Advertisement

ಶೈಕ್ಷಣಿಕ ಪ್ರವಾಸಕ್ಕೆ ಅನುಮತಿ, ಷರತ್ತು ಅನ್ವಯ!

11:42 PM Nov 17, 2022 | Team Udayavani |

ಉಡುಪಿ: ಕೊರೊನಾ ಹಿನ್ನೆಲೆಯಲ್ಲಿ ನಿರ್ಬಂಧ ಹೇರಿದ್ದ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಈಗ ಕಠಿನ ಷರತ್ತುಗಳನ್ನು ವಿಧಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮತಿ ನೀಡಿದೆ.

Advertisement

2020-21, 2021-22ನೇ ಸಾಲಿನಲ್ಲಿ ಯಾವುದೇ ಶಾಲೆಗಳಿಗೂ ಪ್ರವಾಸಕ್ಕೆ ಅವಕಾಶ ಇರಲಿಲ್ಲ. ಈಗ ಕೋವಿಡ್‌ ಪರಿಸ್ಥಿತಿ ಬಹುತೇಕ ತಿಳಿಯಾಗಿರುವುದರಿಂದ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ಮತ್ತು ಕೆಲವು ಜಿಲ್ಲೆಗಳ ಉಪ ನಿರ್ದೇಶಕರು ಇಲಾಖೆಗೆ ಕೋರಿಕೆ ಸಲ್ಲಿಸಿದ್ದರು.

ಮಿನಿಬಸ್‌ ಬಳಸುವಂತಿಲ್ಲ: 

ಶೈಕ್ಷಣಿಕ ಪ್ರವಾಸಕ್ಕೆ ಯಾವುದೇ ಕಾರಣಕ್ಕೂ ಖಾಸಗಿ ಅಥವಾ ಮಿನಿ ಬಸ್‌ಗಳನ್ನು ಬಳಸುವಂತಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಅಥವಾ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವಾಹನದಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸ ಹೋಗಬೇಕು. ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿರುವುದರಿಂದ ನಿರ್ದಿಷ್ಟ ಕಾಲಮಿತಿ (ಡಿಸೆಂಬರ್‌ ಅಂತ್ಯ)ಯೊಳಗೆ ಮುಗಿಸಲೇಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಗೆ ಸೂಚನೆ ನೀಡಲಾಗಿದೆ.

ಒಪ್ಪಿಗೆ ಕಡ್ಡಾಯ :

Advertisement

ಪಾಲಕ, ಪೋಷಕರ ಒಪ್ಪಿಗೆ ಪತ್ರ ಇರುವ ಮಕ್ಕಳನ್ನು ಮಾತ್ರ ಕರೆದೊಯ್ಯಬೇಕು. ಕಲಿಕೆಗೆ ಪೂರಕವಾಗುವ ಸ್ಥಳಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಬೇಕು. ಶಾಲಾ ಮಾನ್ಯತೆಯನ್ನು ನವೀಕರಿಸದ ಅಥವಾ ಸರಕಾರದಿಂದ ಮಾನ್ಯತೆ ಪಡೆಯದೇ ಇರುವ ಶಾಲೆಗಳಿಗೆ ಪ್ರವಾಸಕ್ಕೆ ಅನುಮತಿ ಇಲ್ಲ.

ಶಾಲೆಯೇ ಜವಾಬ್ದಾರಿ:

ಶೈಕ್ಷಣಿಕ ಪ್ರವಾಸವನ್ನು ಶಾಲಾ ದಿನಗಳಲ್ಲಿ (ಸೋಮವಾರದಿಂದ ಶನಿವಾರ) ಕೈಗೊಂಡಲ್ಲಿ ಪಠ್ಯಕ್ರಮ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಪ್ರವಾಸದ ದಿನಗಳಿಗೆ ಬದಲಾಗಿ ಶನಿವಾರ ಪೂರ್ಣ ದಿನ ಅಥವಾ ರವಿವಾರ ತರಗತಿ ನಡೆಸಿ ಸರಿದೂಗಿಸಬೇಕು. ಪ್ರವಾಸಕ್ಕೆ ಇಲಾಖೆಯಿಂದ ಯಾವುದೇ ಸೌಲಭ್ಯ ನೀಡುವುದಿಲ್ಲ. ಪ್ರವಾಸ ಸಂದರ್ಭ ಯಾವುದೇ ಅವಘಡ ಸಂಭವಿಸಿದರೂ ಶಾಲೆಯ ಮುಖ್ಯಸ್ಥರೇ ಹೊಣೆಗಾರರಾಗಿರುತ್ತಾರೆ. ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಕಡ್ಡಾಯವಾಗಿ ಶಿಕ್ಷಕಿಯರೇ ನೋಡಿಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next