Advertisement

ಜಮೀನುಗಳಲ್ಲಿ ಅರಣ್ಯ ಕೃಷಿ ಮಾಡಿ

06:55 PM Jan 25, 2021 | Team Udayavani |

ಗದಗ: ಕಾಡಿನ ಸಂರಕ್ಷಣೆಯೊಂದಿಗೆ ಕೃಷಿ ಜಮೀನುಗಳಲ್ಲಿ ಅರಣ್ಯ ಕೃಷಿ ಮಾಡಬೇಕು. ಈ ಮೂಲಕ ಉತ್ತರ ಕರ್ನಾಟಕದ ಬಯಲುಸೀಮೆಯನ್ನು ಬರದ ನಾಡಿನ ಬದಲಿಗೆ ಮರದ ನಾಡನ್ನಾಗಿ ಪರಿವರ್ತಿಸಬೇಕು ಎಂದು ಪರಿಸರ ತಜ್ಞ ಶಿರಸಿಯ ಶಿವಾನಂದ ಕಳವೆ ರೈತರಿಗೆ ಕರೆ ನೀಡಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ “ಕಪ್ಪತ್ತ ಉತ್ಸವ’ದಲ್ಲಿ ಬಯಲು ಬೆರಗು-ವನ ದರ್ಶನ ಕುರಿತ ವಿಷಯ ಮಂಡಿಸಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರಲ್ಲಿ ಜಲ ಮತ್ತು ಮನ ಸಾಕ್ಷರತೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಜಮೀನುಗಳ ಬದುವಿನಲ್ಲಿ ಮರ ಬೆಳೆಸುವುದರಿಂದ ಮಳೆ ಪ್ರಮಾಣ ಹೆಚ್ಚುವುದರೊಂದಿಗೆ ಜಮೀನುಗಳ ಮಣ್ಣಿನ ಸವಕಳಿಯೂ ತಪ್ಪಲಿದೆ.

ಮರಗಳ ಹಣ್ಣಿನ ಮಾರಾಟದಿಂದ ರೈತರ ಆದಾಯವೂ ಹೆಚ್ಚಲಿದೆ. ಆದರೆ, ನಾನಾ ಕಾರಣಗಳಿಂದ ಕಾಡನ್ನು ಸೋಲಿಸಿದ್ದಕ್ಕೆ ಕೃಷಿ ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಬೆಟ್ಟಗುಡ್ಡದಲ್ಲಿ ಮರಗಳ ನಾಶದಿಂದ ವನ್ಯಜೀವಿಗಳಿಗೂ ತೊಂದರೆಯಾಗುತ್ತದೆ. ಕಾಡು ಕೃಷಿಯಿಂದ ಮಳೆಗಾಲದಲ್ಲಿ ಮಳೆ ಹೆಚ್ಚಿಸುವುದರಿಂದ ರೈತರಿಗೆ ಬೇಸಿಗೆಯಲ್ಲಿ ಹಣ್ಣು ಹಂಪಲುಗಳನ್ನು ಪಡೆಯಬಹುದು. ಕಲಬುರ್ಗಿ ಜಿಲ್ಲೆಯಲ್ಲಿ ಶೇರಿ ಬಿಕನಳ್ಳಿ ಅರಣ್ಯ, ಯಾದಗಿರಿ, ಕೋಲಾರ, ಬಾಗಲಕೋಟೆ ಭಾಗದ ಗುಡ್ಡಗಳಲ್ಲಿ ದಡ್ಡವಾದ ಅರಣ್ಯ ಬೆಳೆಯುತ್ತಿರುವುದು ಈ ಭಾಗದ ಜನರಿಗೆ ಮಾದರಿಯಾಗಿದೆ ಎಂದರು.

ವನ್ಯಜೀವಿ ತಜ್ಞ ಹಾಗೂ ಉಪನ್ಯಾಸಕ ಡಾ| ಸಮ್ಮದ್‌ ಕೊಟ್ಟೂರು ಮಾತನಾಡಿ, ದಖನ್‌ ಪ್ರಸ್ತಭೂಮಿ ಎಂದು ಕರೆಯಲಾಗುವ ಗದಗ, ಬಾಗಲಕೋಟೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳು ಸಮುದ್ರ ಮಟ್ಟಕ್ಕಿಂತ ಸುಮಾರು ನಾಲ್ಕು ಸಾವಿರ ಅಡಿ ಎತ್ತರದಲ್ಲಿವೆ. ಇದೇ ಕಾರಣಕ್ಕೆ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲ ಮಟ್ಟ ಹೆಚ್ಚುತ್ತದೆ.

ಇದನ್ನೂ ಓದಿ:ಕನ್ನಡ ಸಾಹಿತ್ಯಕ್ಕಿದೆ ತನ್ನದೇ ಆದ ಗಟ್ಟಿತನ

Advertisement

ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಕೆಲ ಉಪಕ್ರಮಗಳಿಂದಾಗಿ ಜಲ ಸಂರಕ್ಷಣೆಯೊಂದಿಗೆ ಜೀವವೈವಿಧ್ಯತೆ ಹೆಚ್ಚುತ್ತಿದೆ. ಸಂಡೂರಿನ ಕುಮಾರಸ್ವಾಮಿ ಕಾಡು ಪಶ್ಚಿಮ ಘಟ್ಟದಂತೆ ಕಾಡು ಕಂಡುಬರುತ್ತದೆ. ದರೋಜಿ ಕರಡಿಧಾಮ, ಯಲಬುರ್ಗ ಬಳಿ ತೋಳ ರಕ್ಷಿತ ಪ್ರದೇಶ ನಿರ್ಮಿಸಿದೆ.

ಹೊಸಪೇಟೆ-ಕೊಪ್ಪಳ ಮಧ್ಯೆ ನೀರು ನಾಯಿ ಸಂರಕ್ಷಿತ ಪ್ರದೇಶವನ್ನಾಗಿಸಿದ್ದರಿಂದ ಅಳಿವಿನಂಚಿನಲ್ಲಿರುವ ಜಲಚರಗಳು ಕಂಡುಬರುತ್ತಿವೆ. ಜೊತೆಗೆ 4 ಪ್ರಭೇದದ ಆಮೆ, 16 ಜಾತಿಯ ಮೀನುಗಳು ಹಾಗೂ 4 ಜಾತಿಯ ಕಪ್ಪೆಗಳು ಕಂಡು ಬಂದಿರುವುದು ವಿಶೇಷ. ಅದರಂತೆ ಸರಕಾರದೊಂದಿಗೆ ಸಾರ್ವಜನಿಕರು ಅರಣ್ಯ ಮತ್ತು ಜೀವವೈವಿಧ್ಯತೆ ರಕ್ಷಣಾ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಕಪ್ಪತ್ತಗುಡ್ಡ ವನ್ಯಜೀವಿಧಾಮ ವಿಷಯವಾಗಿ ಡಿಸಿಎಫ್‌ ಯಶಪಾಲ್‌ ಕ್ಷೀರಸಾಗರ ಉಪನ್ಯಾಸ ನೀಡಿದರು. ಕಕ್ಕೂರತಾಂಡದ ಲಮಾಣಿ ತಂಡದಿಂದ ನೃತ್ಯ ಪ್ರದರ್ಶನ ಹಾಗೂ ಸುಗಂ  ಗದಾಧರ ಮತ್ತು ರಾಣಾ ಬೇಲೂರು ಅವರ ಕರ್ನಾಟಕದ ಜಲಪಕ್ಷಿಗಳು ಕಿರುಚಿತ್ರ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next