Advertisement

ಸರ್‌ಎಂವಿ ರೀತಿ ಸಾಧನೆ ಮಾಡಿ

12:12 PM Mar 08, 2018 | |

ಬೆಂಗಳೂರು: ಎಲ್ಲರಿಗೂ ಸರ್‌.ಎಂ.ವಿಶ್ವೇಶ್ವರಯ್ಯ ಆಗಲು ಸಾಧ್ಯವಿಲ್ಲ. ಆದರೆ, ಅವರಂತೆ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಚಿಂತನೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕೆ.ಆರ್‌.ವೃತ್ತದಲ್ಲಿ ಬುಧವಾರ ಯುನಿರ್ವಸಿಟಿ ವಿಶ್ವೇಶ್ವರಯ್ಯ ಕಾಲೇಜ್‌ ಆಫ್ ಎಂಜಿನಿಯರಿಂಗ್‌ (ಯುವಿಸಿಇ) ಕಟ್ಟಡಗಳ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯುವಿಸಿಇ ಶತಮಾನೋತ್ಸವದ ಅಂಗವಾಗಿ ವಿಶೇಷ ಅನುದಾನದ ರೂಪದಲ್ಲಿ 25 ಕೋಟಿ ರೂ.ಗಳನ್ನು ಈಗಾಗಲೇ ಮೀಸಲಿಟ್ಟಿದ್ದೇವೆ.

ಅದರಲ್ಲೇ ಕಟ್ಟಡ ಕಾಮಗಾರಿ ನಡೆಯಲಿದೆ. ಯುವಿಸಿಯಲ್ಲಿ ಓದಿದ ಅನೇಕರು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಬಿಇ, ಎಂಇ ಶಿಕ್ಷಣದ ಜತೆಗೆ ಸಂಶೋಧನೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಸಂಭ್ರಮ: ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ಸಂಸ್ಥೆ ನೂರು ವರ್ಷದ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಈ ಸಂಸ್ಥೆಯಲ್ಲಿ ಓದಿ ರಾಷ್ಟ್ರಕ್ಕೆ ಕೀರ್ತಿತಂದವರು ಅನೇಕರಿದ್ದಾರೆ. ಪ್ರಯತ್ನದ ಬಲವಿದ್ದರೆ ಎಲ್ಲವೂ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಯುವಿಸಿಇ ಪ್ರಾಂಶುಪಾಲ ಪ್ರೊ.ಕೆ.ಆರ್‌. ವೇಣುಗೋಪಾಲ್‌, ಬೆಂವಿವಿ ಕುಲಪತಿ ಡಾ.ವಿ.ಸುದೇಶ್‌, ಕುಲಸಚಿವ ಪ್ರೊ.ಬಿ.ಕೆ.ರವಿ ಇತರರಿದ್ದರು. 

ಲಾಪ್‌ಟಾಪ್‌ ಕೊಟ್ಟಿಲ್ಲ: ಮುಖ್ಯಮಂತ್ರಿಗಳು ಮಾತನಾಡುತ್ತಾ, ರಾಜ್ಯ ಸರ್ಕಾರ ಜಾತಿ, ಮತ, ಧರ್ಮ ಭೇದವಿಲ್ಲದೇ ಪದವಿ, ಎಂಜಿನಿಯರಿಂಗ್‌, ವೈದ್ಯಕೀಯ ಹೀಗೆ ಎಲ್ಲಾ ರೀತಿಯ ಪದವಿ ಶಿಕ್ಷಣದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡುತ್ತಿದೆ ಎಂದು ಹೇಳುತ್ತಿದ್ದಂತೆ, ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಎರಡು ಕೈ ಮೇಲೆತ್ತಿ, ನಮಗೆ ಲ್ಯಾಪ್‌ಟಾಪ್‌ ಸಿಕ್ಕಿಲ್ಲ ಎಂದು ಗಟ್ಟಿಯಾಗಿ ಕೂಗಿದರು. ಇದಕ್ಕೆ ಉತ್ತರಿಸಿದ ಸಿಎಂ, ಈಗ ವಿತರಣೆ ಆರಂಭವಾಗಿದೆ ಎಂದು ಸಮಜಾಯಿಸಿ ನೀಡಿದರು.

Advertisement

ಸ್ವಾಯತ್ತ ಸ್ಥಾನಮಾನ ನೀಡಿ: ಯುವಿಸಿಇಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕು. ಸ್ವಾಯತ್ತ ಸ್ಥಾನಮಾನ ಕಲ್ಪಿಸುವ ಮೂಲಕ ಈ ಎಂಜಿನಿಯರಿಂಗ್‌ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ವೇದಿಕೆ ಕಲ್ಪಿಸಬೇಕು. ಇದರಿಂದ ಸಂಶೋಧನೆಗೂ ಆದ್ಯತೆ ಹೆಚ್ಚುತ್ತದೆ. ಜತೆಗೆ ಯುವಿಸಿಇಯನ್ನು ಡೀಮ್ಡ್ ವಿಶ್ವವಿದ್ಯಾಲಯವಾಗಿ ಮಾಡಬೇಕು ಎಂದು ಯುವಿಸಿಇ ಪ್ರಾಂಶುಪಾಲ ಪ್ರೊ. ಕೆ.ಆರ್‌.ವೇಣುಗೋಪಾಲ್‌ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

10 ನಿಮಿಷದಲ್ಲಿ ಮುಗಿದ ಕಾರ್ಯಕ್ರಮ: ಬೆಳಗ್ಗೆ 10.30ಕ್ಕೆ ಆರಂಭವಾಗಿದ್ದ ಕಾರ್ಯಕ್ರಮ ಮಧ್ಯಾಹ್ನ 12.15ರ ವರೆಗೂ ಆರಂಭವಾಗಿರಲಿಲ್ಲ. 12.30ರ ಸುಮಾರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಬಸವರಾಜ ರಾಯರಡ್ಡಿ ನೇರವಾಗಿ ಶಂಕುಸ್ಥಾಪನೆ ನೆರವೇರಿಸಿ, ಶತಮಾನೋತ್ಸವ ಸಂಚಿಕೆ “ನಿರಂತರ’ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳು 5 ನಿಮಿಷ ಮಾತನಾಡಿದ ತಕ್ಷಣವೇ ಕಾರ್ಯಕ್ರಮ ಮುಗಿಯಿತು. ಸ್ವಾಗತ, ವಂದನಾರ್ಪಣೆ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next