ಬೆಳಗಾವಿ: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರ ವಿಧಾನಸಭೆಯಲ್ಲಿ ಇಂಧನ ಇಲಾಖೆ ಹಾಲಿ-ಮಾಜಿ ಸಚಿವರ ವಿರುದ್ಧ ಪರಸ್ಪರ ನಿಂದನೆ, ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ವಿದ್ಯುತ್ ಲೋಡ್ ಶೆಡ್ಡಿಂಗ್ ವಿಚಾರದ ಪ್ರಸ್ತಾವ ರಾಜಕೀಯ ವಿಚಾರಕ್ಕೆ ತಿರುಗಿತಲ್ಲದೆ, ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಮಾಜಿ ಸಚಿವ ಸುನಿಲ್‌ಕುಮಾರ್ ಅವರು ಪರಸ್ಪರ ಅಸಮರ್ಥ ಎಂದು ವೈಯಕ್ತಿಕ ನಿಂದನೆಗಿಳಿದರು. ಬಿಜೆಪಿ ಸದಸ್ಯರು ಸಚಿವರ ವಿರುದ್ಧ ಮುಗಿಬಿದ್ದರೆ, ಕಾಂಗ್ರೆಸ್ ಸದಸ್ಯರು ಸಚಿವರ ಬೆಂಬಲಕ್ಕೆ ನಿಂತಿದ್ದರಿಂದ ಸದನದಲ್ಲಿ ಯಾರು ಏನು ಮಾತನಾಡುತ್ತಾರೆ ಎಂದು ತಿಳಿಯದ ಸ್ಥಿತಿ ನಿರ್ಮಾಣವಾ ಯಿತು.
ಗಮನ ಸೆಳೆ ಯುವ ಸೂಚನೆ ವೇಳೆ ಶಾಸಕ ಡಾ| ವೈ. ಭರತ್ ಶೆಟ್ಟಿ ಅವರು ರಾಜ್ಯದಲ್ಲಿನ ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಕರಾವಳಿ ಭಾಗದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ, ಸರಕಾರ 200 ಯುನಿಟ್‌ವರೆಗೆ ಉಚಿತ, ಇನ್ನೊಂದು ಕಡೆ ವಿದ್ಯುತ್ ನೀಡದಿದ್ದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ರಾಜ್ಯದಲ್ಲಿ 6 ಲಕ್ಷ ಕಿ.ಮೀ.ವ್ಯಾಪ್ತಿಯ ವಿದ್ಯುತ್ ಲೈನ್ ಹಾಗೂ 10 ಲಕ್ಷ ವಿದ್ಯುತ್ ಪರಿವರ್ತಕಗಳು ಇವೆ. ಎಲ್ಲಿಯಾದರೂ ಕೆಲವು ಕಾರಣಗಳಿಂದ ವಿದ್ಯುತ್ ಕಡಿತವಾಗಿರಬಹುದೇ ವಿನಃ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಮಂಗಳವಾರ ಹೆಸ್ಕಾಂ ವ್ಯಾಪ್ತಿಯ ಶಾಸಕರ ಸಭೆ ನಡೆಸಿದ್ದೇನೆ. ಒಬ್ಬ ಶಾಸಕರು ಲೋಡ್ ಶೆಡ್ಡಿಂಗ್ ಇರುವ ಬಗ್ಗೆ ಹೇಳಿಲ್ಲ ಎಂದರು. ಈ ವೇಳೆ ಕರಾವಳಿ ಭಾಗದ ಬಿಜೆಪಿಯ ಹಲವು ಶಾಸಕರು ಎದ್ದು ನಿಂತು ತಪ್ಪು ಉತ್ತರ ನೀಡುತ್ತೀರಿ ನಮ್ಮಲ್ಲಿ ಸಮಸ್ಯೆ ಇದೆ ಎಂದು ಸಚಿವರ ವಿರುದ್ಧ ಮುಗಿಬಿದ್ದರು.
ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಮಂಗಳವಾರ ಹೆಸ್ಕಾಂ ವ್ಯಾಪ್ತಿಯ ಶಾಸಕರ ಸಭೆ ಮಾಡಿದ್ದು, ಬುಧವಾರ ಜೆಸ್ಕಾಂ ವ್ಯಾಪ್ತಿಯ ಶಾಸಕರ ಸಭೆ ಮಾಡುತ್ತಿದ್ದೇನೆ, ಬೆಂಗಳೂರಿನಲ್ಲಿ ಮೆಸ್ಕಾಂ ವ್ಯಾಪ್ತಿಯ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಿ ಪರಿಹಾರ ಕೈಗೊಳ್ಳುವೆ, ಅಗತ್ಯವಿದ್ದ ಕಡೆ ನಾನೇ ಬಂದು ಸಭೆ ನಡೆಸುವೆ. ಮತ್ತೆ ಸ್ಪಷ್ಟಪಡಿಸುವೆ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ ವಿದ್ಯುತ್ ಹೆಚ್ಚುವರಿ ಇದೆ ಎಂದು ಹೇಳಿದರು. ಇನ್ನು ಈ ವಿಷಯದ ಮೇಲೆ ಚರ್ಚೆ ಸಾಕು ಎಂದು ಸ್ಪೀಕರ್ ಕಾವೇರಿದ ಚರ್ಚೆಗೆ ತೆರೆ ಎಳೆದರು.