Advertisement
ಎಲ್ಲಿದೆ ಏಳೂವರೆ ಹೊಳೆ ?ಮುಂಡಾಜೆ ಗ್ರಾಮದ ಸೋಮಂತಡ್ಕದಿಂದ ದಿಡುಪೆಗೆ ಹೋಗುವ ರಸ್ತೆಯಲ್ಲಿ ಸುಮಾರು 9 ಕಿ.ಮೀ. ಸಾಗಿದಾಗ ಮಿತ್ತಬಾಗಿಲು ಗ್ರಾ.ಪಂ. ವ್ಯಾಪ್ತಿಯ ಕುಕ್ಕಾವು ಪ್ರದೇಶವಿದೆ. ಇಲ್ಲಿಂದ ಕೂಡಬೆಟ್ಟು ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಕಕ್ಕೆನೇಜಿ ಸಮೀಪ ಏಳೂವರೆ ಹೊಳೆ ಸಿಗುತ್ತದೆ. ಇಲ್ಲಿನ ನೂರಾರು ಮನೆಯವರು ಈ ಹೊಳೆ ದಾಟಿಕೊಂಡೇ ಮುಖ್ಯರಸ್ತೆಗೆ ಬರಬೇಕು. ಇಲ್ಲಿ ಸೇತುವೆ ನಿರ್ಮಾಣವಾದರೆ ಅದೆಷ್ಟೋ ವರ್ಷಗಳ ಬೇಡಿಕೆ ಈಡೇರಿದಂತಾಗುತ್ತದೆ. ಸಂಸದರು, ಶಾಸಕರು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಇಲ್ಲಿ ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಮನಸ್ಸು ಮಾತ್ರ ಇನ್ನೂ ಮಾಡಿಲ್ಲ.
ಇಲ್ಲಿನವರು ಸೇತುವೆ ಇಲ್ಲ ಎಂದು ಕೈಕಟ್ಟಿ ಕುಳಿತುಕೊಂಡಿಲ್ಲ. ಹೊಳೆ ದಾಟಲು ಸ್ವಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಪ್ರತಿ ವರ್ಷವೂ ಅಡಿಕೆ ಮರದ ಕಾಲು ಸಂಕ ನಿರ್ಮಿಸಿ ಹೊಳೆ ದಾಟುತ್ತಿದ್ದಾರೆ. ಈ ವರ್ಷವೂ ಸುಮಾರು 30ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಶ್ರಮ ದಾನದ ಮೂಲಕ ಒಂದೇ ದಿನದಲ್ಲಿ ಅಡಿಕೆ ಮರದ ಕಾಲುಸಂಕವನ್ನು ನಿರ್ಮಿಸಿಕೊಂಡಿದ್ದಾರೆ. ಈ ಮಳೆಗಾಲಕ್ಕೆ ಅದೇ ಆಸರೆ. ಮುಂದಿನ ವರ್ಷಕ್ಕೆ ಮತ್ತೆ ಬೇರೆಯೇ ಕಾಲುಸಂಕ ಹಾಕಬೇಕು ಎನ್ನುತ್ತಾರೆ ಸ್ಥಳೀಯರು.
ಮನವಿಗೆ ಬೆಲೆ ಇಲ್ಲ
ಸೇತುವೆ ಬೇಡಿಕೆಗೆ ಸಂಬಂಧಿಸಿದಂತೆ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಹಿಂದೊಮ್ಮೆ 40 ಲಕ್ಷ ರೂ. ಅಂದಾಜು ಪಟ್ಟಿಯನ್ನೂ ಸರಕಾರಕ್ಕೆ ಸಲ್ಲಿಸಲಾಗಿತ್ತು. ಈ ಹೊಳೆಗೆ ತುರ್ತಾಗಿ ಸೇತುವೆ ಅಗತ್ಯವಿದೆ. ಈಗಲೂ ಜನಪ್ರತಿನಿಧಿಗಳ, ಸರಕಾರದ ಗಮನ ಸೆಳೆಯಲಾಗುತ್ತಿದೆ ಎನ್ನುತ್ತಾರೆ ಮಿತ್ತಬಾಗಿಲು ಗ್ರಾ.ಪಂ. ಮಾಜಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೆನೇಜಿ.
Related Articles
ಕೆ.ಎಸ್. ಈಶ್ವರಪ್ಪ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭ 2012-13ರ ಸಾಲಿನಲ್ಲಿ ಆರ್.ಐ.ಡಿ.ಎಫ್. ನಬಾರ್ಡ್ ಯೋಜನೆಯಡಿ ಮಿತ್ತಬಾಗಿಲು ಗ್ರಾ.ಪಂ. ವ್ಯಾಪ್ತಿಯ ಕುಕ್ಕಾವು – ಕಕ್ಕೆನೇಜಿ – ಕೂಡಬೆಟ್ಟು ರಸ್ತೆಯ ಕಕ್ಕೆನೇಜಿಯಲ್ಲಿ ಏಳೂವರೆ ಹೊಳೆಗೆ 30 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿಗೆ ಆದೇಶವಾಗಿತ್ತು. ಆದರೆ ಕಾರಣಾಂತರಗಳಿಂದ ಅದೂ ವಾಪಸ್ಸಾಗಿತ್ತು ಎನ್ನುವ ಮಾಹಿತಿಯೂ ಇದೆ.
Advertisement
— ಗುರು ಮುಂಡಾಜೆ