Advertisement

ಹತ್ತಿಗೆ ಗುಲಾಬಿ ಕಾಯಿಕೊರಕ ಕೀಟ ಬಾಧೆ: ನಿರ್ವಹಣೆಗೆ ಸಲಹೆ

03:15 PM Aug 21, 2017 | |

ರಾಯಚೂರು: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿಟಿ ಹತ್ತಿ ಬೆಳೆಯನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದು,
ಗುಲಾಬಿ ಕಾಯಿಕೊರಕ ಕೀಟದ ಬಾಧೆ ಕಂಡು ಬರುವ ಸಾದ್ಯತೆ ಇದೆ. ಹೀಗಾಗಿ ರೈತರು ಸಮಗ್ರ ಕೀಟ ನಿರ್ವಹಣೆ
ಪದ್ಧತಿ ಅನುಸರಿಸಲು ಕೃಷಿ ಇಲಾಖೆ ಸಲಹೆ ನೀಡಿದೆ. ಕೀಟದ ಸಮೀಕ್ಷೆಗಾಗಿ ಪ್ರತಿ ಹೆಕ್ಟೇರ್‌ಗೆ ಐದರಂತೆ ಲಿಂಗಾರ್ಷಕ ಬಲೆ ನೆಡಬೇಕು. ಇಪ್ಪತ್ತು ದಿನಕ್ಕೊಮ್ಮೆ ಲೂರ್‌ಗಳನ್ನು ಬದಲಿಸಬೇಕು. ಬಿದ್ದಿರುವ ಪತಂಗ ಲೆಕ್ಕ ಮಾಡಬೇಕು. ಇಡೀ ಕ್ಷೇತ್ರದಲ್ಲಿ 60 ಹೂಗಳನ್ನು ಪರಿಶೀಲಿಸಬೇಕು. ಇಲ್ಲವೇ ಅಲ್ಲಲ್ಲಿ ಸಂಗ್ರಹಿಸಿದ 20 ಬಲಿತ ಕಾಯಿಗಳನ್ನು ತೆರೆದು ಗುಲಾಬಿ ಕಾಯಿಕೊರಕದ ಬಾಧೆಯನ್ನು ಮತ್ತು ಮರಿಹುಳುಗಳನ್ನು ಲೆಕ್ಕ ಮಾಡುವ ಮೂಲಕ ರೋಗ ಬಾಧೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬಹುದು. ಮೂರು ದಿನ ಎಂಟು ಪತಂಗಗಳು ಮೋಹಕ ಬಲೆಗಳಲ್ಲಿ ಬಿದ್ದಿರುವುದು ಅಥವಾ 60 ಹೂ ಹಾನಿಯಾಗಿರುವುದು ಅಥವಾ 20 ಕಾಯಿಗಳಲ್ಲಿ ಎರಡು ಅಥವ ಎರಡಕ್ಕಿಂತ ಹೆಚ್ಚು ಮರಿಹುಳುಗಳು ಇದ್ದರೆ
ಆರ್ಥಿಕ ಹಾನಿ ಮಟ್ಟ ತಲುಪಿದೆ ಎಂದು ಗ್ರಹಿಸಬೇಕು. ಪ್ರತಿ ಹೆಕ್ಟೇರ್‌ಗೆ 30ರಂತೆ ಲಿಂಗಾರ್ಷಕ ಬಲೆಗಳನ್ನು
ಸಮನಾಂತರವಾಗಿ ಅಳವಡಿಸಬೇಕು. ಬಲೆಗೆ ಬಿದ್ದ ಪತಂಗಗಳನ್ನು ಸಾಯಿಸಲು ಡಿಡಿವಿಪಿ ಕೀಟನಾಶಕದಲ್ಲಿ ಅದ್ದಿದ ಅರಳೆ ಬಲೆಯಲ್ಲಿ ಇಡಬೇಕು. ಲಿಂಗಾರ್ಷಕ ಬಲೆಗಳು ಬೆಳೆ ಮಟ್ಟದಿಂದ 15 ಸೆಂಮೀ ಎತ್ತರದಲ್ಲಿರಬೇಕು. 2 ಮಿಲೀ ಪ್ರಾಫೆನೋಫಾಸ್‌ 50 ಇಸಿ ಅಥವಾ ಒಂದು ಗ್ರಾಂ ಥೈಯೋಡಿಕಾರ್ಬ್ 75 ಡಬ್ಲ್ಯೂಪಿ ಅಥವ 0.4 ಗ್ರಾಂ ಇಮಾಮೆಕ್ಟಿನ್‌ ಬೆಂಝೋಯೇಟ್‌ 5 ಇಸಿ ಪ್ರತಿ ಲೀಟರ್‌ ನೀರಿಗೆ ಹಾಕಿ 15 ದಿನದ ಅಂತರದಲ್ಲಿ ಸಿಂಪಡಿಸಬೇಕು. ಪದೇ ಪದೇ ಒಂದೇ ಕೀಟನಾಶಕ ಉಪಯೋಗಿಸಬಾರದು. ಪೈರಿಥ್ರಾಯಿಡ್‌ ಕೀಟನಾಶಕಗಳಾದ 0.5 ಮಿ.ಲೀ ಲ್ಯಾಮಡ್‌ ಸೈಹೆಲೊಥ್ರಿನ್‌ ಅಥವಾ 0.5 ಮಿಲೀ ಡೆಕಾಮೆತ್ರಿನ್‌ 2.8 ಇಸಿ ಅಥವಾ 0.5 ಮಿಲೀ ಸೈಪ ರ್ಮೆಥ್ರಿನ್‌ 10 ಇಸಿ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಬಿತ್ತನೆಯಾದ 100 ದಿನಗಳ ನಂತರ ಸಿಂಪಡಿಸಬೇಕು. ಸಿಂಥಟಿಕ್‌ ಪೈರಿಥ್ರಾಯಿಡ್‌ ಕೀಟನಾಶಕಗಳನ್ನು ಕೇವಲ ಒಂದು ಅಥವಾ ಎರಡು ಸಲ ಮಾತ್ರ 15-20 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಪೈರಿಥ್ರಾಯಿಡ್‌ ಗುಂಪಿಗೆ ಸೇರಿದ ಕೀಟನಾಶಕಗಳನ್ನು ಪದೇ ಪದೇ ಬಳಸುವುದರಿಂದ ಸಸ್ಯ ಹೇನು ಮತ್ತು ಬಿಳಿ ನೋಣದ ಸಂಖ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಬೇರೆ ಕೀಟನಾಶಕಗಳನ್ನು ಬಳಸುವುದರಿಂದ ಕೀಟದ ಬಾಧೆ ಕುಗ್ಗಿಸಬಹುದು. ಮಾಹಿಗಾಗಿ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ಕೋರಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next