ಉಡುಪಿ: ಕರ್ನಾಟಕ ಹೈಕೋರ್ಟ್‌ನಲ್ಲಿ ಹಿಜಾಬ್ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಹಜ್ರಾ ಶಿಫಾ ಅವರು ಸೋಮವಾರ ರಾತ್ರಿ ಸಂಘ ಪರಿವಾರದ ಕಾರ್ಯಕರ್ತರು ಉಡುಪಿಯ ಮಲ್ಪೆಯಲ್ಲಿ ತನ್ನ ಸಹೋದರನ ಮೇಲೆ ಹಲ್ಲೆ ನಡೆಸಿ ಆಸ್ತಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಫಾ ತಂದೆಯ ಹೋಟೆಲ್ ಗೆ ನುಗ್ಗಿ ಕೆಲ ಯುವಕರು ಹಲ್ಲೆ ನಡೆಸಿದ್ದು,ಹೋಟೆಲ್ ಗಾಜು ಪುಡಿ ಪುಡಿ ಮಾಡಿದ್ದಾರೆ. ಗಾಯಾಳುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಎನ್‌ಐಎ ತನಿಖೆಗೆ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ
ಸರಣಿ ಟ್ವೀಟ್ ಮಾಡಿರುವ ಹಜ್ರಾ ಶಿಫಾ, ದಾಳಿಗೆ ಸಂಘ ಪರಿವಾರದ ಯುವಕರು ಕಾರಣ ಎಂದು ಆರೋಪಿಸಿದ್ದು, ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
‘ನನ್ನ ಸಹೋದರನ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ. ನಾನು ಹಿಜಾಬ್ ಪರವಾಗಿ ನಿಂತಿರುವುದಕ್ಕೆಈ ಹಲ್ಲೆ ನಡೆಸಲಾಗಿದೆ. ಅದು ನನ್ನ ಹಕ್ಕು. ನಮ್ಮ ಆಸ್ತಿಯೂ ಹಾಳಾಗಿದೆ. ಯಾಕೆ?? ನಾನು ನನ್ನ ಹಕ್ಕನ್ನು ಕೇಳಬಹುದಲ್ಲವೇ? ಅವರ ಮುಂದಿನ ಬಲಿಪಶು ಯಾರು? ಸಂಘ ಪರಿವಾರದ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
150 ಜನರ ಗುಂಪು ಸೈಫ್ ಮೇಲೆ ಹಲ್ಲೆ ನಡೆಸಿದೆ ಎಂದು ಮಸೂದ್ ಮುನ್ನಾ ಎಂಬವರು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.
“ಸಹೋದರಿ ಹಜ್ರಾ ಶಿಫಾ ಇನ್ನೂ ತನ್ನ ಹಕ್ಕುಗಳಿಗಾಗಿ ಅವಳ ಹಿಜಾಬ್ ಗಾಗಿ ಹೋರಾಡುತ್ತಿರುವುದರಿಂದ ಅವನು ಬಲಿಪಶುವಾಗಿದ್ದಾನೆ. ವಿದ್ಯಾರ್ಥಿಗಳಷ್ಟೇ ಅಲ್ಲ ಕುಟುಂಬದವರ ಜೀವನವೂ ಅಪಾಯದಲ್ಲಿದೆ. ಕಠಿಣ ಕ್ರಮ ಕೈಗೊಳ್ಳಬೇಕು!” ಮಸೂದ್ ಮುನ್ನಾ ಟ್ವೀಟ್ ಮಾಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.