Advertisement

ಅಖಿಲ್‌ರಾಜ್‌ ಬದುಕಲ್ಲಿ ಸುಗಂಧ ಬೀರಿದ ಸೋಪ್‌

10:32 AM Jun 10, 2020 | mahesh |

ಏನಾದರೂ ಸಾಧಿಸುವ ಛಲ, ಶಿಕ್ಷಣ ಹೊಂದಬೇಕೆಂಬ ದೃಢ ಸಂಕಲ್ಪ ಹೊಂದಿದ್ದರೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದು ಅನೇಕರ ವಿಷಯದಲ್ಲಿ ಸಾಬೀತಾಗಿದೆ. ಅದಕ್ಕೆ ಮತ್ತೂಂದು ಉದಾಹರಣೆ ಅಖೀಲ್‌ರಾಜ್‌. ಕೇರಳದ ತಿರುವನಂತಪುರಂನ ವಲಿಯತುರ ಫಿಶರಿಸ್‌ ಶಾಲೆಯ ಪ್ಲಸ್‌ ಟು ವಿದ್ಯಾರ್ಥಿ ಅಖಿಲ್‌ರಾಜ್‌ ಒಂದೂವರೆ ವರ್ಷಗಳಿಂದ ಸ್ವತಃ ಸೋಪು ತಯಾರಿಸಿ ಮಾರಾಟ ಮಾಡುತ್ತ ತನ್ನ ಶೈಕ್ಷಣಿಕ ಖರ್ಚುಗಳನ್ನು ತಾನೇ ನಿಭಾಯಿಸಿ ಸ್ವಾವಲಂಬಿಯಾಗಿದ್ದಾನೆ. ಮೊನ್ನೆ ತಾನೇ ಮುಗಿದ ಪ್ಲಸ್‌ ಟು ಕೊನೆಯ ಪರೀಕ್ಷೆ ದಿನ ಬ್ಯಾಗ್‌ ತುಂಬ ತಾನೇ ತಯಾರಿಸಿದ ಸೋಪು ತೆಗೆದುಕೊಂಡ ಹೋಗಿದ್ದ ಅಖೀಲ್‌ ತನ್ನ ಸಹಪಾಠಿಗಳಿಗೆಲ್ಲ ಉಡುಗೊರೆಯಾಗಿ ನೀಡಿದ್ದ.

Advertisement

ಬಡತನದ ಬೇಗೆ
ಒಟ್ಟಶೇಖರಮಂಗಲ ತುಡಲಿಯಿಲ್‌ನ ಕೂಲಿ ಕಾರ್ಮಿಕ ಸಾಧುರಾಜ್‌ ಮತ್ತು ಕ್ರಿಸ್ಟಲ್‌ ಬೀನಾ ದಂಪತಿಯ ಹಿರಿಯ ಪುತ್ರ ಅಖೀಲ್‌ ರಾಜ್‌ಗೆ ಒಂದೂವರೆ ವರ್ಷಗಳ ಹಿಂದೆಯೇ ಸೋಪಿನ ಮಹತ್ವ ಅರಿವಾಗಿತ್ತು. ಶೀಟ್‌ ಹೊದೆಸಿದ, ಏಕೈಕ ಕೋಣೆ ಹೊಂದಿರುವ ತನ್ನ ಪುಟ್ಟ ಮನೆಯನ್ನೇ ಸೋಪ್‌ ಕಾರ್ಖಾನೆಯಾಗಿಸಿಕೊಂಡಿದ್ದ.

ಕೈ ಹಿಡಿದ ವೃತ್ತಿ ಪರಿಚಯ ತರಗತಿ
ಶಾಲೆಯ ವೃತ್ತಿ ಪರಿಚಯ ತರಗತಿ ಅಖೀಲ್‌ರಾಜ್‌ನ ಈ ಆಲೋಚನೆಗೆ ಕಾರಣವಾದ ಅಂಶ. ತರಗತಿಯಲ್ಲಿ ಸೋಪು ತಯಾರಿಸುವುದನ್ನು ಕಲಿತ ಆತ ಅದನ್ಯಾಕೆ ಮನೆಯಲ್ಲೂ ಪ್ರಯತ್ನಿಸಬಾರದು ಎಂದುಕೊಂಡು ಕೆಲಸ ಶುರು ಮಾಡೇ ಬಿಟ್ಟ. ಹೀಗೆ ಸೋಪಿನ ಸುಗಂಧ ಅವನ ಜೀವನದಲ್ಲೂ ಬೀರತೊಡಗಿತು.

ಪರಿಚಯಸ್ಥರಿಗೆ ಮಾರಾಟ
ಆರಂಭದಲ್ಲಿ ಅಖೀಲ್‌ ರಜಾ ಅವಧಿ ಮತ್ತು ಶಾಲೆಗೆ ತೆರಳುವಾಗ ಸಿಗುವ ಪರಿಚಯಸ್ಥರಿಗೆ, ಶಿಕ್ಷಕರಿಗೆ ಸೋಪು ಮಾರಾಟ ಮಾಡ ತೊಡಗಿದ. ಪ್ರತಿ ಸೋಪಿಗೆ 30 ರೂ. ಬೆಲೆ. ಆರಂಭದಲ್ಲಿ ಗಳಿಸಿದ ಹಣ ಅಮ್ಮನ ಕೈಯಲ್ಲಿಟ್ಟಾಗ ಆಕೆಯ ಕಣ್ಣಲ್ಲಿ ಆನಂದ ಭಾಷ್ಪ ನೋಡಿ ಅಖೀಲ್‌ ಸೋಪು ವ್ಯಾಪಾರ ಮುಂದುವರಿಸಲು ತೀರ್ಮಾನಿಸಿದ. ಒಂದು ಮಟ್ಟಿಗೆ ವ್ಯಾಪಾರ ಚೆನ್ನಾಗಿದೆ ಎನ್ನುವಾಗಲೇ ಕೊರೊನಾಘಾತ ಎದುರಾಗಿತ್ತು. ಲಾಕ್‌ಡೌನ್‌ ಘೋಷಣೆಯಾಗುವುದರೊಂದಿಗೆ ಕಚ್ಚಾ ಸಾಮಗ್ರಿ ಪೂರೈಕೆ ನಿಂತಿತು. ಸೋಪು ತಯಾರಿಕೆಗೂ ಕಡಿವಾಣ ಬಿತ್ತು. ರಜೆ ಅವಧಿಯಲ್ಲಿ ಹೆಚ್ಚು ಸೋಪು ಉತ್ಪಾದಿಸಿ ಉನ್ನತ ಶಿಕ್ಷಣಕ್ಕೆ ಹಣ ಕೂಡಿಡಬೇಕೆಂಬ ಅಖೀಲ್‌ನ ಹಂಬಲಕ್ಕೆ ಈ ಮೂಲಕ ತಾತ್ಕಾಲಿಕ ವಿರಾಮ ಸಿಕ್ಕಿತು. ಆ ಬಗ್ಗೆ ಮಾತನಾಡುವ ಅಖೀಲ್‌, ಲಾಕ್‌ಡೌನ್‌ನಿಂದಾಗಿ ಸೋಪು ತಯಾರಿಕೆಗೆ ಹೊಡೆತ ಬಿದ್ದದ್ದು ಹೌದು. ಆದರೆ ಇಲ್ಲಿಗೆ ಕೈ ಬಿಡುವುದಿಲ್ಲ. ಅದನ್ನು ಇನ್ನಷ್ಟು ವಿಸ್ತರಿಸಬೇಕೆಂಬ ಗುರಿ ಹೊಂದಿದ್ದೇನೆ ಎಂದು ಆಶಾವಾದ ವ್ಯಕ್ತ ಪಡಿಸುತ್ತಾನೆ.

ಕಷ್ಟಗಳ ನಡುವೆಯೂ ಛಲ ಬಿಡದ ಅಖೀಲ್‌ರಾಜ್‌ ಪ್ರತಿಭಾವಂತ ವಿದ್ಯಾರ್ಥಿಯೂ ಹೌದು. ಆತ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದಿದ್ದ ಎನ್ನುತ್ತಾರೆ ಶಿಕ್ಷಕರು. ವಿಜ್ಞಾನ ವಿದ್ಯಾರ್ಥಿಯಾಗಿರುವ ಅಖೀಲ್‌ ಉನ್ನತ ವಿದ್ಯಾಭ್ಯಾಸದ ಕನಸು ಹೊತ್ತಿದ್ದಾನೆ.

Advertisement

-ರಮೇಶ್‌ ಬಿ., ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next