Advertisement
1967ರಿಂದ ತೊಡಗಿ ಸುಮಾರು ಮೂವತ್ತು ವರ್ಷಗಳ ಕಾಲ ತುಳುನಾಡಿನಲ್ಲಿ, ಮತ್ತೆ ಸ್ವಲ್ಪ ಕಾಲ ಕುವೆಂಪು ವಿಶ್ವವಿದ್ಯಾನಿಲಯ, ಅನಂತಪುರ ವಿಶ್ವವಿದ್ಯಾನಿಲಯದಲ್ಲಿ ಕೂಡ ನೆಲೆಸಿ, ಜಾನಪದ ಅಧ್ಯಯನಕ್ಕೆ ಹೊಸ ವಿನ್ಯಾಸ ರೂಪಿಸಿದರು, ಹೊಸಬಗೆಯ ಫಲಿತವನ್ನು ಪಡೆಯುವಲ್ಲಿ ಯಶಸ್ವಿಯಾದರು. ಕ್ಲಾಸ್ ಭಾರತಕ್ಕೆ ಬಂದು ತುಳುವರ ವಿವಿಧ ಗುತ್ತಿನ ಮನೆಗಳಲ್ಲಿ ನೆಲೆಸಿ ಬಂಟ, ನಾಡವ ಜಾತಿ ಸಂಕೀರ್ಣದ ಬಂಧುತ್ವ ವ್ಯವಸ್ಥೆಯನ್ನು ವ್ಯಾಪಕ ಅಧ್ಯಯನ ನಡೆಸಿ, 1970ರಲ್ಲಿ ಅಮೆರಿಕದ ಡ್ನೂಕ್ ವಿಶ್ವವಿದ್ಯಾನಿಲಯದಿಂದ ಪಿ. ಎಚ್‌ಡಿ ಪದವಿ ಪಡೆದರು. ಅವರು ಅಮೆರಿಕದಿಂದ ಬರುವಾಗಲೇ ಎಂ. ಜಿ. ಕೃಷ್ಣಮೂರ್ತಿ, ಎ. ಕೆ. ರಾಮಾನುಜನ್ ಅವರಿಂದ ಕನ್ನಡ ಕಲಿತುಕೊಂಡು ಬಂದಿದ್ದರು. ಇಲ್ಲಿಗೆ ಬಂದ ಬಳಿಕ ತುಳುಭಾಷೆಯಲ್ಲಿ ಸಹಜವಾಗಿ ಮಾತನಾಡುವಷ್ಟು ಪರಿಣತರಾದರು.
ಅವರ ಅಧ್ಯಯನ ತುಳುವಿಗಷ್ಟೇ ಸೀಮಿತವಾಗಿರಲಿಲ್ಲ. ನಾನಿದ್ದ ಕುಂದಾಪುರದ ಮನೆಗೆ ಆಗಾಗ್ಗೆ ಬರುತ್ತಿದ್ದರು. ನಾನು ಅವರನ್ನು ಉಡುಪಿ ಜಿಲ್ಲೆಯ ಕುಂದಾಪುರ ಪರಿಸರದ ಪಾಣರಾಟ, ಢಕ್ಕೆಬಲಿ, ನಾಗಮಂಡಲಗಳಿಗೆ ಕರೆದೊಯ್ದಿದ್ದೆ. ಅಲ್ಲಿನ ಹಾಡ್ಗತೆಗಳನ್ನು ತುಳುವಿನ ಪಾಡªನಗಳೊಂದಿಗೆ ತೌಲನಿಕವಾಗಿ ಪರಿಶೀಲಿಸುವ ಪ್ರಯತ್ನ ನಡೆಸಿದರು. ಸಂಶೋಧಕನು ತನ್ನದಲ್ಲದ ಅನ್ಯಸಂಸ್ಕೃತಿಯ ಅಧ್ಯಯನಕ್ಕೆ ತೊಡಗುವುದು ಹೆಚ್ಚು ಸೂಕ್ತ ಎನ್ನುವ ಮಾನವಶಾಸ್ತ್ರೀಯ ತಿಳಿವಳಿಕೆಯಂತೆ ಅವರು ತುಳುನಾಡಿನ ಮಾತೃಮೂಲೀಯ ಕುಟುಂಬ ವ್ಯವಸ್ಥೆ, ತುಳು ಮೌಖೀಕ ಕಾವ್ಯರಚನೆಗಳನ್ನು ಸಂಸ್ಕೃತಿನಿಷ್ಠ ಮನಸ್ಸಿನಿಂದ ಅಧ್ಯಯನ ಮಾಡಿದರು. ಅವರದು ಮಾಹಿತಿ ಸಂಗ್ರಹಾಧಾರಿತ ಅಧ್ಯಯನ ವಿಶ್ಲೇಷಣೆ ಅಲ್ಲ. ತಾನು ಯಾರನ್ನು ಕುರಿತು ಅಧ್ಯಯನ ಮಾಡುತ್ತಿದ್ದೇನೋ ಅವರ ನಡುವೆಯೇ ವಾಸಿಸುತ್ತ ಒಂದಾಗಿ ಬಾಳಿದರು. ಉಡುಪಿ ಜಿಲ್ಲೆಯ ಹಿರಿಯಡ್ಕದ ಅಂಜಾರು ಗ್ರಾಮದಲ್ಲಿ ಮುಂಡಾಲ ಸಮುದಾಯದವರ ಕೇರಿಯ ಸಣ್ಣ ಮುಳಿಹುಲ್ಲಿನ ಮನೆಯಲ್ಲಿ ಹಲವಾರು ವರ್ಷ ಕಳೆದಿದ್ದರು. ಅಧ್ಯಯನದ ಬಳಿಕವೂ ಆ ಕುಟುಂಬದ ಜತೆ ಸಂಬಂಧ ಇರಿಸಿಕೊಂಡು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದರೆಂದು ನನ್ನಲ್ಲಿ ಕರ್ಗಿ ಮುಂಡಾಲ್ತಿ ಹೇಳಿದ್ದುಂಟು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾಗ ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ ಉಳಿಯದೆ ದೂರದ ಹಳ್ಳಿ ಜೋಪಡಿ ಮನೆಯಲ್ಲೇ ಉಳಿದಿದ್ದರು. ಇದು ಅವರ ವ್ಯಕ್ತಿವಿಶಿಷ್ಟ ಗುಣವಷ್ಟೇ ಅಲ್ಲ; ಅಧ್ಯಯನದ ಖಚಿತತೆಗೆ ಅನ್ಯಸಂಸ್ಕೃತಿಯ ಪರಕಾಯ ಪ್ರವೇಶ ಅಗತ್ಯವೆಂದು ಭಾವಿಸಿದ್ದರು. ಪೀಟರ್ ಅವರು ಫ್ರಾಂಕ್ ಕೋರಂ ಜೊತೆಗೆ ಬರೆದ Folkloristics and Indian Folklore ಭಾರತೀಯ ಜಾನಪದ ಅಧ್ಯಯನಕ್ಕೆ ಹೊಸದಾರಿ ಸೂಚಿಸಿದ ಗ್ರಂಥ (ಆರ್‌ಆರ್‌ಸಿ ಪ್ರಕಟಣೆ). Indian Folklore Vol. I and II, Folktales of India, Oral Epics in India- ಈ ಗ್ರಂಥಗಳ ಸಂಪಾದಕರಾಗಿ ಗ್ರಂಥಗಳನ್ನು ಹೊರತಂದಿದ್ದಾರೆ. ತುಳುವ ಸಂಸ್ಕೃತಿಯ ಸಂಶೋಧನೆಗೆ ಅವರ ಕೊಡುಗೆಯನ್ನು ಮನ್ನಿಸಿ 2004ರಲ್ಲಿ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಅವರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.
Related Articles
Advertisement
ಕೇರಳದ ನಾಯರ್ ಸಮಾಜದ ಕುಟುಂಬ ರಚನೆಯನ್ನು ದೇಶ-ವಿದೇಶಗಳ ಮಾನವಶಾಸ್ತ್ರಜ್ಞರು ಅಧ್ಯಯನ ನಡೆಸಿದ್ದರೂ ತುಳುವರ ಮಾತೃಮೂಲೀಯ ಕುಟುಂಬ ವ್ಯವಸ್ಥೆಯು ಅದಕ್ಕಿಂತ ಹೇಗೆ ಭಿನ್ನ ಎನ್ನುವುದರ ಅಧ್ಯಯನ ನಡೆದುದು ಪೀಟರ್ ಅವರಿಂದ. ದ್ರಾವಿಡ ಬಂಧುತ್ವ ವ್ಯವಸ್ಥೆಯ ಬಗ್ಗೆ ಡ್ಯುಮಾಂಟ್, ರಾಡ್‌ಕ್ಲಿಫ್ ಬ್ರೌನ್, ಯಾಲ್ಮನ್, ಕಾರ್ಟರ್, ಕಾಸ್ಟೇìರ್ ಮಾಡಿರುವ ಅಧ್ಯಯನಗಳನ್ನು ಗಮನದಲ್ಲಿರಿಸಿಕೊಂಡು ತುಳುವ ಬಂಧುತ್ವ ವ್ಯವಸ್ಥೆಯ ಅನನ್ಯತೆಯನ್ನು ಅವರು ತಮ್ಮ ಲೇಖನಗಳಲ್ಲಿ ಹೇಳುತ್ತಾರೆ. ಕ್ಲಾಸ್ ಅವರ ತುಳುವ ಸಂಸ್ಕೃತಿಯನ್ನು ಕುರಿತ ಬರಹಗಳನ್ನು ಕಂಡಾಗ ಅವರು ಎಲ್ಲೂ ಅದರ ಚಾರಿತ್ರಿಕ ಪ್ರಾಚೀನತೆಯನ್ನು ನಿರ್ಧರಿಸುವ ಹಳಹಳಿಕೆಯ ದೃಷ್ಟಿಕೋನವನ್ನು ಕಾಣೆವು. ಅದನ್ನು ವೈಭವೀಕರಿಸುವಲ್ಲೂ ಅವರಿಗೆ ಆಸಕ್ತಿಯಿಲ್ಲ. ಅಂತರ್‌ಶಿಸ್ತೀಯ ಹಾಗೂ ಬಹುಶಿಸ್ತೀಯ ಬೆಳಕಿನಲ್ಲಿ ಮೌಖೀಕ ರಚನೆಗಳಾದ ಪಾಡªನಗಳಲ್ಲಿ ನಿರೂಪಿತವಾಗಿರುವ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆ, ಆರಾಧನಾ ಪ್ರಪಂಚಗಳ ಮಾನಸಿಕ ಹಿನ್ನೆಲೆ ಒಟ್ಟಿನಲ್ಲಿ ತುಳುವ ಸಂಸ್ಕೃತಿಯ ಪರಿಕಲ್ಪನಾತ್ಮಕ ಚೌಕಟ್ಟನ್ನು ಅವರ ಬರವಣಿಗೆಗಳಿಂದ ಪುನಾರಚಿಸಬಹುದಾಗಿದೆ.
ತುಳುವ ಅಧ್ಯಯನದ ಧಾರೆಯನ್ನು ಹೊಸದಿಕ್ಕಿನಲ್ಲಿ ಹರಿಯಿಸಿದ ಪೀಟರ್ ಕ್ಲಾಸ್ ಅವರ ಚಿಂತನೆಗಳಿಗೆ ಇನ್ನು ಹೊಸ ಕವಲುಗಳನ್ನು ಜೋಡಿಸಬೇಕಾದುದು ತುಳುವ ಅಧ್ಯಯನಕಾರರ ಮುಂದಿನ ಕೆಲಸ ಆಗಬೇಕು.
ಎ. ವಿ. ನಾವಡ