ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಗ್ಯಾರಂಟಿಯ ಆಮಿಷವೊಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಆಮಿಷವೊಡ್ಡುವುದು ಲಂಚ ನೀಡುವುದಕ್ಕೆ ಸಮವಾಗಿದ್ದು ಪ್ರಜಾಪ್ರತಿನಿಧಿ ಕಾಯ್ದೆಯಡಿ ಅವರ ಆಯ್ಕೆಯ ಘೋಷಣೆಯನ್ನು ಅಸಿಂಧುಗೊಳಿಸಬೇಕು ಎಂದು ಕೆ. ಶಂಕರ ಎಂಬುವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಆಕ್ಷೇಪಣೆಗಳನ್ನು ಸರಿ ಪಡಿಸುವಂತೆ ಸೂಚಿಸಿರುವ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 28 (ಶುಕ್ರವಾರ)ಕ್ಕೆ ಮುಂದೂಡಿದೆ.
ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯವರಾದ ತಾಲೂಕು ಮತ್ತು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ. ಶಂಕರ ಸಲ್ಲಿಸಿರುವ ಚುನಾವಣಾ ಅರ್ಜಿ ನ್ಯಾಯಮೂರ್ತಿ ಎಸ್ .ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಪ್ರಜಾಪ್ರತಿನಿಧಿ ಕಾಯ್ದೆಯ ವಿವಿಧ ಸೆಕ್ಷನ್‌ಗಳನ್ನು ಸಿದ್ದರಾಮಯ್ಯ ಅವರು ಉಲ್ಲಂ ಸಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿರುವುದು ಲಂಚದ ಮೂಲಕ ಮತದಾರರಿಗೆ ಆಮಿಷವೊಡ್ಡುವುದಕ್ಕೆ ಸಮವಾಗಿದೆ. ಗ್ಯಾರಂಟಿಯ ಆಮಿಷವು ಮತದಾರರ ಮೇಲೆ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರುವ ಯತ್ನವಾಗಿದೆ. ಹಾಗೆಯೇ ಈ ಪ್ರಚಾರದ ಮೊತ್ತವನ್ನು ಅಭ್ಯರ್ಥಿಯ ಚುನಾವಣಾ ಲೆಕ್ಕಕ್ಕೆ ಸೇರ್ಪಡೆ ಮಾಡದೆ ಲೋಪ ಎಸಗಲಾಗಿದೆ ಎಂದು ಅರ್ಜಿಯಲ್ಲಿ ಶಂಕರ ದೂರಿದ್ದಾರೆ.
ಮತದಾರರಿಗೆ ಆಮಿಷವೊಡ್ಡುವ ಪ್ರಣಾಳಿಕೆ ಸಿದ್ಧಪಡಿಸಿದವರು, ಅದನ್ನು ಬಳಸಿ ಮತ ಕೇಳಿದ ಎಲ್ಲರ ಆಯ್ಕೆಯೂ ಅಸಿಂಧು ಆಗಬೇಕಾಗುತ್ತದೆ. ಆದರೆ, ಕಾನೂನಿನಲ್ಲಿ ಎಲ್ಲರನ್ನೂ ಪ್ರತಿವಾದಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಮಾತ್ರ ಪ್ರತಿವಾದಿಯನ್ನಾಗಿ ಮಾಡಲಾಗಿದೆ ಎಂದು ಶಂಕರ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ “ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಶೀರ್ಷಿಕೆಯಡಿ ನಾನಾ ವಲಯಗಳಿಗೆ 25 ವರ್ಷದ ಮುಂದಿನ ಗುರಿ ಇಟ್ಟುಕೊಂಡು ಹತ್ತಾರು ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ರೂಪಿಸಿ ಬಿಡುಗಡೆ ಮಾಡಿತ್ತು. ಈ ಪ್ರಣಾಳಿಕೆಯಲ್ಲಿದ್ದ ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ, ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.