ಪರ್ತ್: ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ತನ್ನ ಹಿಡಿತ ಬಿಗಿಗೊಳಿಸಿದೆ. ಆಸ್ಟ್ರೇಲಿಯಾಗೆ ಗೆಲುವಿಗೆ ಬರೋಬ್ಬರಿ ರನ್ ಗುರಿ ನೀಡಿದೆ. ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಭಾರತ ಆರು ವಿಕೆಟ್ ಗೆ 487 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಆಸೀಸ್ ಗೆ 534 ರನ್ ಗುರಿ ನೀಡಿದೆ.
ವಿಕೆಟ್ ನಷ್ಟವಿಲ್ಲದೆ 172 ರನ್ ಮಾಡಿದ್ದಲ್ಲಿಂದ ಮೂರನೇ ದಿನದಾಟದ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಕೆಎಲ್ ರಾಹುಲ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ರಾಹುಲ್ 77 ರನ್ ಮಾಡಿದರು.
90 ರನ್ ಗಳಿಸಿ ಅಜೇಯರಾಗಿದ್ದ ಜೈಸ್ವಾಲ್ ಇಂದು ಶತಕ ಸಿಡಿಸಿ ಮಿಂಚಿದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಯಶಸ್ವಿ ಜೈಸ್ವಾಲ್ 161 ರನ್ ಮಾಡಿದರು. ಮೂರು ಸಿಕ್ಸರ್ 15 ಬೌಂಡರಿ ಬಾರಿಸಿದರು. ದೇವದತ್ತ ಪಡಿಕ್ಕಲ್ 25 ರನ್ ಮಾಡಿದರು. ಆದರೆ ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ಅವರು ಕೇವಲ ತಲಾ ಒಂದು ರನ್ ಗೆ ಔಟಾದರು.
ಮೊದಲ ಇನ್ನಿಂಗ್ಸ್ ನಲ್ಲಿ ಅಗ್ಗಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳಿದರು. ಸುಂದರ ಬ್ಯಾಟಿಂಗ್ ಮಾಡಿದ ವಿರಾಟ್ 81ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿ ಮಿಂಚಿದರು. ವಿರಾಟ್ ಶತಕ ಪೂರ್ಣವಾಗುತ್ತಿದ್ದಂತೆ ನಾಯಕ ಬುಮ್ರಾ ಡಿಕ್ಲೇರ್ ಮಾಡಿದರು.
ವಾಷಿಂಗ್ಟನ್ ಸುಂದರ್ 29 ರನ್ ಮಾಡಿ ವಿರಾಟ್ ಜತೆಗೆ ಉತ್ತಮ ಜೊತೆಯಾಟವಾಡಿದರು. ಕೊನೆಯಲ್ಲಿ ನಿತೀಶ್ ರೆಡ್ಡಿ ಭರ್ಜರಿ ಬ್ಯಾಟ್ ಬೀಸಿ27 ಎಸೆತದಲ್ಲಿ 38 ರನ್ ಗಳಿಸಿದರು.
ಸದ್ಯ ಭಾರತ 487 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಆಸ್ಟ್ರೇಲಿಯಾಗೆ ಪರ್ತ್ ಟೆಸ್ಟ್ ಉಳಿಸಿಕೊಳ್ಳಲು 534 ರನ್ ಮಾಡಬೇಕಾದ ಅವಶ್ಯಕತೆಯಿದೆ.