ಬೆಂಗಳೂರು: ನಗರದ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಹುಂಡಿಗಳನ್ನು ತೆರದು ಅದರಲ್ಲಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಸರ್ಕಾರದಿಂದ ನೇಮಕಗೊಂಡಿರುವ ಕಾರ್ಯಕಾರಿ ಅಧಿಕಾರಿಗೆ ಶುಕ್ರವಾರ ಹೈಕೋರ್ಟ್ ಅನುಮತಿ ನೀಡಿತು.
ಶನಿವಾರ (ಅ.6) ಬೆಳಗ್ಗೆ 11 ಗಂಟೆಗೆ ದೇವಾಲಯಕ್ಕೆ ಸೇರಿದ 12 ಹುಂಡಿಗಳನ್ನು ತೆರೆದು ಅದರಲ್ಲಿನ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ವಿದ್ಯಾರಣ್ಯಪುರ ಶಾಖೆಯಲ್ಲಿ ಠೇವಣಿ ಇಡಲು ಹಾಗೂ ಭಕ್ತರು ದೇಣಿಗೆ ಮತ್ತು ಹರಕೆ ರೂಪದಲ್ಲಿ ಕೊಟ್ಟಿರುವ ಸೀರೆಗಳನ್ನು ಮಾರಲು ಕಾರ್ಯಕಾರಿ ಅಧಿಕಾರಿಯಾಗಿ ಸರ್ಕಾರದಿಂದ ನೇಮಕಗೊಂಡಿರುವ ತಹಶೀಲ್ದಾರರಿಗೆ ಹೈಕೋರ್ಟ್ ನಿರ್ದೇಶನ ಕೊಟ್ಟಿತು.
ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳುವಂತೆ ಕಾರ್ಯಕಾರಿ ಅಧಿಕಾರಿಗೆ ಸೂಚನೆ ನೀಡಿ, ವಿಚಾರಣೆ ಮುಂದೂಡಿತು.
ದೇವಸ್ಥಾನದ ಟ್ರಸ್ಟಿಗಳು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿತ್ತು. ದೂರಿನ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳು “ದೇವಸ್ಥಾನದ ಹಣಕ್ಕೆ ಟ್ರಸ್ಟಿಗಳು ಯಾವುದೇ ಲೆಕ್ಕ ಇಟ್ಟಿಲ್ಲ. ಹಣ ದುರ್ಬಳಕೆಯಾಗಿದೆ ಎಂದು ಅಭಿಪ್ರಾಯಪಟ್ಟು, ದೇವಸ್ಥಾನವನ್ನು ವಶಕ್ಕೆ ಪಡೆಯುವಂತೆ ಆ.10ರಂದು ಆದೇಶಿಸಿದ್ದರು.
ಅದರಂತೆ, ತಹಶೀಲ್ದಾರರು ಆ.20ರಂದು ದೇವಸ್ಥಾನವನ್ನು ವಶಕ್ಕೆ ಪಡೆದಿದ್ದರು. ಈ ಮಧ್ಯೆ ದೇವಸ್ಥಾನದ ಹುಂಡಿಗಳನ್ನು ತೆರೆದು ಅದರಲ್ಲಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಮತ್ತು ಭಕ್ತರು ಕೊಟ್ಟ ಸೀರೆಗಳನ್ನು ಮಾರಾಟ ಮಾಡಲು ತಹಶೀಲ್ದಾರರನ್ನೇ ಸರ್ಕಾರ ಕಾರ್ಯಕಾರಿ ಅಧಿಕಾರಿಯಾಗಿ ನೇಮಕ ಮಾಡಿತ್ತು.