Advertisement

ಪಿಒಕೆಯ ಶಾರದಾ ಪೀಠಕ್ಕೆ ತೆರಳಲು ಅನುಮತಿ ಕೊಡಿ

06:00 AM Oct 26, 2018 | |

ಚಿಕ್ಕಮಗಳೂರು: ಅತ್ಯಂತ ಮಹತ್ವಪೂರ್ಣ ಬೆಳವಣಿಗೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಸರ್ವಜ್ಞ ಪೀಠಕ್ಕೆ ಭಕ್ತರು ತೆರಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಶೃಂಗೇರಿ ಮಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಅವರು ಅ.10ರಂದೇ ಪತ್ರ ಬರೆದಿದ್ದಾರೆ.  ವರ್ಷಕ್ಕೆ ಒಮ್ಮೆಯಾದರೂ, ಅಲ್ಲಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಜತೆಗೆ ಮಾತುಕತೆ ನಡೆಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.

Advertisement

ಶಾರದಾಂಬೆಯ ಶ್ಲೋಕಗಳಲ್ಲಿ “ಕಾಶ್ಮೀರ ಪುರವಾಸಿನಿ’ ಎಂದು ಹೇಳಲಾಗುತ್ತದೆ. ಶಾರದೆ ಕಾಶ್ಮೀರದ ಪ್ರಧಾನ ದೇವತೆಯಾಗಿದೆ. ಆದಿಶಂಕರರು ಕಾಶ್ಮೀರಕ್ಕೆ ಹೋದಾಗ ಸರ್ವಜ್ಞ ಪೀಠಕ್ಕೆ ತೆರಳಿ ಅಲ್ಲಿದ್ದ ಎಲ್ಲ ಪಂಡಿತರನ್ನು ತರ್ಕದಲ್ಲಿ ಸೋಲಿಸಿ ಸರ್ವಜ್ಞ ಪೀಠಸ್ಥರಾಗಿದ್ದ ಸ್ಥಳ ಅದು. ಭಾರತದ ಎಲ್ಲರಿಗೂ ಇದು ಅತ್ಯಂತ ಪವಿತ್ರ ಸ್ಥಳ. ಆದರೆ, ಈಗ ಅದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದು, ಅತ್ಯಂತ ದುಸ್ಥಿತಿಯಲ್ಲಿದೆ ಎಂದು ವಿವರಿಸಿದ್ದಾರೆ.

ಶ್ರೀ ಭಾರತೀ ತೀರ್ಥ ಸ್ವಾಮೀಜಿ ಪರವಾಗಿ  ಶಂಕರಮಠದ ಆಡಳಿತಾಧಿಕಾರಿ ವಿ.ಆರ್‌. ಗೌರಿಶಂಕರ್‌ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪತ್ರ ಬರೆದಿದ್ದಾರೆ. ಶೃಂಗೇರಿ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥರ ಆಶಯದಂತೆ ಸರ್ವಜ್ಞ ಪೀಠವನ್ನು ಮತ್ತೆ ತೆರೆಯಬೇಕು. ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದಾರೆ.

ಸಂಪ್ರದಾಯವಾಗಿತ್ತು:  ಕಾಶ್ಮೀರದ ಭಕ್ತರು ಆಗಸ್ಟ್‌ ತಿಂಗಳಲ್ಲಿ ಸರ್ವಜ್ಞ ಪೀಠಕ್ಕೆ ಯಾತ್ರೆ ಹೋಗುವುದು ಒಂದು ಸಂಪ್ರದಾಯವಾಗಿತ್ತು. ಸದ್ಯ ಸರ್ವಜ್ಞ ಪೀಠ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಇರುವುದರಿಂದ ಭಕ್ತಾದಿಗಳು ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ.  ಇಂತಹ ಶ್ರೇಷ್ಠ ಸರ್ವಜ್ಞ ಪೀಠ ದರ್ಶನ ಮಾಡುವ ಮಹತ್ತರ ಆಶಯ ಹಿಂದುಗಳದ್ದಾಗಿದೆ. ಹೀಗಾಗಿ  ಸರ್ವಜ್ಞ ಪೀಠಕ್ಕೆ ಹೋಗುವ ಅವಕಾಶವನ್ನು ಕಲ್ಪಿಸಿದಲ್ಲಿ ಅಪಾರ ಹಿಂದೂ ಭಕ್ತರ ಆಶಯ ಈಡೇರಿದಂತಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಚರ್ಚಿಸಲು ಮನವಿ: ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಚರ್ಚಿಸಿ ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಭಕ್ತರು ಸರ್ವಜ್ಞ ಪೀಠಕ್ಕೆ ತೆರಳಿ ದರ್ಶನ ಮಾಡಲು ಅವಕಾಶ ಮಾಡಿಕೊಡಬೇಕು. ಭಕ್ತರ ಈ ಆಶಯ ಅರಿತು ತಾವು ತಮ್ಮದೇ ಆದ ಮಾರ್ಗದಲ್ಲಿ ಕಾರ್ಯೋನ್ಮುಖರಾಗಿ ಪ್ರಯತ್ನಿಸಬೇಕೆಂದು ಪತ್ರದಲ್ಲಿ ವಿ.ಆರ್‌. ಗೌರಿಶಂಕರ್‌ ಮನವಿ ಮಾಡಿದ್ದಾರೆ.

Advertisement

ಕ್ರಮಕ್ಕೆ ಸೂಚಿಸಲಾಗಿತ್ತು:  ಪಾಕಿಸ್ತಾನ ಆಕ್ರಮಿತ ಕಾಶ್ಮೀರದ  ಸುಪ್ರೀಂಕೋರ್ಟ್‌ ಗೆ ನವದೆಹಲಿಯಲ್ಲಿ ವಾಸವಾಗಿರುವ ಕಾಶ್ಮೀರಿ ಪಂಡಿತ ವರ್ಗಕ್ಕೆ ಸೇರಿದ ರವೀಂದ್ರ ಪಂಡಿತ್‌ ಎಂಬುವರು ದೇಗುಲದ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದರು. ಅದನ್ನು ಪರಿಗಣಿಸಿದ್ದ ನೆರೆಯ ರಾಷ್ಟ್ರದ ಸುಪ್ರೀಂಕೋರ್ಟ್‌ ಈ ವರ್ಷ ಜ.31ರಂದು ಮುಖ್ಯ ನ್ಯಾಯಮೂರ್ತಿ ಚೌಧರಿ ಮೊಹಮ್ಮದ್‌ ಇಬ್ರಾಹಿಂ ಜಿಯಾ ಪಾಕಿಸ್ತಾನ ಸರ್ಕಾರಕ್ಕೆ ಹಲವು ಸೂಚನೆಗಳನ್ನು ನೀಡಿದ್ದರು. ರವೀಂದ್ರ ಪಂಡಿತ ಅವರು “ಶಾರದಾ ಪೀಠ ಉಳಿಸಿ’ ಹೋರಾಟ ಸಮಿತಿಯ ಪ್ರವರ್ತಕರೂ ಆಗಿದ್ದಾರೆ. ಅವರಿಗೆ ಪತ್ರ ಬರೆದಿದ್ದ ನೆರೆಯ ರಾಷ್ಟ್ರದ ಸುಪ್ರೀಂಕೋರ್ಟ್‌ ರಿಜಿಸ್ಟ್ರಾರ್‌ ರಿಯಾಝ್ ಅಹ್ಮದ್‌ “ಸುಪ್ರೀಂಕೋರ್ಟ್‌ ತೀರ್ಪು ಪಾಲನೆಯಾಗಿಲ್ಲ ಎಂದು ತಿಳಿದು ಬಂದರೆ ಮತ್ತೆ ಪತ್ರ ಬರೆಯಿರಿ. ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದ್ದರು.

ದೇಗುಲ ಇರುವ ಸ್ಥಳವೆಲ್ಲಿ?
ಈ ಪವಿತ್ರ ದೇಗುಲ ಪಾಕ್‌ ಆಕ್ರಮಿತ ಕಾಶ್ಮೀರದ ನೀಲಂ ವ್ಯಾಲಿ ಜಿಲ್ಲೆಯ ಶಾರದಾ ಎಂಬ ಗ್ರಾಮದಲ್ಲಿದೆ. ಅದು ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಿಂದ 96 ಕಿಮೀ, ಬಾರಾಮುಲ್ಲಾದಿಂದ 67 ಕಿಮೀ ಮತ್ತು ಪಾಕಿಸ್ತಾನದ ಮುಝಾಫ‌ರಾಬಾದ್‌ನಿಂದ 149 ಕಿಮೀ ದೂರದಲ್ಲಿದೆ. ಸದ್ಯ ಗಡಿ ನಿಯಂತ್ರಣ ರೇಖೆಯಿಂದ ಕೇವಲ 25 ಕಿಮೀ ದೂರದಲ್ಲಿದೆ ಈ ಐತಿಹಾಸಿಕ ದೇಗುಲ. ಶಾಂಡಿಲ್ಯ ಮಹರ್ಷಿ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದ. ಅನತಿ ದೂರದಲ್ಲಿಯೇ ಅಮರಕುಂಡ ಕೆರೆ ಇತ್ತು.

142  ಅಡಿ- ಉದ್ದ
94.6 ಅಡಿ- ಅಗಲ
6 ಅಡಿ- ಹೊರಗಿನ ಗೋಡೆಯ ಅಗಲ
11 ಅಡಿ- ಹೊರಗಿನ ಗೋಡೆಯ ಉದ್ದ
8 ಅಡಿ ಎತ್ತರ- ದ್ವಾರ

ಸರ್ವಜ್ಞ ಪೀಠದಲ್ಲಿ ಕುಳಿತಿದ್ದ ಶಂಕರಾಚಾರ್ಯರು
ಇದೇ ದೇಗುಲದಲ್ಲಿ ಆದಿ ಶಂಕರಾಚಾರ್ಯರು ಸರ್ವಜ್ಞ ಪೀಠದಲ್ಲಿ ಕುಳಿತಿದ್ದರು. ಶ್ರೀ ಕ್ಷೇತ್ರದಲ್ಲಿದ್ದ ಸಂದರ್ಭದಲ್ಲಿಯೇ “ಪ್ರಪಂಚಸಾರ’ವನ್ನು ರಚಿಸಿದ್ದರು. ಅದರಲ್ಲಿ ಶ್ರೀ ಶಾರದಾ ದೇವಿಯನ್ನು ಅವರು ವರ್ಣಿಸಿದ್ದಾರೆ. ಶೃಂಗೇರಿಯಲ್ಲಿರುವ ಶಾರದಾ ದೇವಿಯ ಗಂಧದ ಮರದಿಂದ ಕೆತ್ತಲಾಗಿರುವ ವಿಗ್ರಹವನ್ನು ಶಂಕರಾಚಾರ್ಯರೇ ಇಲ್ಲಿಂದ ತೆಗೆದುಕೊಂಡು ಬಂದಿದ್ದಾರೆ ಎಂಬ ನಂಬಿಕೆ.

ಮೊದಲ ಯುದ್ಧದ ಬಳಿಕ: ಭಾರತ ಮತ್ತು ಪಾಕಿಸ್ತಾನ ನಡುವೆ 1947-1948ರಲ್ಲಿ ನಡೆದ ಮೊದಲ ಯುದ್ಧದ ಬಳಿಕ ಮೀರ್‌ಪುರ್‌, ಮುಝಾಫ‌ರಾಬಾದ್‌, ನೀಲಂ ವ್ಯಾಲಿ ಮತ್ತು ಗಿಲಿYಟ್‌-ಬಾಲ್ಟಿಸ್ತಾನ್‌ ಪಾಕಿಸ್ತಾನದ ವಶವಾದವು. ಈ ಪೈಕಿ ಗಿಲಿYಟ್‌-ಬಾಲ್ಟಿಸ್ತಾನ್‌ ಪ್ರತ್ಯೇಕ ಎಂದು ಪಾಕ್‌ ಸರ್ಕಾರ ಘೋಷಿಸಿದೆ. ಹೀಗಾಗಿ ಶಾರದಾ ದೇಗುಲ ಮತ್ತು ಇತರ ಅಸಂಖ್ಯಾತ ದೇಗುಲಗಳು ಆ ಪ್ರದೇಶಕ್ಕೆ ಬಲವಂತವಾಗಿ ಸೇರ್ಪಡೆಗೊಂಡವು.

2005ರ ಅ.8ರಂದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ದೇಗುಲಕ್ಕೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಈ ವಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸೇನೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ನಿವೃತ್ತ ಲೆ.ಜ. ಅತಾ ಹಸ್ನೆ„ನ್‌ ಹೇಳುವ ಪ್ರಕಾರ ಗಡಿ ನಿಯಂತ್ರಣ ರೇಖೆ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶ ಅತ್ಯಂತ ಸೂಕ್ಷ್ಮವಾಗಿದೆ. “ಉತ್ತರ ಭಾಗದ ಕೇಲ್‌ ಎಂಬಲ್ಲಿಂದ ಆತು¾ಕಂ ಮತ್ತು ದುಡ್ನಿಯಾಲ್‌ನಿಂದ ಭಾರತದ ಪ್ರದೇಶವಾಗಿರುವ ತಿತ್ವಾಲ್‌ ವರೆಗೆ ಎಲ್‌ಒಸಿಯಲ್ಲಿ ಭಾರತದ ಪ್ರಭಾವವೇ ಹೆಚ್ಚಾಗಿದೆ ಎಂದಿದ್ದರು.

2014 ಮತ್ತು 2015ರಲ್ಲಿ ರೆಹಮತುಲ್ಲಾ ಖಾನ್‌ ಮತ್ತು ಗುಲಾಂ ನಂಬಿ ಎಂಬ ಪಾಕ್‌ ಆಕ್ರಮಿತ ಕಾಶ್ಮೀರದ ಇಬ್ಬರು ನಾಗರಿಕರು ಈ ಪ್ರದೇಶದಲ್ಲಿರುವ ದೇಗುಲ, ಗುರುದ್ವಾರಗಳ ದುರಸ್ತಿಗೆ ಅನುಮೋದನೆ ನೀಡಬೇಕೆಂದು ಮನವಿ ಮಾಡಿದ್ದರು. 2007ರಲ್ಲಿ ಕಾಶ್ಮೀರಿ ಪಂಡಿತರ ತಂಡಕ್ಕೆ ಪಿಒಕೆಗೆ ತೆರಳಲು ಅನುಮತಿ ನೀಡಲಾಗಿತ್ತು. ಆದರೆ ದೇಗುಲ ಇರುವ ಸ್ಥಳಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿರಲಿಲ್ಲ.

ಅಲ್ಲಿಗೆ ಹೋಗಲು ಹೇಗೆ ಸಾಧ್ಯ?
– ಸದ್ಯ ಅಲ್ಲಿಗೆ ಭಾರತದ ಪ್ರಜೆಗಳು ಹೋಗಲು ಸಾಧ್ಯವಿಲ್ಲ.
– ಒಂದು ವೇಳೆ ಹೋಗಲೇ ಬೇಕೆಂದಿದ್ದರೆ ಪಾಕಿಸ್ತಾನದ ವೀಸಾಕ್ಕೆ ಅರ್ಜಿ ಹಾಕಿ, ಅನುಮತಿ ಪಡೆಯಬೇಕು.
– ಬಳಿಕ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ನೀಲಂ ವ್ಯಾಲಿ ಮೂಲಕ ಪ್ರಯಾಣಕ್ಕೆ ಒಪ್ಪಿಗೆ ಪಡೆಯಬೇಕು.
–  ಶಾರದಾ ಪೀಠಕ್ಕೆ ಹೋಗಲು ಅನುಮತಿ ಸಿಕ್ಕಿದರೆ ಪಂಜಾಬ್‌ನಲ್ಲಿರುವ ವಾಘಾ ಗಡಿ ಮೂಲಕ ಪಾಕಿಸ್ತಾದ ಮುಝಾಫ‌ರಾಬಾದ್‌ಗೆ ಹೋಗಬೇಕು. ನಂತರ ನೀಲಂ ವ್ಯಾಲಿ ಜಿಲ್ಲೆಗೆ ಸಾಗಬೇಕು.

ಶೃಂಗೇರಿ ಪೀಠಕ್ಕೆ ಕಾಶ್ಮೀರ ಪಂಡಿತರ ಭೇಟಿ
ಶೃಂಗೇರಿ:
ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಸರ್ವಜ್ಞ ಪೀಠದ ಅಭಿವೃದ್ಧಿ ಮತ್ತು ಭಕ್ತರಿಗೆ ಪೀಠಕ್ಕೆ ತೆರಳಲು ಮುಕ್ತ ಅವಕಾಶ ಒದಗಿಸುವ ಸಂಬಂಧ ಕಾಶ್ಮೀರ ಪಂಡಿತರ ತಂಡವು ಶಾರದಾ ಪೀಠದ ಉಭಯ ಜಗದ್ಗುರುಗಳನ್ನು ಗುರುನಿವಾಸದಲ್ಲಿ
ಭೇಟಿ ಮಾಡಿ ಮಾತುಕತೆ ನಡೆಸಿತು.

ಕಾಶ್ಮೀರ ಪಂಡಿತರ ಅಭಿವೃದ್ಧಿ ಸಮಿತಿ ರಾಜ್ಯದೆಲ್ಲೆಡೆ ಸಂಚರಿಸಿ ಅನೇಕ ವಿದ್ವಾಂಸರನ್ನು ಹಾಗೂ ಸ್ವಾಮೀಜಿಗಳನ್ನು ಭೇಟಿ ಮಾಡಿ ಅವರ ಮಾಗದರ್ಶನ ಹಾಗೂ ಸಲಹೆ ಪಡೆಯುತ್ತಿದೆ. ಸರ್ವಜ್ಞ ಪೀಠವನ್ನು ಅಭಿವೃದ್ಧಿಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಸಮಿತಿಯ ಸದಸ್ಯರು ಜಗದ್ಗುರುಗಳಿಗೆ ತಿಳಿಸಿದರು.

ಪಂಡಿತರೊಂದಿಗೆ ಮಾತುಕತೆ ನಡೆಸಿ ಅನುಗ್ರಹಿಸಿದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ, ಧರ್ಮದ ಉಳಿವಿಗಾಗಿ ಅವತರಿಸಿದ ಶಂಕರಚಾರ್ಯರು ದಿಗ್ವಿಜಯ ಸಾಧಿಸಿದ ಸರ್ವಜ್ಞ ಪೀಠ ನಮ್ಮ ಶ್ರದಾಟಛಿ ಕೇಂದ್ರವಾಗಿದೆ. ಧರ್ಮ ಉಳಿದರೆ ಮಾತ್ರ ದೇಶದಲ್ಲಿ ಶಾಂತಿ, ನೆಮ್ಮದಿ ಸಾಧ್ಯ. ಸರ್ವಜ್ಞ ಪೀಠವು ಪರಕೀಯ ದೇಶದ ಆಡಳಿತದಲ್ಲಿದ್ದು, ಇಲ್ಲಿಗೆ ತೆರಳಲು ಭಕ್ತರಿಗೆ ಅವಕಾಶ ಕಲ್ಪಿಸಲು ನಮ್ಮ ಆಡಳಿತಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ವಜ್ಞ ಪೀಠವನ್ನು ಅಭಿವೃದ್ಧಿಗೊಳಿಸುವ ನಿಮ್ಮ ಪ್ರಯತ್ನಕ್ಕೆ
ಪೀಠದ ಹಾಗೂ ನಮ್ಮ ಪರಿಪೂರ್ಣವಾದ ಆಶೀರ್ವಾದ ಇದೆ ಎಂದು ತಿಳಿಸಿದರು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next