ಬೇಲೂರು: ಮಕ್ಕಳು ಓದಿನ ಜೊತೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ ಮೊದಲಾದ ಪಠ್ಯೇತರ ಚಟಿವಟಿಕೆಯಲ್ಲಿ ಪಾಲ್ಗೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಪಟ್ಟಣದ ವೈಕುಂಠ ಬೀದಿಯಲ್ಲಿರುವ ಸಾಹಿತಿ ಬೇಲೂರು ಕೃಷ್ಣಮೂರ್ತಿ ಅವರ ನಿವಾಸದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ 9ನೇ ಮನೆ ಮನೆ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಪೋಷಕರು ಹಾಗೂ ಶಿಕ್ಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು. ಕೆಲವೊಂದು ಮಕ್ಕಳಲ್ಲಿ ಪ್ರತಿಭೆ ಇದ್ದರೂ ಕೂಡ ಅದರ ಅನಾವರಣಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಮಕ್ಕಳ ಸಾಹಿತ್ಯ ಪರಿಷತ್ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಕವಿಗೋಷ್ಠಿ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಕಲೆ, ಸಂಸ್ಕೃತಿ ಉಳಿಸಿ: ಸಾಹಿತಿ ಬೇಲೂರು ಕೃಷ್ಣಮೂರ್ತಿ ಮಾತನಾಡಿ, ಪಾಶ್ಚಿಮಾತ್ಯ ಕಲೆಗಳಿಗೆ ನಮ್ಮ ಯುವ ಜನಾಂಗ ಮಾರುಹೋಗುತ್ತಿರುವುದು ವಿಷಾದರ ಸಂಗತಿಯಾಗಿದೆ ಎಂದರು. ನಮ್ಮ ಕಲೆ, ಸಂಸ್ಕೃತಿಗಳನ್ನು ನಾವು ಮರೆಯುತ್ತಿದ್ದೇವೆ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೂರವಿರಬೇಕು. ನಮ್ಮ ಸಂಸ್ಕೃತಿಗಳನ್ನು ಉಳಿಸಬೇಕು ಎಂದರು. ಹಿಂದಿನ ಕಾಲದಲ್ಲಿ ನಾಟಕಗಳಲ್ಲಿ ಅಭಿನಯಿಸುವುದರಿಂದ ವೇದಿಕೆಯ ಮೇಲೆ ಮಾತನಾಡಲು ಧೈರ್ಯ ಬರುತ್ತಿತ್ತು.
ಅಭಿನಯಿಸುವ ಚಾತುರ್ಯವೂ ಕರಗತವಾಗುತ್ತಿತ್ತು. ಆದರೆ ಈಗ ಮಕ್ಕಳಲ್ಲಿ ಕೇವಲ ಓದಿನ ಕಡೆ ಗಮನ ಹರಿಸಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ ಹೊರತು ಹೊರಗಿನ ಪ್ರಾಪಂಚಿಕ ಜ್ಞಾನವೇ ಇರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಸಿ.ಆರ್.ಪಿ. ಜಯಣ್ಣ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ, ಆಶಾ ,ಕಾರ್ಯದರ್ಶಿ ನಳಿನಾ ,ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಆನಂದ್,ಇತರರು ಇದ್ದರು.
ಮಕ್ಕಳಿಗೆ ಮೊಬೈಲ್, ಟೀವಿ ಮಾರಕ: ಈಗಿನ ಮಕ್ಕಳು ಮೊಬೈಲ್, ಟೀವಿ ಬಗ್ಗೆ ಹೆಚ್ಚು ಆಸಕ್ತರಾಗಿದ್ದು, ಓದಿನ ಕಡೆ ಗಮನ ನೀಡದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಶಾಸಕ ಲಿಂಗೇಶ್ ಹೇಳಿದರು. ಹಿಂದೆ ನಾವು ಓದುವಾಗ ಕ್ರೀಡೆ,ಕಲೆ,ಸಾಹಿತ್ಯ ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆವು. ಆದರೆ ಈಗ ಶಿಕ್ಷಣ ಅಂಕ ಗಳಿಕೆಗೆ ಸೀಮಿತವಾಗಿದ್ದು, ಪೋಷಕರು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡದಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.
ಮಕ್ಕಳಿಗೆ ಓದಿನ ಜೊತೆಯಲ್ಲಿ ಪೌರಾಣಿಕ ಕಥೆ, ಸಾಹಿತ್ಯ,ಕಲೆ, ಸಂಪ್ರದಾಯ ಗಳನ್ನು ಹೇಳಿಕೊಟ್ಟಾಗ ಸಮಾಜದಲ್ಲಿ ಉತ್ತಮ ಹೆಸರು ಪಡೆಯಲು ಸಾಧ್ಯ.
-ಬೇಲೂರು ಕೃಷ್ಣಮೂರ್ತಿ, ಸಾಹಿತಿ