ಸರಿಸುಮಾರು 5 ದಶಕಗಳ ಕಾಲ ಯಕ್ಷ ರಂಗದ ಸೇವೆಯ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಹಿರಿಯ ಯಕ್ಷ ಕೊಂಡಿಯೊಂದು ಬುಧವಾರ ತನ್ನ ಬದುಕಿನ ವೇಷ ಕಳಚಿದೆ. 12ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿದ ಈ ಯಕ್ಷ ಪ್ರತಿಭೆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಖಳ ಹಾಗೂ ನಾಯಕ ಈ ಎರಡೂ ಪಾತ್ರಗಳಿಗೂ ಜೀವ ತುಂಬುವ ಚಾಕಚಕ್ಯತೆ ಹೊಂದಿದ್ದ ಅಪರೂಪದ ಕಲಾವಿದ ರಾಗಿಯೂ ಗುರುತಿಸಿಕೊಂಡಿದ್ದರು.
ಇವು ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟರ ಕುರಿತ ಮಾತುಗಳು. ತೆಂಕುತಿಟ್ಟಿನ ಅಪ್ರತಿಮ ಯಕ್ಷಗಾನ ಕಲಾವಿದ ರಾಗಿದ್ದ ಅವರು ಬಂಟ್ವಾಳ ತಾಲೂಕಿನ ಪೆರು ವಾಯಿಯಲ್ಲಿ ಜನಿಸಿದ್ದು, ಮುಡಿಪು ಸಮೀಪದ ಬಾಕ್ರಬೈಲಿನಲ್ಲಿ ನೆಲೆಸಿದ್ದರು. ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಯ ಪುತ್ರನಾಗಿ ಜನಿಸಿದ್ದ ಅವರು ತನ್ನ 12ನೇ ವಯಸ್ಸಿನಲ್ಲಿ ಯಕ್ಷಗಾನ ಅಭ್ಯಾಸ ಮಾಡಿದ್ದರು.
ಕುಂಡಾವು ಮೇಳದ ಮೂಲಕ ತಿರುಗಾಟ ಆರಂಭಿಸಿ ಮುಂದೆ ಮಾಡಾವು, ಧರ್ಮಸ್ಥಳ, ಕಟೀಲು, ಬಪ್ಪನಾಡು, ಕದ್ರಿ, ಕುಂಟಾರು, ಕುಂಬಳೆ, ಪುತ್ತೂರು ಮೊದಲಾದ ಮೇಳ ಗಳಲ್ಲಿ ಯಕ್ಷ ಸೇವೆಗೈದು ರಕ್ತ ಬೀಜ, ಹಿರಣ್ಯಕಶ್ಯಪ, ಕಂಸ, ಋತುಪರ್ಣ, ಹನುಮಂತ ಮೊದ ಲಾದ ಪಾತ್ರಗಳಿಗೆ ಜೀವ ತುಂಬಿದ್ದರು. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲೂ ನಿರರ್ಗಳತೆ ಹೊಂದಿದ್ದ ಅವರು ತಾಳಮದ್ದಳೆ ಅರ್ಥಧಾರಿಯಾಗಿಯೂ ಚಾಕಚಕ್ಯತೆ ಮೆರೆದಿ ದ್ದರು. ತನ್ನ ಕಂಚಿನ ಕಂಠದಿಂದ ಶೃತಿಬದ್ಧ ಮಾತು ಗಾರಿಕೆಯ ಮೂಲಕ “ಪೆರುವಾಯಿ ಶೈಲಿ’ ಎಂಬ ಹೊಸ ಪರಂಪರೆಯನ್ನೇ ಹುಟ್ಟು ಹಾಕಿದ್ದರು.
ತುಳು ಪ್ರಸಂಗ ಕೋಟಿ ಚೆನ್ನಯದಲ್ಲಿ ಕೋಟಿಯ ಪಾತ್ರದಲ್ಲಿ ಮಿಂಚಿ ವಿಶೇಷ ಖ್ಯಾತಿಯನ್ನು ಪಡೆದಿದ್ದರು. ಕಟೀಲು ಮೇಳದಲ್ಲಿ ಸುದೀರ್ಘ 23 ವರ್ಷಗಳ ಕಾಲ ತಿರುಗಾಟ ಮಾಡಿದ್ದ ಅವರು ಕಟೀಲು ಕ್ಷೇತ್ರ ಮಹಾತೆ¾ಯ ಜಾಬಾಲಿ, ಅರುಣಾಸುರ, ಕಂಸವಧೆಯ ಕಂಸ, ಅಗ್ರಪೂಜೆಯ ಶಿಶುಪಾಲ, ತ್ರಿಜನ್ಮ ಮೋಕ್ಷದ ಹಿರಣ್ಯಕಶ್ಯಪ, ಮಹಾಕಲಿ ಮಗಧೇಂದ್ರದ ಮಾಗಧ, ಉತ್ತಮ ಸೌದಾಮಿನಿಯ ಸಾಲಪೋತಕ ಹಾಗೂ ಉತ್ತಮ, ದಕ್ಷಯಜ್ಞದ ದಕ್ಷ ಹಾಗೂ ಈಶ್ವರ ಹೀಗೆ ಹಲವು ಪಾತ್ರಗಳಲ್ಲಿ ಖ್ಯಾತಿಯನ್ನು ಪಡೆದಿದ್ದರು.
ನಾರಾಯಣ ಶೆಟ್ಟರು ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಪಡೆದಿದ್ದರಾದರೂ ಯಕ್ಷಗಾನದಲ್ಲಿ ಅವರ ಮಾತುಗಾರಿಕೆ ಎಂತಹ ಭಾಷಾ ವಿದ್ವಾಂಸರನ್ನೂ ನಾಚಿಸುವಂತಿತ್ತು. ಬಾಯಾರು ಐತಪ್ಪ ಶೆಟ್ಟಿ, ಕುಡಾಣ ಗೋಪಾಲಕೃಷ್ಣ ಭಟ್, ಅಳಿಕೆ ರಾಮಯ್ಯ ರೈ ಗುರುತ್ರಯರಿಂದ ಯಕ್ಷಾಭ್ಯಾಸ ಮಾಡಿದ್ದರೆ, ಕರುವೊಳು ದೇರಣ್ಣ ಶೆಟ್ಟಿ ಅವರು ಗೆಜ್ಜೆ ನೀಡಿ ಪ್ರೋತ್ಸಾಹಿಸಿದ್ದರು. ಇವರ ಯಕ್ಷ ಪ್ರತಿಭೆಯನ್ನು ಮೆಚ್ಚಿ ಕುರಿಯ ವಿಠಲ ಶಾಸ್ತ್ರಿಗಳು ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದ್ದರು.
ಸುಮಾರು 5 ದಶಕಗಳ ಕಲಾಸೇವೆಯ ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ತಿರುಗಾಟವನ್ನು ನಿಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಇವರ ಕಲಾಸೇವೆಗೆ ಹತ್ತು ಹಲವು ಪ್ರಶಸ್ತಿ-ಸಮ್ಮಾನಗಳು ಸಂದಿದ್ದು, 2016ರಲ್ಲಿ ಯುವ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ “ಯಕ್ಷಧ್ರುವ’ ಚೊಚ್ಚಲ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದರು.
ಉಡುಪಿ ತುಳುಕೂಟದ ಈ ಬಾರಿಯ ರಾಮದಾಸ ಸಾಮಗ ನೆಂಪುದ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಬಂಟರ ಸಂಘ ಬೆಂಗಳೂರಿನಿಂದ ಪ್ರಶಸ್ತಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಲಾರಂಗ ಉಡುಪಿಯ ಪ್ರಶಸ್ತಿ, ಅಖೀಲ ಭಾರತ ತುಳು ಕೂಟ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ಸಂದಿದ್ದವು.