ಮಲ್ಪೆ: ನಾಡದೋಣಿ ಮೀನುಗಾರಿಕೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡು ಕರಾವಳಿಯಾದ್ಯಾಂತ ಅಕ್ರಮವಾಗಿ ಯಾಂತ್ರಿಕೃತ ರೀತಿಯಲ್ಲಿ ಮೀನುಗಾರಿಕೆಯನ್ನು ನಡೆಸುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಖೀಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘ ಮಲ್ಪೆ ಮೀನುಗಾರಿಕಾ ಉಪನಿರ್ದೇಶಕರ ಕಚೇರಿಗೆ ತೆರಳಿ ಅಧಿಕಾರಿಗಳಲ್ಲಿ ಆಗ್ರಹಿಸಿದೆ.
ಮತ್ಸé ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ನಾಡದೋಣಿಯ ಹೆಸರಿನಲ್ಲಿ ಅಕ್ರಮವಾಗಿ ಯಾಂತ್ರಿಕೃತ ಮೀನುಗಾರಿಕೆಯನ್ನು ಮಾಡುತ್ತಿರುವ ಬಗ್ಗೆ ಇದುವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು 5 ದಿವಸದೊಳಗೆ ಸ್ಪಷ್ಟ ಮಾಹಿತಿಯನ್ನು ಮೀನುಗಾರಿಕೆ ಇಲಾಖೆ ನೀಡಬೇಕು, ಇಲ್ಲದಿದ್ದಲ್ಲಿ ತಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಉಪ ನಿರ್ದೇಶಕರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿ ಸಹಿತ ವಿವಿಧ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಅಖೀಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಗುರುದಾಸ್ ಬಂಗೇರ ಮಾತನಾಡಿ, ಯಾಂತ್ರಿಕೃತ ಮೀನುಗಾರಿಕೆ ನಾಡದೋಣಿಗಳಲ್ಲಿ ಟ್ರೆಡಿಶನಲ್ (ಸಾಂಪ್ರದಾಯಿಕ) ನೆಟ್ ಎಂದು ನಮೂದಿತವಾಗಿದೆ. ಯಾವ ಬಲೆ ಎಂದು ಸ್ಪಷ್ಪ ನಮೂದಿಸಿರುವುದಿಲ್ಲ. ಮೋಟಾರೀಕೃತ ದೋಣಿ ಎಂದು ನಮೂದಿಸಿ, ವಿವಿಧ ರೀತಿಯ ಬಲೆಗಳನ್ನು ಉಪಯೋಗಿಸಿ ಯಾಂತ್ರೀಕೃತ ಮೀನುಗಾರಿಕೆ ನಡೆಸಲಾಗುತ್ತಿದೆ. ನಾಡದೋಣಿಗಳಿಗೆ ಡ್ರಮ್‌ವಿಂಚ್, 4 ಸಿಲಿಂಡರ್ ಎಂಜಿನ್, ಜನರೇಟರ್, ವಯರ್‌ಲೆಸ್, ಫಿಶ್‌ಫೈಂಡರ್ ಇಟ್ಟುಕೊಂಡು 25ರಿಂದ 40 ಅಶ್ವಶಕ್ತಿಯ ಎರಡೆರಡು ಎಂಜಿನ್ ಬಳಸಿ ಮಳೆಗಾಲದಲ್ಲಿಯೂ ಮೀನುಗಾರಿಕೆ ನಡೆಸಲಾಗುತ್ತದೆ. ಗಿಲ್‌ನೆಟ್ ಬಲೆ ಉಪಯೋಗಿಸುವ ಅನುಮತಿ ಪಡೆದು ಟ್ರಾಲ್ ಬಲೆಗಳನ್ನು ಉಪಯೋಗಿಸಿ ಬುಲ್‌ಟ್ರಾಲಿಂಗ್ ನಡೆಸಲಾಗುತ್ತದೆ ಎಂದವರು ಆರೋಪಿಸಿದ್ದಾರೆ.
18 ಎಂ.ಎಂ. ಬಲೆ
ಜಿಲ್ಲೆಯಲ್ಲಿ 26 ರಿಂಗ್‌ಸೀನ್ ದೋಣಿಗಳಿಗೆ (ಮಾಟುಬಲೆ) ಮಾತ್ರ ಮೀನುಗಾರಿಕೆಗೆ ಅನುಮತಿ ಇದೆ. ಆದರೆ 2 ಸಾವಿರಕ್ಕಿಂತಲೂ ಹೆಚ್ಚು ದೋಣಿಗಳು ರಿಂಗ್‌ಸೀನ್ ಮಾದರಿಯ ಮೀನುಗಾರಿಕೆಯನ್ನು ವರ್ಷಪೂರ್ತಿ ನಡೆಸುತ್ತಿದ್ದಾರೆ. ಸರಕಾರದ ಆದೇಶದ ಪ್ರಕಾರ 22 ಎಂ.ಎಂ. ಮೇಲ್ಪಟ್ಟ ಗಾತ್ರದ ಬಲೆ ಉಪಯೋಗಿಸಲು ಮಾತ್ರ ಅವಕಾಶವಿದೆ. ಆದರೆ ಇವರು 16ರಿಂದ 18ಎಂ.ಎಂ. ಒಳಗಿನ ಗಾತ್ರದ ಬಲೆಯನ್ನು ಉಪಯೋಗಿಸಿ ಸಣ್ಣ ಗಾತ್ರದ ಮೀನುಗಳನ್ನು ಹಿಡಿದು ಮತ್ಸéಸಂತತಿ ನಾಶಕ್ಕೂ ಕಾರಣವಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ನಾಡದೋಣಿಗಳಿಗೆ ಸಿಗುವ ಸೀಮೆ ಎಣ್ಣೆಯಲ್ಲಿ ಶೇ. 30ರಷ್ಟು ಮಾತ್ರ ನೈಜ ಮೀನುಗಾರರಿಗೆ ಸಿಗುತ್ತದೆ, ಉಳಿದಂತೆ ಕಾಳಸಂತೆಯಲ್ಲಿ ಮಾರಾಟವಾಗುತ್ತದೆ. ಈ ರೀತಿಯಲ್ಲಿ ಸರಕಾರದ ಬೊಕ್ಕಸಕ್ಕೆ ಉಂಟಾಗುವ ಅರ್ಥಿಕ ನಷ್ಟವನ್ನು ತಪ್ಪಿಸಿ, ಸರಕಾರದ ಯೋಜನೆಗಳು ನೈಜ್ಯ ಮೀನುಗಾರರಿಗೆ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.
ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್, ನವೀನ್ ಕೋಟ್ಯಾನ್, ರಾಮ ಸುವರ್ಣ, ನವೀನ್ ಸುವರ್ಣ, ಮಧು ಕರ್ಕೇರ, ವಿಶ್ವನಾಥ್, ಮೊದಲಾದವರು ಉಪಸ್ಥಿತರಿದ್ದರು.