Advertisement
ಮೂಡಬಿದಿರೆ-ಶಿರ್ತಾಡಿ ಮಾರ್ಗ ವಿಸ್ತರಣೆ, ಮೂಲ್ಕಿ ವಿಜಯಾ ಕಾಲೇಜು ಏಳಿಂಜೆ ವರೆಗೆ ಕಾಂಕ್ರೀಟ್ ರಸ್ತೆ, ಮಟ್ಟುವರೆಗೆ ಡಾಮರು ರಸ್ತೆ ಅಭಿವೃದ್ಧಿ, ಅಂಗರಗುಡ್ಡೆ-ಶಿಮಂತೂರು -ಎಳತ್ತೂರು ರಸ್ತೆ (4.5 ಕೋ.ರೂ.), ಸಸಿಹಿತ್ಲು ಸೇತುವೆ (7ಕೋ.) ಹೀಗೆ ಹಲವೆಡೆ ದೊಡ್ಡ ಮೊತ್ತದ ಕಾಮಗಾರಿಗಳು ನಡೆದಿವೆ. ಬೆಳುವಾಯಿ-ಅಳಿಯೂರು ರಸ್ತೆ ಅಭಿವೃದ್ಧಿ, ಎಂಆರ್‌ಪಿಎಲ್ ಮಂಗಳಪೇಟೆ-ಬಜಪೆ ರಸ್ತೆ (12 ಕೋ.), ಶಿರ್ತಾಡಿ ಹೊಸ್ಮಾರು ರಸ್ತೆ (9 ಕೋ.), ಬೆಳುವಾಯಿ – ಅಳಿಯೂರು ರಸ್ತೆ (5.5 ಕೋ.), ಪಡು ಮಾರ್ನಾಡು- ತಂಡ್ರಕೆರೆ ರಸ್ತೆ (3.5 ಕೋ.) ಪೂರ್ಣವಾಗುತ್ತಿದೆ. ಸಸಿಹಿತ್ಲಿನಲ್ಲಿ 4 ಕೋ.ರೂ. ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಿಸಬೇಕಾದರೆ ತಾನು ಸಾಕಷ್ಟು ಶ್ರಮ ಪಟ್ಟಿರುವುದಾಗಿ ಅವರು ಹೇಳುತ್ತಾರೆ.
Related Articles
Advertisement
ಕ್ರೀಡೆ: ಸಸಿಹಿತ್ಲು-ಮುಂಡದಲ್ಲಿ ವಿಶ್ವಮಟ್ಟದ ಸರ್ಫಿಂಗ್ ಕೂಟಕ್ಕೆ ಅನುಕೂಲ ಕಲ್ಪಿಸುವ ಅಭಿವೃದ್ಧಿ ನಡೆದಿರುವುದು ಒಂದು ದಾಖಲೆ ವಿಷಯ. ಇದೇ ರೀತಿ ಮೂಡಬಿದಿರೆಯ ಸ್ವರಾಜ್ಯಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಸ್ವಿಮ್ಮಿಂಗ್ ಪೂಲ್, ಜಿಮ್, ಕಬಡ್ಡಿ ಮ್ಯಾಟ್, ಗರಡಿಮನೆ ಹೀಗೆ ಹಲವಾರು ಸೌಕರ್ಯಗಳನ್ನು ಒದಗಿಸಲಾಗಿದೆ. ಜ್ಯೋತಿ ನಗರದಲ್ಲಿ ಸ್ಕೇಟಿಂಗ್ ಯಾರ್ಡ್ ನಿರ್ಮಿಸಲಾಗಿದೆ. ಸಾಫ್ಟ್ ಮತ್ತು ಹಾರ್ಡ್ ಬಾಲ್ ಕ್ರಿಕೆಟ್‌ಗಳಿಗೆ ಪ್ರತ್ಯೇಕ ಪಿಚ್‌ಗಳು ಸ್ವರಾಜ್ಯ ಮೈದಾನದಲ್ಲೇ ಇವೆ. ವಿಶ್ವಮಟ್ಟದ ಕ್ರೀಡಾಳುಗಳ ತರಬೇತಿ ಇನ್ನೂ ಈಗಷ್ಟೇ ತಾಲೂಕಾಗುತ್ತಿರುವ ಮೂಡಬಿದಿರೆಯಲ್ಲಿ ನಡೆಯುತ್ತಿರುವುದು ತನಗೆ ಹೆಮ್ಮೆ, ಸಾರ್ಥಕ್ಯ ಮೂಡಿಸಿದೆ ಎನ್ನುತ್ತಾರೆ ಅಭಯಚಂದ್ರ.
ಯಾತ್ರಿ ನಿವಾಸ್: ಕಟೀಲು, ಮೂಡಬಿದಿರೆ, ಬಪ್ಪನಾಡು ಇಲ್ಲೆಲ್ಲ ಯಾತ್ರಿ ನಿವಾಸ್ ನಿರ್ಮಿಸಲಾಗಿದೆ. ಮೂಡಬಿದಿರೆ ಮೆಸ್ಕಾಂ ನೂತನ ಕಟ್ಟಡ ಭಾಗ್ಯ ಹೊಂದಿದೆ.
ರಿಂಗ್‌ರೋಡ್: ಬೈಪಾಸ್ ಇನ್ನೂ ಆಗಿಲ್ಲದ ಸ್ಥಿತಿಯಲ್ಲಿ ಸ್ವರಾಜ್ಯ ಮೈದಾನದ ಬದಿಯಿಂದ ಹಾದು ಕಡಲಕೆರೆ ಕೈಗಾರಿಕಾ ಪ್ರಾಂಗಣ-ಅಲಂಗಾರ್‌ನತ್ತ ಸಾಗುವ ರಿಂಗ್ ರೋಡ್ ನಿರ್ಮಿಸಿದ್ದು ಸಾಧನೆ ಎಂಬ ಸಂತೃಪ್ತಿ ಅವರದು.
ಗ್ರಾಮವಿಕಾಸ ಯೋಜನೆ: ಬೇರೆಡೆ ಗ್ರಾಮ ವಿಕಾಸ ಯೋಜನೆಯಡಿ 4 ಕಾಮಗಾರಿ ಮಾತ್ರ ಸಾಧ್ಯವಾಗಿದ್ದರೆ ಮೂಡಬಿದಿರೆ ಕ್ಷೇತ್ರದಲ್ಲಿ ಆರು ಕಡೆ ನಡೆದಿವೆ.
ಆರೋಗ್ಯ: ಮೂಡುಶೆಡ್ಡೆ ಟಿಬಿ ಆಸ್ಪತ್ರೆಯನ್ನು 1 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಬಜಪೆಯಲ್ಲೂ 1 ಕೋ. ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಅಭಿವೃದ್ಧಿ ಪಡಿಸಲಾಗುತ್ತಿದೆ ಎನ್ನುತ್ತಾರೆ ಅವರು.
ನೆನೆಗುದಿಗೆ ಬಿದ್ದಿರುವ, ಈಗ 80 ಕೋ.ರೂ. ವೆಚ್ಚದ ಮೂಡಬಿದಿರೆ ಒಳಚರಂಡಿ ಯೋಜನೆಗೆ ಮುಖ್ಯಮಂತ್ರಿ ವಾಗ್ಧಾನ ಮಾಡಿದ್ದಾರೆ. ಹಿಂ.ವರ್ಗಗಳ ಸಮುದಾಯ ಭವನಗಳಿಗೆ 2.5 ಕೋ.ರೂ., ಅಲ್ಪಸಂಖ್ಯಾಕರ ಸಮುದಾಯ ಭವನಗಳಿಗೆ 2 ಕೋ. ರೂ. ಒದಗಿಸಲಾಗಿದೆ. ಮೂಲ್ಕಿಯಲ್ಲಿ ಬಸ್ ನಿಲ್ದಾಣಕ್ಕಾಗಿ 3 ಕೋ.ರೂ. ಅನುದಾನ ಬಂದಿದೆ. ಎಲ್ಲ ಆವಶ್ಯಕ ಕಚೇರಿಗಳು ಮೂಡಬಿದಿರೆಯಲ್ಲಿದ್ದು ಇದೀಗ ಗಾಂಧಿನಗರದಲ್ಲಿ ಕಾನೂನು ಮತ್ತು ಭೂಮಾಪನ ಶಾಸ್ತ್ರ ಇಲಾಖಾ ನೂತನ ಕಚೇರಿ ಕಟ್ಟಡ ಸ್ಥಾಪನೆಯಾಗಿದೆ. ಕಡಲಕೆರೆ ಬಳಿ ಪವರ್ ಸ್ಟೇಶನ್‌ನ ಸಾಮರ್ಥ್ಯವನ್ನು ವೃದ್ಧಿಸಲು 16 ಕೋಟಿ ರೂ. ವಿನಿಯೋಗಿಸಲಾಗುವುದು.
ಮುಂದಿನ ದಿನಗಳಲ್ಲಿಶಾಸಕನ ಯೋಜನೆಗಳು ಕೇವಲ ಐದು ವರ್ಷಗಳ ಒಂದು ಅವಧಿಗೆ ಮುಗಿದು ಹೋಗುವಂಥದ್ದಾಗಬಾರದು. ಅದು ಕನಿಷ್ಠ ಮುಂದಿನ 10-20 ವರ್ಷಗಳ ಮುನ್ನೋಟವನ್ನು ಹೊಂದಿರಬೇಕು ಎಂಬ ದೃಷ್ಟಿಕೋನ ಹೊಂದಿದ್ದಾರೆ. ಈ ದಿಸೆಯಲ್ಲಿ ಹೊಸಂಗಡಿ ಬಳಿ ಡ್ಯಾಂ ನಿರ್ಮಿಸಿ ಮೂಡಬಿದಿರೆಗೆ ಇನ್ನಷ್ಟು ನೀರನ್ನು ಒದಗಿಸಲು ಸಾಧ್ಯ. ಬಹುಗ್ರಾಮ ಯೋಜನೆಯಡಿ ಪುಚ್ಚಮೊಗರಿನಲ್ಲಿ ಡ್ಯಾಂ ನಿರ್ಮಿಸಿ ಹೊಸಬೆಟ್ಟು, ಇರುವೈಲು, ತೆಂಕಮಿಜಾರು ಗ್ರಾಮಗಳಿಗೆ ನೀರನ್ನು ಒದಗಿಸುವ ಯೋಜನೆ ಪೂರ್ಣವಾದಾಗ ಈ ಎಲ್ಲ ಪ್ರದೇಶಗಳು ನೀರನ್ನು ಪಡೆಯಲು ಸಾಧ್ಯವಾಗುತ್ತದೆ. ಶಿರ್ತಾಡಿ, ನೆಲ್ಲಿಕಾರು, ಅಳಿಯೂರು ಪ್ರದೇಶದಲ್ಲಿ ವೆಂಟೆಡ್ ಡ್ಯಾಂ ನಿರ್ಮಿಸಿ ಆ ಭಾಗದ ಜನತೆಗೆ ನೀರು ಒದಗಿಸಲು ಯೋಜನೆ ಹಾಕಿಕೊಳ್ಳಬೇಕಾಗಿದೆ. ಮೂಡಬಿದಿರೆ ತಾಲೂಕಾದ ಬಳಿಕ ಈಗಿರುವ 30 ಹಾಸುಗೆಗಳ ಸರಕಾರಿ ಆಸ್ಪತ್ರೆ 100 ಬೆಡ್‌ಗೇರಲು ಅವಕಾಶವಿದೆ. ಮೂಡಬಿದಿರೆ ಪೇಟೆಯಲ್ಲಿ ವಾಹನ ದಟ್ಟಣೆ ಏರುತ್ತಿರುವುದನ್ನು ನಿವಾರಿಸಲು ಆಳ್ವಾಸ್ ಕಾಲೇಜಿನಿಂದ ಪೇಟೆಯವರೆಗೆ 4 ಲೇನ್ ರಸ್ತೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕಿನ್ನಿಗೋಳಿ, ಬಜಪೆ ನಗರ ಪಂಚಾಯತ್ ಮಟ್ಟಕ್ಕೇರುವ ಎಲ್ಲ ಅರ್ಹತೆ ಗಳಿಸಿವೆ. ಇನ್ನುಮುಂದೆ ಮನೆ ಇಲ್ಲದವರಿಗೆ ನಿವೇಶನ ಹಂಚುವ, ಮನೆ ಕಟ್ಟಲು ನೆರವು ನೀಡುವ ಬದಲು ಫ್ಲ್ಯಾಟ್ ಸಿಸ್ಟಂ ತರಲು ಯೋಜಿಸಲಾಗುತ್ತಿದೆ. ಅಳಿಯೂರಿನಲ್ಲಿ, ನೀರ್ಕೆರೆಯಲ್ಲಿ ಸರಕಾರಿ ಪ.ಪೂ. ಕಾಲೇಜು, ಮಿಜಾರಿನಲ್ಲಿ ಸರಕಾರಿ ಪ್ರ.ದ. ಕಾಲೇಜು ಸ್ಥಾಪನೆಯಾಗಬೇಕಾಗಿದೆ. ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆಯಾಗಬೇಕು. ಪ್ರತಿ ಮನೆಯಲ್ಲೂ ಶೌಚಾಲಯ ಇರಬೇಕು. ಪ್ರತಿಯೊಂದು ಮಗುವೂ ಶಾಲೆಗೆ ಹೋಗಬೇಕು-ಇದು ಅಭಯಚಂದ್ರ ಅವರ ಆಶಯ. ಅಭಯಚಂದ್ರ ಹೇಳುತ್ತಾರೆ
ಕ್ಷೇತ್ರದ ಬೇಡಿಕೆಗಳು ಇನ್ನೂ ಇವೆ, ಸಹಜ. ಸಾಕಷ್ಟು ಅನುದಾನ ತರಿಸಲು ಪ್ರಯತ್ನ ಪಟ್ಟಿದ್ದೇನೆ. ಹಾಗೆ ತರಿಸಿದ್ದನ್ನು ಸರಿಯಾಗಿ ಉಪಯೋಗ ಮಾಡಿಸುವುದೂ ಮುಖ್ಯ. ಜನರ ತೆರಿಗೆಯ ಹಣ ಸುಮ್ಮನೇ ಪೋಲಾಗಬಾರದು. ಈಗೀಗ ಕೆಲವರು ಬೇಡಿಕೆಗಳನ್ನು ಇರಿಸಿಕೊಂಡು ಬರುತ್ತಾರೆ. ಅದನ್ನೆಲ್ಲ ಮಾಡಿಸಿಕೊಡುತ್ತೇನೆ ಎಂದು ನಂಬಿಸುವ ಮಾತು ಆಡುವುದು ಸರಿಯಲ್ಲ. ಹಾಗೆ ನಂಬಿಸುವುದೂ ಇಲ್ಲ. ಈ ಕಳೆದ 25 ವರ್ಷಗಳಲ್ಲಿ ನಿರಂತರವಾಗಿ ಜನರ ಆಶೋತ್ತರಗಳಿಗೆ ತಕ್ಕಂತೆ ನಡೆದುಕೊಂಡಿದ್ದೇನೆ ಎಂಬ ಸಂತೃಪ್ತಿ ನನಗಿದೆ. ಧನಂಜಯ ಮೂಡಬಿದಿರೆ