ಚಿತ್ರದುರ್ಗ: ಮತದಾರರ ಮಾಹಿತಿ ಸಂಗ್ರಹಕ್ಕಾಗಿ ಚಿಲುಮೆ ಸಂಸ್ಥೆಗೆ ಸಮ್ಮಿಶ್ರ ಸರಕಾರದ ಅವ ಧಿಯಲ್ಲಿ ಅನುಮತಿ ನೀಡಲಾಗಿದೆ. ಮತದಾರರ ಮಾಹಿತಿ ಕಳವು ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಅನುಮತಿಯನ್ನು ರದ್ದು ಮಾಡಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018, ಡಿ.22ರಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವ ಧಿಯಲ್ಲಿ ಅನುಮತಿ ನೀಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥನಾರಾಯಣ ರಾಜೀನಾಮೆ ಕೇಳುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗ ರಾಜೀನಾಮೆ ನೀಡುತ್ತಾರಾ ಎಂದು ಪ್ರಶ್ನಿಸಿದರು.
ಚಿಲುಮೆ ಸಂಸ್ಥೆ ವಿರುದ್ಧ ದೂರು ನೀಡಲು ಹಾಗೂ ದೇಶದ ಸಾವಿರಾರು ಬೂತ್‌ಗಳಲ್ಲಿ ಎರಡು, ಮೂರು ಕಡೆಗಳಲ್ಲಿ ಮತದಾರರ ಚೀಟಿ ಇರುವವರನ್ನು ಹುಡುಕಿ ರದ್ದು ಮಾಡಬೇಕು. ಎಲ್ಲವನ್ನೂ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿ, ಅದರ ಆಧಾರದಲ್ಲಿಯೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಲು ನ.19ರಂದು ಬಿಜೆಪಿ ನಿಯೋಗ ಚುನಾವಣ ಆಯೋಗಕ್ಕೆ ತೆರಳಲಿದೆ. ಕಾಂಗ್ರೆಸ್ ಅಲ್ಪಸಂಖ್ಯಾಕರ ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಡಬಲ್ ಎಂಟ್ರಿಗಳನ್ನು ಡಿಲೀಟ್ ಮಾಡಲು ಒಪ್ಪುತ್ತಿಲ್ಲ. ಈ ನಿಟ್ಟಿನಲ್ಲಿ ಚುನಾವಣ ಆಯೋಗಕ್ಕೆ ಮನವಿ ಮಾಡಲಿದ್ದೇವೆ ಎಂದರು.
ಸಿದ್ದು ರಾಜೀನಾಮೆ ನೀಡಲಿ
ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಖಾಲಿ ಮನೆ ಎಷ್ಟು, ಮತದಾರರಿರುವ ಮನೆ ಎಷ್ಟು ಎನ್ನುವ ಮಾಹಿತಿ ಕಲೆ ಹಾಕಿ ಬಿಜೆಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಡಿ.ಕೆ.ಶಿವಕುಮಾರ್ ಮಾಡಿರುವ ಆರೋದಪದಲ್ಲಿ ಹುರುಳಿಲ್ಲ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 130 ಕೋಟಿ ರೂ. ವೆಚ್ಚ ಮಾಡಿ ಜಾತಿ ಗಣತಿ ಮಾಡಿಸಿದ್ದರು. ಈ ವರದಿ ವಿಧಾನಸಭೆಯಲ್ಲಿ ಮಂಡನೆಯಾಗುವ ಮೊದಲೇ ಸೋರಿಕೆಯಾದ ಅನುಮಾನವಿದೆ. ಈ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದರು.
ಕಾಂಗ್ರೆಸ್ ನಿರುದ್ಯೋಗಿಗಳ ಫೋರಂ ಆಗಿದೆ.
ಚಿಲುಮೆ ಸಂಸ್ಥೆ ಅಕ್ರಮ ನಡೆಸಿದೆ ಎನ್ನುವುದಾದರೆ ತನಿಖೆಗೆ ಒಳಪಡಿಸುತ್ತೇವೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹೀಗಿರುವಾಗ ಆ ಸಂಸ್ಥೆಯನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಕಳವು ಮಾಡುವುದು, ಸುಳ್ಳು ಹೇಳುವುದು ಕಾಂಗ್ರೆಸ್ ಕೆಲಸ. ನಮ್ಮದಲ್ಲ ಎಂದರು.