Advertisement

ವೈಯಕ್ತಿಕ ಟೀಕೆಗೆ ತಿರುಗಿದ ಟ್ವೀಟ್‌ ಸಮರ!

12:42 PM Oct 04, 2019 | Team Udayavani |

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಯುವ ಬ್ರಿಗೇಡ್‌ ಸಂಘಟಕ ಚಕ್ರವರ್ತಿ ಸೂಲಿಬೆಲೆಯವರ ನಡುವಿನ ಟ್ವೀಟ್‌ ಸಮರ ಈಗ ವೈಯಕ್ತಿಕ ಟೀಕೆಗೆ ತಿರುಗಿದೆ. ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಸಚಿವ ಸದಾನಂದ ಗೌಡ ಅವರು ತಮ್ಮ ಟ್ವೀಟ್‌ ಖಾತೆಯಿಂದ ಚಕ್ರವರ್ತಿ ಸೂಲಿಬೆಲೆಯವರನ್ನು ಬ್ಲಾಕ್‌ ಮಾಡಿದ್ದಾರೆ. ಕೇಂದ್ರ ಸಚಿವರು ತಮ್ಮನ್ನು ಬ್ಲಾಕ್‌ ಮಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಸೂಲಿಬೆಲೆ ಪಬ್ಲಿಷ್‌ ಮಾಡಿಕೊಂಡಿದ್ದಾರೆ.

Advertisement

ಸೂಲಿಬೆಲೆ ಟ್ವೀಟ್‌: “ಮೋದಿಯವರೆ, ಯುಎನ್‌ ಪ್ರವಾಸ ಈಗ ಪೂರ್ಣಗೊಂಡಿದೆ. ದಯವಿಟ್ಟು ಕರ್ನಾಟಕಕ್ಕೆ ಭೇಟಿ ನೀಡಿ, ದಕ್ಷಿಣ ಭಾರತದಲ್ಲೇ ಕರ್ನಾಟಕದ ಜನರು ನಿಮ್ಮನ್ನು ಹೆಚ್ಚು ಪ್ರೀತಿ ಮಾಡುತ್ತಾರೆ. ನೀವು ನಮ್ಮನ್ನು ಕಡೆಗಣಿಸಿದರೆ ಖಂಡಿತ ನಮಗೆ ಬೇಸರವಾಗುತ್ತದೆ. ಉತ್ತರ ಕರ್ನಾಟಕಕ್ಕೆ ಕೇಂದ್ರದಿಂದ ದೊಡ್ಡಮಟ್ಟದ ಪರಿಹಾರದ ಅಗತ್ಯವಿದೆ ಮತ್ತು ನಿಮ್ಮ ಸಾಂತ್ವನದ ನುಡಿಗಾಗಿ ಕಾಯುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಬೇಸರಗೊಳಿಸಬೇಡಿ’ ಎಂದು ಸೆ.28ಕ್ಕೆ ಚಕ್ರವರ್ತಿ ಸೂಲಿಬೆಲೆ ಟ್ವೀಟ್‌ ಮಾಡಿದ್ದರು. ಇದಾದ ನಂತರ, “ನೆರೆ ಪರಿಹಾರ ವಿಚಾರವಾಗಿ ರಾಜ್ಯದ ಸಂಸದರು ಸೂಕ್ತ ರೀತಿಯಲ್ಲಿ ಕೆಲಸ ಮಾಡಿಲ್ಲ’ ಎಂದು ಸಾರ್ವಜನಿಕವಾಗಿ ಸಂಸದರ ವಿರುದ್ಧ ಟೀಕೆ ಮಾಡಿದ್ದರು.

ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಅವರು ಟ್ವೀಟ್‌ನಲ್ಲಿ ಚಕ್ರವರ್ತಿ ಸೂಲಿಬೆಲೆಯವರನ್ನು ಬ್ಲಾಕ್‌ ಮಾಡಿಲ್ಲ. ಬುಧವಾರ 4 ಗಂಟೆಗಳ ಕಾಲ ಟ್ವಿಟರ್‌, ನೆಟ್‌ವರ್ಕ್‌ ವ್ಯಾಪ್ತಿಗೆ ಸಿಕ್ಕಿರಲಿಲ್ಲ ಎಂದು ಅವರ ಕಚೇರಿ ಮೂಲಗಳು ಹೇಳಿಕೊಂಡಿವೆ.

ಡಿವಿಎಸ್‌ ಟ್ವೀಟ್‌: “ಟೀಕೆ-ಟಿಪ್ಪಣಿ, ವಿಮರ್ಶೆ, ಭಿನ್ನ ಅಭಿಪ್ರಾಯಗಳು ಪ್ರಜಾ ಪ್ರಭುತ್ವದಲ್ಲಿ ಸಹಜ. ಆದರೆ ಅದು ಯಾವ ಮಟ್ಟದಲ್ಲಿರಬೇಕು ಅನ್ನೋದು ಗೊತ್ತಿರಬೇಕು. ಅದನ್ನು ಬಿಟ್ಟು ವೈಯುಕ್ತಿಕ ನಿಂದನೆಗೆ ಇಳಿಯುವವರ ಬಗ್ಗೆ ನನ್ನ ಬಳಿ ಉತ್ತರವಿಲ್ಲ. ಸಂತ್ರಸ್ತರ ಕಣ್ಣೀರು ಒರೆಸಿದ್ದೇವೆ. ಅವರು ನಮ್ಮವರು ಅವರ ಕ್ಷೇಮ, ಭವಿಷ್ಯ ನಮ್ಮ ಜವಾಬ್ದಾರಿ.’ “ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲ, ಸಲ್ಲದ ಕಥೆ ಹೇಳಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ನಮಗೆ ಕನಿಕರವಿದೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ಆಗಬೇಕಾದ ತಕ್ಷಣ ಪರಿಹಾರ, ಮಧ್ಯಂತರ ಪರಿಹಾರ ಮತ್ತು ದೀರ್ಘ‌ ಕಾಲೀನ ಪರಿಹಾರದ ಬಗ್ಗೆ ಬೇಕಾದ ವರದಿಗಳನ್ನು ತಯಾರಿಸಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಚೇರಿಯಿಂದ ಈಗಾಗಲೇ ಮಾಹಿತಿ ನೀಡಿದ್ದಾರೆ.’ “ಪ್ರವಾಹದಿಂದ ತೊಂದರೆಗೀಡಾದವರಿಗೆ ತಕ್ಷಣ ಆಗಬೇಕಾದ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈಗಾಗಲೇ ಕೈಗೊಂಡಿದೆ.

Advertisement

ಉಳಿದ ಮಧ್ಯಂತರ ಮತ್ತು ದೀರ್ಘ‌ಕಾಲೀನ ಪರಿಹಾರದ ಬಗ್ಗೆ ಸದ್ಯದಲ್ಲೇ ವರದಿ ಆಧರಿಸಿ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ಆಗಲಿದೆ. ನಮ್ಮದು ಜನರಿಂದ ಆಯ್ಕೆಯಾದ ಸರ್ಕಾರ ಜನರಿಗೋಸ್ಕರ ಇರುವ ಸರ್ಕಾರ, ಸಂಕಷ್ಟದಲ್ಲಿರುವವರ ಬೇನೆ ಬಗ್ಗೆ ನಮಗೆ ಅರಿವಿದೆ. ಇದರಲ್ಲಿ ಯಾವುದೇ ನಿರ್ಲಕ್ಷ ಇಲ್ಲ. ಈ ಬಗ್ಗೆ ನಾನು ನಿರಂತರ ಸಂಬಂಧಪಟ್ಟ ಕೇಂದ್ರ ಸರ್ಕಾರದ ಇಲಾಖೆಗಳ ಮಂತ್ರಿಗಳ ಸಂಪರ್ಕದಲ್ಲಿದ್ದೇನೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಾವು ನೊಂದವರ ಪರ ಜವಾಬ್ದಾರಿಯಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ.’ ಎಂದು ನಾಲ್ಕು ಸರಣಿ ಟ್ವೀಟ್‌ಗಳನ್ನು ಸದಾನಂದಗೌಡರು ಮಾಡಿದ್ದರು.

ಸೂಲಿಬೆಲೆ ಮಾರುತ್ತರ: ಡಿ.ವಿ.ಸದಾನಂದ ಗೌಡರ ಸರಣಿ ಟ್ವೀಟ್‌ಗೆ ಟ್ವೀಟ್‌ ಮೂಲಕವೇ ಪ್ರತಿಕ್ರಿಯೆ ನೀಡಿರುವ ಚಕ್ರವರ್ತಿ ಸೂಲಿಬೆಲೆ.. “Lol! ಈ ಮನುಷ್ಯ ಈಗ ಬಂದ. ಡಿ.ವಿ.ಸದಾನಂದಗೌಡರೇ, ನೊಂದಿರುವ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾರ್ಷ್ಟ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೆ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ.

ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬರದ ಪರಿಹಾರ ಯಾವ ಪುರುಷಾರ್ಥಕ್ಕೆ?’ ಎಂದು ಮಾರ್ಮಿಕವಾಗಿ ಟ್ವೀಟ್‌ ಮೂಲಕ ಪ್ರತ್ತುತ್ತರ ನೀಡಿದರು. ಈ ರೀತಿ ಚಕ್ರವರ್ತಿ ಸೂಲಿಬೆಲೆ ಟ್ವೀಟ್‌ ಮಾಡುತ್ತಿದ್ದಂತೆ ಡಿ.ವಿ.ಸದಾನಂದಗೌಡರು, ತಮ್ಮ ಖಾತೆಯಿಂದ ಚಕ್ರವರ್ತಿ ಸೂಲಿಬೆಲೆಯವರನ್ನು ಬ್ಲಾಕ್‌ ಮಾಡಿದರು. ಬ್ಲಾಕ್‌ ಮಾಡಿರುವುದನ್ನು ಸ್ಕ್ರೀನ್‌ ಶಾರ್ಟ್‌ ಸಮೇತವಾಗಿ ಚಕ್ರವರ್ತಿ ಸೂಲಿಬೆಲೆ ತಮ್ಮ ಟ್ವೀಟ್‌ ಖಾತೆಯಲ್ಲಿ ಪಬ್ಲಿಷ್‌ ಮಾಡಿಕೊಂಡರು. ಸದಾನಂದ ಗೌಡರ ಪ್ರತಿಕ್ರಿಯೆ ಹಾಗೂ ಬ್ಲಾಕ್‌ ಮಾಡಿರುವುದಕ್ಕೆ ನೆಟ್ಟಿಗರಿಂದ ಟೀಕೆಗಳ ಸುರಿಮಳೆಯೇ ಎದುರಾಗಿತ್ತು.

ಹಾರಿಕೆ ಸುದ್ದಿ ಹರಡುವುದು ದೇಶದ್ರೋಹ!: ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸದಾನಂದ ಗೌಡ, ಗುರುವಾರ ಸಚಿವ ಸಂಪುಟದ ಸಭೆ ಇದೆ. ಅಲ್ಲಿ ನಾವು ಪ್ರವಾಹ ಪರಿಹಾರದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಗಮನಕ್ಕೆ ತರುತ್ತೇವೆ. ಹಿಂದೆಲ್ಲ ಪರಿಹಾರ ಹಣ ಯಾವ ರೀತಿ ದುರ್ಬಳಕೆ ಆಗುತ್ತಿತ್ತು ಎಂಬುದು ಗೊತ್ತಿದೆ. ಈಗ ಆ ರೀತಿ ಆಗಲು ಬಿಡುವುದಿಲ್ಲ ಎಂದರು. ಯಾರೋ ಕೂತ್ಕೊಂಡು ಟ್ವೀಟ್‌ ಮಾಡುತ್ತಾರೆ… ಮಂತ್ರಿಗಿರಿ ಭಿಕ್ಷೆ… 25 ಸಂಸದರು ಏನೂ ಮಾಡುತ್ತಿಲ್ಲ.. ಎಂದು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವವರು, ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳೆಂದು ಗಾಂಧೀಜಿಯವರು ಹೇಳಿದ್ದಾರೆ. ಇವರೆಲ್ಲ ಅದೇ ಬ್ರ್ಯಾಂಡಿಗೆ ಬರುತ್ತಾರೆ. ಸುಮ್ಮನೆ ಭಾಷಣದಿಂದ, ಟ್ವೀಟ್‌ನಿಂದ ದೇಶ ಕಟ್ಟಲು ಆಗೊಲ್ಲ ಎಂದು ಪರೋಕ್ಷವಾಗಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next