Advertisement

ಸಾಮುದಾಯಿಕ ಪರೀಕ್ಷೆಗೆ ಶಾಶ್ವತ ಬ್ರೇಕ್‌?

05:58 AM Jun 18, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಸೋಂಕು ಪ್ರಕರಣಗಳ ಸಂಖ್ಯೆ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ, ಹೆಚ್ಚು ಸೋಂಕು ಪ್ರಕರಣ ದೃಢಪಡುತ್ತಿರುವ ಪ್ರದೇಶಗಳಲ್ಲಿ ಸಾಮುದಾಯಿಕ ಕೋವಿಡ್‌ 19 ಸೋಂಕು ಪರೀಕ್ಷೆಯನ್ನು  ಪಾಲಿಕೆ ಶಾಶ್ವತವಾಗಿ ನಿಲ್ಲಿಸುವ ಮುನ್ಸೂಚನೆ ಸಿಕ್ಕಿದೆ. ಪಾದರಾಯನಪುರದಲ್ಲಿ ಪ್ರಾರಂಭಿಸಲಾಗಿದ್ದ ಸಾಮುದಾಯಿಕ ಕೋವಿಡ್‌ 19 ಸೋಂಕು ಪರೀಕ್ಷೆ ನಿಲ್ಲಿಸಿ 16ದಿನ ಕಳೆದರೂ ಸಾಮುದಾಯಿಕ ಪರೀಕ್ಷೆ  ಪ್ರಾರಂಭವಾಗಿಲ್ಲ.

Advertisement

ಇನ್ನು ಮಂಗಮ್ಮನಪಾಳ್ಯ, ಶಿವಾಜಿನಗರ ಹಾಗೂ ಎಸ್‌.ಕೆ.ಗಾರ್ಡ್‌ ಸೇರಿ ಹೆಚ್ಚು ಸೋಂಕು ಪ್ರಕರಣ ದೃಢಪಡುತ್ತಿರುವ ಪ್ರದೇಶಗಳಲ್ಲಿ ಸಾಮುದಾಯಿಕ ಪರೀಕ್ಷೆಗೆ ಪಾಲಿಕೆ ಅಧಿಕಾರಿಗಳು ಸಿದ್ಧತೆ ಮಾಡಿ  ಕೊಳ್ಳುತ್ತಿದ್ದರು. ಸದ್ಯ ಈ ಭಾಗದಲ್ಲೂ ಸಾಮುದಾಯಿಕ  ಪರೀಕ್ಷೆ ಮಾಡುವ ಪ್ರಕ್ರಿಯೆಗೆ ಹಿನ್ನೆಡೆ ಉಂಟಾಗಿದೆ. ಪಾದರಾಯನಪುರ 2 ಹಂತದಲ್ಲಿ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ 214 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಇದರಲ್ಲಿ 7  ಜನರಿಗೆ ಸೋಂಕು ದೃಢಪಟ್ಟಿತ್ತು. ಇನ್ನು ಏ.26ರಿಂದ ಜೂ.1ರವರೆಗೆ ಪಾದರಾಯನಪುರ  ದಲ್ಲಿ ಒಟ್ಟು 853ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 3 ಜನರಲ್ಲಿ ಸೋಂಕು ದೃಢಪಟ್ಟಿತ್ತು. 214 ಜನ ಮತ್ತು 853 ಜನರನ್ನು  ಸಾಮುದಾಯಿಕ ಪರೀಕ್ಷೆಗೆ ಒಳಪಟ್ಟಿದ್ದು, ಒಟ್ಟು 1067 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಇವರಲ್ಲಿ ಒಟ್ಟು 10 ಮಂದಿಗೆ ಸೋಂಕು ದೃಢಪಟ್ಟಿತ್ತು. ಸೋಂಕು ದೃಢಪಟ್ಟವರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ 12 ಮಂದಿಗೆ ಸೋಂಕು ದೃಢಪಟ್ಟಿದೆ.

ಮುಂದುವರಿಸುವ ಸಾಧ್ಯತೆ ಶೇ.90ರಷ್ಟು ಇಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಮುದಾಯಿಕ ಸೋಂಕು ಪರೀಕ್ಷೆ ಮತ್ತೆ ಪ್ರಾರಂಭಿಸುವ ಸಾಧ್ಯತೆ ತೀರಾ ಕಡಿಮೆ. ಕೋವಿಡ್‌ 19 ಸೋಂಕು ಪರೀಕ್ಷೆ ವರದಿ 4-5 ದಿನವಾದ ನಂತರ ಬರುತ್ತಿತ್ತು.  ಇನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸೋಂಕು ಶಂಕಿತರ ಗಂಟಲು ದ್ರವ ಮಾದರಿ ಬೆಂಗಳೂರಿನ ಲ್ಯಾಬ್‌ಗಳಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಇದೆಲ್ಲದರ ಪರಿಣಾಮ ನಗರದಲ್ಲಿ ಸೋಂಕು ಪರೀಕ್ಷಾ ವರದಿ ತಡವಾಗುತ್ತಿದೆ. ಗಂಟಲು ದ್ರವವನ್ನು ಹೆಚ್ಚು ದಿನ ಸಂಗ್ರಹ ಮಾಡಿಕೊಳ್ಳುವುದೂ ಸವಾಲಾಗಿದೆ.

ಹೀಗಾಗಿ ಪುನಃ ಸಾಮುದಾಯಿಕ ಪರೀಕ್ಷೆ ಪ್ರಾರಂಭವಾಗುವ ಸಾಧ್ಯತೆ ಇಲ್ಲ ಎಂದು ಹೆಸರು ಹೇಳಲಿಚ್ಚಿಸದ ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದಿಂದ ಜನ ಬರುತ್ತಿದ್ದಾರೆ. ಅಲ್ಲದೆ, ಕೋವಿಡ್‌ 19 ಸೋಂಕು ದೃಢಪಟ್ಟವರ ಸಂಪರ್ಕಿತರು, ಬಿಬಿಎಂಪಿ ಮನೆ- ಮನೆ ಸರ್ವೇಯಲ್ಲಿ ಕೋವಿಡ್‌ 19 ಲಕ್ಷಣ ಕಾಣಿಸಿಕೊಂಡವರು ಸೇರಿ ನಿತ್ಯ 2  ಸಾವಿರಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

Advertisement

ಸಕ್ರಿಯ ಪ್ರಕರಣ ಹೆಚ್ಚಿದೆ: ಸಾಮುದಾಯಿಕ ಸೋಂಕು ಪರೀಕ್ಷೆ ಉದ್ದೇಶಿಸಲಾಗಿದ್ದ ಪ್ರದೇಶಗಳಲ್ಲಿ ಕೋವಿಡ್‌ 19 ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನು ಕಡಿಮೆಯಾಗಿಲ್ಲ. ಪಾದರಾಯನಪುರ 70, ಎಸ್‌.ಕೆ.ಗಾರ್ಡ್‌ನಲ್ಲಿ 31, ಮಂಗಮ್ಮನಪಾಳ್ಯದಲ್ಲಿ 15 (ಜನ)ಸಕ್ರಿಯ ಕೋವಿಡ್‌ 19 ಪ್ರಕರಣ (ಜೂ.16ರವರೆಗೆ) ಇವೆ. ಈ ಮಧ್ಯೆ ಸಾಮುದಾಯಿಕ ಸೋಂಕು ಪರೀಕ್ಷೆ ನಿಲ್ಲಿಸಿರುವುದು ಆತಂಕಕ್ಕೆ ಕಾರಣವಾಗಿದೆ.

14 ಸಾವಿರ ಜನರಲ್ಲಿ ಮೂರೇ ಮಂದಿಗೆ ಸೋಂಕು ದೃಢ!: ನಗರದಲ್ಲಿನ ಜ್ವರ ತಪಾಸಣಾ ಕೇಂದ್ರಗಳಲ್ಲಿ (ಜೂ.16) ವರೆಗೆ ಒಟ್ಟು 14,094 ಜನರಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ಪ್ರತಿ ದಿನ 200,300 ಜನರಿಗೆ ಗಂಟಲು  ದ್ರವ ಪರೀಕ್ಷೆ ಮಾಡಲಾಗಿದೆ. ಆದರೆ, ಇಷ್ಟು ಜನರಲ್ಲಿ ಮೂವರಿಗೆ ಮಾತ್ರ ಸೋಂಕು ದೃಢಪಟ್ಟಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಈ ಅಂಕಿ- ಅಂಶ ಸಹಜವಾಗಿಯೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಗರದ ಹಲವು  ಭಾಗದಲ್ಲಿ ಕೋವಿಡ್‌ 19 ಪ್ರಕರಣ ದೃಢಪಡುತ್ತಿವೆ. ಅಲ್ಲದೆ, ಪ್ರಯಾಣದ ಇತಿಹಾಸವಿಲ್ಲದ, ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿ ಇಲ್ಲದವರಲ್ಲೂ ಸೋಂಕು ದೃಢಪಡುತ್ತಿದೆ. ಇಂತಹ ಸಂದರ್ಭದಲ್ಲಿ 14 ಸಾವಿರ ಜನರಲ್ಲಿ  ಒಂದಕ್ಕಿಗಿಂತ ಹೆಚ್ಚು ಪ್ರಕರಣ ವರದಿಯಾಗದೆ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಗರದಲ್ಲಿ ಸಾಮುದಾಯಿಕವಾಗಿ ಕೋವಿಡ್‌ 19 ಕಾಣಿಸಿಕೊಂಡಿಲ್ಲ ಎಂದು ಬಿಂಬಿಸಲು ಬಿಬಿಎಂಪಿ ಮುಂದಾಗಿರುವ ಬಗ್ಗೆಯೂ ಅನುಮಾನ ಮೂಡಿದೆ.

ಇನ್ನೆರಡು ದಿನದಲ್ಲಿ ರ್‍ಯಾಂಡಮ್‌ ಪರೀಕ್ಷೆ: ನಗರದಲ್ಲಿ ಈ ಹಿಂದೆ ನಡೆಸುತ್ತಿದ್ದ ರ್‍ಯಾಂಡಮ್‌ ಸೋಂಕು ಪರೀಕ್ಷೆಯನ್ನು ಪಾಲಿಕೆ ತಾತ್ಕಾಲಿಕವಾಗಿ ನಿಲ್ಲಿಸಿದೆ. ರ್‍ಯಾಂಡಮ್‌ ಪರೀಕ್ಷೆಯನ್ನು ನಗರದ ಆಯ್ದ ಪ್ರದೇಶಗಳಲ್ಲಿ, ಕೊಳಗೇರಿ ಹಾಗೂ  ಹೈ-ರಿಸ್ಕ್ ಇರುವ ಪ್ರದೇಶದಲ್ಲಿ ಪ್ರಾರಂಭಿಸಲು ಸರ್ಕಾರ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಸಿದಟಛಿತೆ ಮಾಡಿಕೊಳ್ಳುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ನಗರದ ವಿವಿಧೆಡೆ ರ್‍ಯಾಂಡಮ್‌ ಪರೀಕ್ಷೆ ಪ್ರಾರಂಭಿಸಲಾಗುವುದು ಎಂದು ಬಿಬಿಎಂಪಿ  ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದಲ್ಲಿ ಸೋಂಕಿನ ಎಲ್ಲಾ ಪ್ರಕರಣಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಜ್ವರ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆಗೆ ಒಳಪಟ್ಟವರ ವಿವರವನ್ನೂ ನೀಡಲಾಗುತ್ತಿದೆ. ಜ್ವರ ತಪಾಸಣಾ ಕೇಂದ್ರ ದಲ್ಲಿ ಹೆಚ್ಚು ಜನರಿಗೆ ಸೋಂಕು  ದೃಢಪಡದಿರುವುದರ ಆಧಾರದ ಮೇಲೆ ನಗರದಲ್ಲಿ ಸಾಮುದಾಯಕ್ಕೆ ಸೋಂಕು ಹಬ್ಬಿಲ್ಲ ಎನ್ನುವುದು ಸ್ಪಷ್ಟವಾಗಿದೆ.
-ಡಾ.ವಿಜಯೇಂದ್ರ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next