ಶಿಲ್ಲಾಂಗ್ : ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರ ತವರು ಕ್ಷೇತ್ರವಾದ ದಕ್ಷಿಣ ತುರಾದ ಪಿಎ ಸಂಗ್ಮಾ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ‍್ಯಾಲಿಯನ್ನು ಆಯೋಜಿಸಲು ಮೇಘಾಲಯದ ಕ್ರೀಡಾ ಇಲಾಖೆಯು ಬಿಜೆಪಿಗೆ ಅನುಮತಿ ನಿರಾಕರಿಸಿದೆ. ಸ್ಥಳದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಕಾರಣವನ್ನಾಗಿ ಉಲ್ಲೇಖಿಸಿದೆ.
ತೃಣಮೂಲ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಮೈತ್ರಿಯೊಂದಿಗೆ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ರಾಜ್ಯದಲ್ಲಿ ಬಿಜೆಪಿ ಅಲೆಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
“ನಿರ್ಮಾಣ ಕಾರ್ಯಗಳು ಇನ್ನೂ ನಡೆಯುತ್ತಿರುವುದರಿಂದ ಮತ್ತು ಸ್ಥಳದಲ್ಲಿ ಇರಿಸಲಾಗಿರುವ ಸಾಮಗ್ರಿಗಳು ಸುರಕ್ಷತೆಯ ಕಾಳಜಿಯನ್ನು ಹೊಂದಿರುವ ಕಾರಣ ಕ್ರೀಡಾಂಗಣದಲ್ಲಿ ಇಷ್ಟು ದೊಡ್ಡ ಸಮಾವೇಶವನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಕ್ರೀಡಾ ಇಲಾಖೆಯು ಸಂವಹನ ನಡೆಸಿದೆ. ಆದ್ದರಿಂದ, ಪರ್ಯಾಯ ಸ್ಥಳವಾದ ಅಲೋಟ್ಗ್ರೆ ಕ್ರಿಕೆಟ್ ಸ್ಟೇಡಿಯಂ ಅನ್ನು ಪರಿಗಣಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಸ್ವಪ್ನಿಲ್ ಟೆಂಬೆ ಪಿಟಿಐಗೆ ತಿಳಿಸಿದ್ದಾರೆ. ಫೆಬ್ರವರಿ 24 ರಂದು ಶಿಲ್ಲಾಂಗ್ ಮತ್ತು ತುರಾದಲ್ಲಿ ಪ್ರಧಾನಿ ಪ್ರಚಾರ ನಡೆಸಬೇಕಿತ್ತು.
127 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕ್ರೀಡಾಂಗಣವನ್ನು ಕಳೆದ ವರ್ಷ ಡಿಸೆಂಬರ್ 16 ರಂದು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದರು. ಉದ್ಘಾಟನೆಯಾದ ಕೇವಲ ಎರಡು ತಿಂಗಳ ನಂತರ ಪ್ರಧಾನಿಯವರ ರ‍್ಯಾಲಿಗಾಗಿ ಕ್ರೀಡಾಂಗಣವನ್ನು ಅಪೂರ್ಣ ಮತ್ತು ಲಭ್ಯವಿಲ್ಲ ಎಂದು ಹೇಗೆ ಘೋಷಿಸಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿತುರಾಜ್ ಸಿನ್ಹಾ ಹೇಳಿದ್ದಾರೆ.