ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮಾ. 18ರಂದು ಶ್ರೀನಿವಾಸ ಸಾಸ್ತಾನ ನೇತೃತ್ವದ ಕರ್ನಾಟಕ ಕಲಾ ದರ್ಶಿನಿ ಬೆಂಗಳೂರು ಇವರು ಸಾಲಿಗ್ರಾಮದ ಡಾ| ಕೆ. ಶಿವರಾಮ ಕಾರಂತ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಪ್ರದರ್ಶಿಸಿದ ನಳ ದಮಯಂತಿ ಯಕ್ಷಗಾನ ಬ್ಯಾಲೆಯು ಅಭಿನಯ ಪ್ರೌಢಿಮೆಯೊಂದಿಗೆ ಇಂಪಾದ ಹಾಡುಗಾರಿಕೆ ಮತ್ತು ಪೂರಕ ಸಂಗೀತದೊಂದಿಗೆ ಮುದ ನೀಡಿತು. ಡಾ| ಶಿವರಾಮ ಕಾರಂತರು ನಿರ್ದೇಶಿಸಿದ್ದ ನಳ ದಮಯಂತಿ ಕಥಾಭಾಗದ ಯಕ್ಷಗಾನದ ಬ್ಯಾಲೆಯನ್ನು ಕಿಂಚಿತ್ತೂ ಬದಲಾವಣೆ ಮಾಡದೆ ಮರು ನಿರ್ದೇಶಿಸಿ ಪ್ರದರ್ಶನ ನೀಡಲಾಗಿದೆ. ಪುರಾಣದಲ್ಲಿ ಇರುವ ಕಥೆಗೂ ಇಲ್ಲಿ ತೋರಿಸಲಾದ ಕಥೆಗೂ ತುಂಬಾ ವ್ಯತ್ಯಾಸ ಇದೆಯಾದರೂ, ಕಲಾವಿದರ ಕಲಾ ಪ್ರೌಢಿಮೆ ಶ್ಲಾಘನೀಯವಾದುದು.
ವಿ| ಸುಧೀರ್ ರಾಜ್ ಕೊಡವೂರು ಅವರು ಶಿವರಾಮ ಕಾರಂತರ ಜತೆಗಿದ್ದುಕೊಂಡೇ ಈ ಬ್ಯಾಲೆಯನ್ನು ಆ ಕಾಲದಲ್ಲಿ ಸಾಕಷ್ಟು ಪ್ರದರ್ಶಿಸಿದ್ದು, ಈಗ ಅವರೇ ಇದನ್ನು ಮರುನಿರ್ದೇಶಿಸಿದ್ದಾರೆ. ಶಿವರಾಮ ಕಾರಂತರ ತಂಡದಲ್ಲಿ ಮೃದಂಗವಾದಕರಾಗಿದ್ದ ವಿ| ಅನಂತ ಪದ್ಮನಾಭ ಪಾಠಕ್ ಅವರು ಈಗಿನ ಹೊಸ ತಂಡದಲ್ಲೂ ಮೃದಂಗವಾನ ಮಾಡಿದ್ದಾರೆ. ಉಳಿದಂತೆ ಭಾಗವತರಾಗಿ ಸುಬ್ರಾಯ ಹೆಬ್ಟಾರ್, ಯು. ವಿಶ್ವನಾಥ ಶೆಟ್ಟಿ, ಚೆಂಡೆಯಲ್ಲಿ ಶ್ರೀರಾಮ ಬೈರಿ ಮತ್ತು ಅಜಿತ್‌ಕುಮಾರ್, ವಯೊಲಿನ್‌ನಲ್ಲಿ ರವಿಕುಮಾರ್ ಮೈಸೂರು, ಸ್ಯಾಕ್ಸೋಫೋನ್‌ನಲ್ಲಿ ಹರಿದಾಸ್ ಡೋಗ್ರಾ ಮತ್ತು ಕೃಷ್ಣರಾಜ್ ಉಳಿಯಾರು ಅವರು ಈ ತಂಡದ ಹಿಮ್ಮೇಳದ ಮುಕುಟಮಣಿಗಳು. ಕಲಾವಿದರಾಗಿ ಶ್ರೀನಿವಾಸ ಸಾಸ್ತಾನ, ಶ್ರೀಧರ ಕಾಂಚನ್, ಮನೋಜ್ ಪಿ.ಎಂ. ಭಟ್, ರಮೇಶ್ ಅಡುಕಟ್ಟೆ, ಉಮೇಶ್ ಪೂಜಾರಿ, ಪ್ರತೀಶ್ ಬ್ರಹ್ಮಾವರ, ಡಾ| ರಾಧಾಕೃಷ್ಣ ಉರಾಳ, ಮುಗÌ ಗಣೇಶ್ ನಾೖಕ್, ಕೃಷ್ಣಮೂರ್ತಿ ಉರಾಳ, ಗೌತಮ್ ಸಾಸ್ತಾನ, ಬಸವ ಮರಕಾಲ, ಸತೀಶ್ ಉಪಾಧ್ಯಾಯ ತಮ್ಮ ಅಭಿನಯ ಪ್ರೌಢಿಮೆಯನ್ನು ಪ್ರದರ್ಶಿಸಿದ್ದು, ತಾಂತ್ರಿಕ ಸಹಾಯಕರಾಗಿ ಗೌತಮ್ ಸಾಸ್ತಾನ ಸಹಕರಿಸಿದ್ದಾರೆ.
ಬ್ಯಾಲೆಯಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆದ ಪಾತ್ರವೆಂದರೆ ಶನಿಯದ್ದು, ಆತನ ವೇಷಭೂಷಣದಿಂದ ಹಿಡಿದು ಅಭಿನಯದ ಪ್ರತಿಯೊಂದು ಹೆಜ್ಜೆಯೂ, ಕ್ಷಣವೂ ಮನಗೆದ್ದಿತು. ಪ್ರೇಕ್ಷಕ ವೃಂದದಿಂದ ಹೆಚ್ಚು ಶ್ಲಾಘನೆಗೆ ಒಳಗಾದ ಈ ಪಾತ್ರ ಮತ್ತೂ ಮತ್ತೂ ನೋಡಬೇಕೆನಿಸಿತು. ಯಕ್ಷಗಾನದಲ್ಲೂ ಇಂಥ ಶನಿಯನ್ನು ಕಂಡಿಲ್ಲ ಎಂದು ಹೇಳಿದ ಪ್ರೇಕ್ಷಕರೂ ಇದ್ದಾರೆ. ಉಳಿದಂತೆ ನಳ, ಬಾಹುಕ, ದಮಯಂತಿ ಪಾತ್ರಗಳೂ ಗಮನ ಸೆಳೆದವು. ಒಟ್ಟಿನಲ್ಲಿ ಹೇಳುವುದಾದರೆ ಪ್ರತಿಯೊಬ್ಬ ಪಾತ್ರಧಾರಿಯೂ ಅದ್ಭುತ ಅಭಿನಯ ನೀಡಿದ್ದಾರೆ.
ಕಥೆಯ ವಿಷಯಕ್ಕೆ ಬರುವುದಾದರೆ ಕೆಲವು ಕಡೆಗಳಲ್ಲಿ ಆಶ್ಚರ್ಯ ಉಂಟು ಮಾಡುವಂಥ ಬದಲಾವಣೆಯಿತ್ತು. ನಳ ತನ್ನ ಪತ್ನಿ ದಮಯಂತಿಯನ್ನು ಕಾಡಿನಲ್ಲಿ ತೊರೆದು ಹೋದ ಬಳಿಕ ಆಕೆಯ ಮಾನಭಂಗಕ್ಕೆ ಯತ್ನಿಸಿದ ಬೇಟೆಗಾರ ದಮಯಂತಿಯ ಪಾತಿವ್ರತ್ಯದ ಉರಿಗೆ ಸಿಲುಕಿ ಸಾಯುವುದು, ಹಾವಿನ ಕಡಿತಕ್ಕೆ ಸಿಲುಕಿ ಗತಿಸುವುದು… ಹೀಗೆ ಒಟ್ಟಿನಲ್ಲಿ ಆತ ಅವಳೆದುರೇ ಕೊನೆಯುಸಿರೆಳೆಯುವುದು ಇದುವರೆಗೆ ತಿಳಿದುಕೊಳ್ಳಲಾಗಿದ್ದ ಕಥೆ. ಬಳಿಕ ದಮಯಂತಿ ಬ್ರಾಹ್ಮಣರೂ ಸೇರಿಕೊಂಡಿದ್ದ ಒಂದು ತಂಡದ ಸಹಾಯದಿಂದ ಊರಿಗೆ ಬಂದು ತನ್ನ ಚಿಕ್ಕಮ್ಮನ ಮನೆಯಲ್ಲಿ ಕೆಲಸದಾಕೆಯ ರೂಪದಲ್ಲಿ ದಿನದೂಡುವುದು ಹಿಂದಿನ ಕಥೆ. ಆದರೆ ಇಲ್ಲಿ ಬೇಟೆಗಾರ ಮೊದಲು ಆಕೆಯ ಮೇಲೆ ಕಣ್ಣು ಹಾಕಿದರೂ, ಬಳಿಕ ಮಾಂಗಲ್ಯ ತೋರಿಸಿದ ಕಾರಣ ಆತನೇ ಅವಳನ್ನು ಊರಿನ ರಾಜನ ಬಳಿಗೆ ಕರೆದೊಯ್ಯುವುದು, ಅಲ್ಲಿ ಆಕೆ ತನ್ನ ನಿಜಕಥೆಯನ್ನು ಹೇಳುವುದು ಕಂಡು ಬರುತ್ತದೆ. ಇಂಥ ಬದಲಾವಣೆಯನ್ನು ಹಿಂದೆ ಶಿವರಾಮ ಕಾರಂತರೇ ಮಾಡಿದ್ದು, ಅದನ್ನು ಬದಲಾಯಿಸಲಾಗದ ಕಾರಣ ಯಥಾಸ್ಥಿತಿ ಕಾಪಾಡಿಕೊಂಡಿರಬೇಕು. ವೇಷಭೂಷಣಗಳ ಬಗ್ಗೆ ನೋಡುವುದಾದರೆ ಕಾಡಿನಲ್ಲಿ ಪತ್ನಿಯ ಸೆರಗನ್ನು ಹರಿದು ಮಾನ ಮುಚ್ಚಿಕೊಂಡ ನಳ ಮುಂದೆ ಕಾರ್ಕೋಟಕ ಕಡಿತಕ್ಕೆ ಒಳಗಾಗುವಾಗಲೂ ಹಿಂದಿನ ರಾಜ ಉಡುಗೆಯಲ್ಲೇ ಇದ್ದ. ಬಾಹುಕನಿಗೂ ಕಿರೀಟ ಸಹಿತ ಅಗತ್ಯಕ್ಕಿಂತ ಜಾಸ್ತಿಯಾದ ಉಡುಗೆಯಿತ್ತು .ಕಾರ್ಕೋಟಕನನ್ನು ತೋರಿಸಿದ್ದರೆ ಮತ್ತಷ್ಟು ಸುಲಭವಾಗಿ ಕಥೆ ಪ್ರೇಕ್ಷಕನಿಗೆ ಅರ್ಥವಾಗುತ್ತಿತ್ತು.
ಯಕ್ಷಗಾನಕ್ಕೆ ಹೋಲಿಸಿದರೆ ಹಾಡುಗಾರಿಕೆ ತುಂಬಾ ಸಂಗೀತಮಯವಾಗಿತ್ತು ಮತ್ತು ಇಂಪಾಗಿತ್ತು. ಯಕ್ಷಗಾನ ಪ್ರೇಕ್ಷಕರಿಗೆ ಇದು ಇಷ್ಟವಾಗದೆ ಇದ್ದರೂ ಒಂದು ಶಾಂತ ಪರಿಸರದಲ್ಲಿ ಸುಂದರ ಕಥಾಭಾಗವನ್ನು ಸಂಗೀತ ಮತ್ತು ಅಭಿನಯ ಪ್ರೌಢಿಮೆಯೊಂದಿಗೆ ಆಸ್ವಾದಿಸಲು ತುಂಬಾ ಪೂರಕವಾಗಿತ್ತು. ವಯೊಲಿನ್ ಕೂಡ ಅದಕ್ಕೆ ತಕ್ಕಂತಿತ್ತು. ಹೀಗೆ ಒಂದು ಸುಂದರ ಮುಸ್ಸಂಜೆಯಲ್ಲಿ ಅತಿಸುಂದರ ಕಲಾಪ್ರಕಾರವೊಂದನ್ನು ನೀಡಿದ ಕರ್ನಾಟಕ ಕಲಾ ದರ್ಶಿನಿ ತಂಡಕ್ಕೆ ಅಭಿನಂದನೆಗಳು.
ಪುತ್ತಿಗೆ ಪದ್ಮನಾಭ ರೈ