತಂದು ಕೊಡಲಿವೆ.

ತೈಲ ಸಚಿವಾಲಯ ಈಗಾಗಲೇ ಈ ಬಗ್ಗೆ ತೈಲ ಪೂರೈಕೆ ಕಂಪನಿಗಳ ಜತೆ ಚರ್ಚಿಸಿ ಪ್ರಸ್ತಾವನೆಯನ್ನೂ ಸಲ್ಲಿಸಿರುವ ಸುಳಿವನ್ನು ನೀಡಿದೆ. ಈ ಸಂಬಂಧ ಸಚಿವಾಲಯ ಟ್ವೀಟ್‌ ಮೂಲಕ ಜನತೆಯ ಅಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದೆ.

ಒಂದು ಲೆಕ್ಕಾಚಾರದ ಪ್ರಕಾರ ದೇಶದಲ್ಲಿರುವ 59,595 ಬಂಕ್‌ಗಳಲ್ಲಿ ಪ್ರತಿದಿನ ಹೆಚ್ಚಾ ಕಡಿಮೆ 3.5 ಕೋಟಿ ಗ್ರಾಹಕರು ಪೆಟ್ರೋಲ್‌ ಮತ್ತು ಡೀಸೆಲ್‌ಗಾಗಿ ಸಾಲಿನಲ್ಲಿ ನಿಂತು ವಾಹನಗಳಿಗೆ ತುಂಬಿಸಿಕೊಳ್ಳುತ್ತಾರೆ. ಕನಿಷ್ಠ ಅರ್ಧ ಗಂಟೆಯಾದರೂ ಇದಕ್ಕಾಗಿ ವ್ಯಯಿಸಬೇಕಾಗುತ್ತದೆ. ಕೆಲವೊಂದು ಅಡಚಣೆಗಳು ಉಂಟಾದಲ್ಲಿ ಗಂಟೆಗಟ್ಟಲೆ ವಾಹನದೊಂದಿಗೆ ಕಾದು ನಿಂತಿರಬೇಕಾದ ಸಂದರ್ಭವೂ ಎದುರಾಗುವುದುಂಟು. ಇಂಥ ಸಂದರ್ಭಗಳಲ್ಲಿ ಜಗಳ, ಹೊಯ್‌ಕೈ ನಡೆದ ಉದಾಹರಣೆಗಳೂ ಇದೆ. ಟ್ರಾಫಿಕ್‌ ಸಮಸ್ಯೆ ತಲೆದೋರಿದ್ದೂ ಉಂಟು. ಇದಕ್ಕೆಲ್ಲ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ತೈಲ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ.

ತೈಲ ಪೂರೈಕೆ ಕೇಂದ್ರಗಳಲ್ಲಿ ಡಿಜಿಟಲ್‌ ವಹಿವಾಟಿನ ಕುರಿತು ಶ್ರೀನಗರದಲ್ಲಿ ಶುಕ್ರವಾರ ನಡೆದ ಸಂಸತ್‌ ಸಲಹಾ ಸಮಿತಿ ಸಭೆಯಲ್ಲಿ ಈ ವ್ಯವಸ್ಥೆಯ ಆಗು-ಹೋಗುಗಳ ಬಗ್ಗೆ ಚರ್ಚಿಸಲಾಗಿದೆ.

Advertisement

“ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿ, ಬಿಪಿಸಿಎಲ್‌, ಎಚ್‌ಪಿಸಿಎಲ್‌ ಈಗಾಗಲೇ ನಗದು ರಹಿತ ವಹಿವಾಟಿಗೆ ಶೇ.0.75ರಷ್ಟು ರಿಯಾಯಿತಿ ನೀಡುತ್ತಿದೆ. ಪ್ರತಿದಿನ ನಗದು ರಹಿತ ವಹಿವಾಟಿನಿಂದ 150 ಕೋಟಿ ರೂ.ನಿಂದ 400 ಕೋಟಿ ರೂ.ನಷ್ಟು ಆದಾಯ ಹೆಚ್ಚಿದೆ’ ಎಂದು ಸಚಿವಾಲಯ ಹೇಳಿಕೊಂಡಿದೆ.

ತೈಲ ಪೂರೈಕೆಗೆ ಸಂಬಂಧಿಸಿ ಒಂದಿಷ್ಟು ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಈಗಾಗಲೇ ಮೇ 1ರಿಂದ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ದರ ಪ್ರಕಟಿಸುವ ನಿರ್ಧಾರ ಕೈಗೊಂಡಿದೆ. ಅಷ್ಟೇ ಅಲ್ಲ, ವಿಶ್ವದಲ್ಲೇ ಇದು ತೈಲ ಪೂರೈಕೆ ಕ್ಷೇತ್ರದ ಮೂರನೇ ಮಹತ್ವದ ಪ್ರಯೋಗ ಎನಿಸಿಕೊಂಡಿದೆ.

* 59,595: ದೇಶದಲ್ಲಿರುವ ಒಟ್ಟು ಬಂಕ್‌ಗಳು
* 2500 ಕೋಟಿ ರೂ.: ಪೆಟ್ರೋಲ್‌, ಡೀಸೆಲ್‌ನಿಂದ ಆಗುವ ಪ್ರತಿ ವರ್ಷದ ವಹಿವಾಟು
* 3.5 ಕೋಟಿ: ಪ್ರತಿನಿತ್ಯ ಬಂಕ್‌ಗಳ ಮುಂದೆ ಕ್ಯೂ ನಿಲ್ಲುವ ಗ್ರಾಹಕರ ಸಂಖ್ಯೆ
* 2016-17ನೇ ಸಾಲಿನಲ್ಲಿ ಬಳಕೆಯಾಗಿರುವ ಪೆಟ್ರೋಲ್‌ 23.8 ದಶಲಕ್ಷ ಟನ್‌, ಡೀಸೆಲ್‌ 76 ದಶಲಕ್ಷ ಟನ್‌
* 2015-16ನೇ ಸಾಲಿನಲ್ಲಿ ಬಳಕೆಯಾಗಿರುವ ಪೆಟ್ರೋಲ್‌ 21.8 ದಶಲಕ್ಷ ಟನ್‌, ಡೀಸೆಲ್‌ 74.6 ದಶಲಕ್ಷ ಟನ್‌

Advertisement

Udayavani is now on Telegram. Click here to join our channel and stay updated with the latest news.

Next