ಒಂದು ಕೆಲಸ ಅಂತ ಇರಬೇಕು. ಅದರಲ್ಲೂ ಕಡಿಮೆ ಕೆಲಸ, ಒಳ್ಳೆಯ ಸಂಬಳ ಕೊಡುವ ಕೆಲಸ ಸಿಕ್ಕಿಬಿಟ್ಟರೆ ಜೀವನ ಪಾವನ ಆದಂತೆ… ಇಂಥದೊಂದು ನಂಬಿಕೆ ಬಾಲ್ಯದಿಂದಲೂ ನನ್ನ ಜೊತೆಗಿತ್ತು. ಯಾವ ಕೆಲಸಕ್ಕೆ ಸೇರಿದರೆ ಜಾಸ್ತಿ ಸಂಪಾದನೆ ಮಾಡಬಹುದು? ಯಾವ ಕೆಲಸದಲ್ಲಿ ರಿಸ್ಕ್ ಕಡಿಮೆ ಇರುತ್ತದೆ, ಯಾವ ಕೆಲಸದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದೆಲ್ಲಾ ಲೆಕ್ಕಹಾಕುವುದೇ ನಮ್ಮ ಕೆಲಸವಾಗಿತ್ತು. ವಿಶೇಷವೆಂದರೆ, ನಮ್ಮ ಜೊತೆಗಿದ್ದ ಗೆಳೆಯರೂ ನಮ್ಮಂತೆಯೇ ಯೋಚಿಸುತ್ತಾ, ನಮ್ಮ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದರು.
ಡಾಕ್ಟರ್ ಆಗಿಬಿಡಬೇಕು, ದಿನವೂ 20 ಜನರನ್ನು ಟೆಸ್ಟ್ ಮಾಡಿದರೂ ಸಾಕು, ಚೆನ್ನಾಗಿ ಸಂಪಾದನೆ ಆಗುತ್ತದೆ ಎಂದು ಕೆಲವರು, ಇಂಜಿನಿಯರ್ ಆದರೆ ತಿಂಗಳು ತಿಂಗಳೂ ಲಕ್ಷ ಲಕ್ಷ ದುಡ್ಡು ಎಣಿಸಬಹುದು ಎಂದು ಹಲವರು ಹೇಳುತ್ತಿದ್ದರು. ಆದರೆ, ಈ ಎರಡೂ ವೃತ್ತಿ ಹೊಂದಬೇಕೆಂದರೆ, ಹಗಲೂ ರಾತ್ರಿಗಳನ್ನು ಒಂದು ಮಾಡಿಕೊಂಡು ಓದಬೇಕಿತ್ತು. ಜೊತೆಗೆ, ಇಂಜಿನಿಯರಿಂಗ್ ಓದಿದವರೆಲ್ಲ ಇಂಜಿನಿಯರ್ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದೂ ನಮಗೆ ಗೊತ್ತಿತ್ತು. ಹೀಗೆಲ್ಲಾ ಮಾತಾಡುತ್ತಿದ್ದಾಗಲೇ ನಮ್ಮ ಜೊತೆಗೇ ಇದ್ದ ಗೆಳೆಯ ಉದ್ಗರಿಸಿದ- ”ಲೆಕ್ಚರರ್ ಆಗುವುದೇ ಸರಿ. ಕಾಲೇಜಲ್ಲಿ ಪಾಠ ಮಾಡಿದ್ದಕ್ಕೂ ಸಂಬಳ ಬರುತ್ತೆ, ಮನೆಯಲ್ಲಿ ಟ್ಯೂಷನ್ ಮಾಡಿದ್ರೆ ಅದರಿಂದಲೂ ಕಾಸು ಸಿಗುತ್ತೆ. ಅದರಲ್ಲೂ ಮ್ಯಾಥ್ಸ್, ಸೈನ್ಸ್, ಇಂಗ್ಲಿಷ್, ಅಕೌಂಟೆನ್ಸಿ ಥರದ ಸಬ್ಜೆಕ್ಟ್ ಆಗಿಬಿಟ್ಟರಂತೂ ಯಾವುದೇ ಊರಿಗೆ ಹೋದರೂ ಸಾಕಷ್ಟು ವಿದ್ಯಾರ್ಥಿಗಳು ಸಿಗುತ್ತಾರೆ…” ಅವನ ಮಾತಿನಲ್ಲಿ ಸತ್ಯವಿತ್ತು. ಏಕೆಂದರೆ, ನಾವೆಲ್ಲಾ ಟ್ಯೂಷನ್‌ಗೆ ಹೋಗುತ್ತಿದ್ದೆವು.
ವಿದ್ಯಾರ್ಥಿಗಳು ಹೆಚ್ಚಿದ್ದ ಕಾರಣಕ್ಕೆ, ಬೇರೆ ಬೇರೆ ಬ್ಯಾಚ್ ಮಾಡಿ ಟ್ಯೂಷನ್ ಮಾಡಲಾಗುತ್ತಿತ್ತು. 5 ಅಥವಾ 10 ವರ್ಷ ಹೀಗೆ ದುಡಿದು ಚೆನ್ನಾಗಿ ಕಾಸು ಮಾಡಿಕೊಂಡು, ಆನಂತರ ನೆಮ್ಮದಿಯ ಜೀವನ ನಡೆಸಬಹುದು ಎಂದೆಲ್ಲಾ ಮಾತಾಡಿಕೊಂಡಿದ್ದೆವು. ಅದೇನು ಕಾಕತಾಳೀಯವೋ ಏನು ಕಥೆಯೋ… ನಾನು ಕಡೆಗೂ ಲೆಕ್ಚರರ್ ಹುದ್ದೆಗೇ ಸೇರಿಕೊಂಡೆ. ಒಂದು ವ್ಯತ್ಯಾಸವೆಂದರೆ, ನನಗೆ ಸರ್ಕಾರಿ ಕಾಲೇಜಿನಲ್ಲಿ ಆ ಹುದ್ದೆ ಸಿಗಲಿಲ್ಲ. ಬದಲಾಗಿ, ಖಾಸಗಿ ಕಾಲೇಜಿನಲ್ಲಿ ಸಿಕ್ಕಿತು. ಆ ಸಂಸ್ಥೆಗೆ ದೊಡ್ಡ ಹೆಸರಿದ್ದುದರಿಂದ, ಆರ್ಥಿಕವಾಗಿ ಬಹಳ ಗಟ್ಟಿ ಇದೆ. ಎಂಥದೇ ಸಂದರ್ಭ ಬಂದರೂ ಏನೂ ತೊಂದರೆ ಆಗುವುದಿಲ್ಲ ಎಂದು ನನ್ನ ನಂಬಿಕೆಯಾಗಿತ್ತು. ನಾನು ಮಾತ್ರವಲ್ಲ; ಆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ನೂರಕ್ಕೂ ಹೆಚ್ಚು ಜನರು ಹಾಗೆಯೇ ನಂಬಿದ್ದರು.
ಮೊನ್ನೆ ಮೊನ್ನೆಯವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಯಾವಾಗ ಕೋವಿಡ್ ಬಂತೋ, ಆ ಕ್ಷಣದಿಂದಲೇ ದುರಾದೃಷ್ಟ ನಮ್ಮ ಹೆಗಲೇರಿತು. ಕೋವಿಡ್ ಸೋಂಕಿನಿಂದ ಪಾರಾಗಲು ಲಾಕ್‌ಡೌನ್ ಘೋಷಣೆಯಾದಾಗ, ಇದೆಲ್ಲಾ ಒಂದು ತಿಂಗಳಲ್ಲಿ ಸರಿ ಹೋಗಬಹುದು ಎಂದು ನಾವೆಲ್ಲರೂ ಅಂದುಕೊಂಡಿದ್ದೆವು. ಆದರೆ ಕೋವಿಡ್ ಕಾಟ, ಎಲ್ಲರ ನಿರೀಕ್ಷೆ ಮೀರಿ ಬೆಳೆಯುತ್ತಾ ಹೋಯಿತು. ಮೊದಲ ತಿಂಗಳು ಸಂಬಳ ಕೊಟ್ಟ ಸಂಸ್ಥೆ, ಆ ನಂತರದಲ್ಲಿ ಸಂಬಳ ಕೊಡುವುದನ್ನು ನಿಲ್ಲಿಸಿಯೇಬಿಟ್ಟಿತು. ಹೇಳಿ ಕೇಳಿ ಬೆಂಗಳೂರಿನ ಬದುಕು, ಬಾಡಿಗೆ ಮನೆ, ಎಲ್ಲಿಗೆ ಹೋಗಬೇಕೆಂದರೂ ಕಾಸು ಬಿಚ್ಚಲೇಬೇಕು… ಹೀಗಿರುವಾಗ, ಸಂಬಳವಿಲ್ಲದೆ ಬದುಕುವುದು ಹೇಗೆ? ಬೆಂಗಳೂರಿಗೆ ಹೋಲಿಸಿದರೆ, ಊರಲ್ಲಿ ಸ್ವಲ್ಪ ನೆಮ್ಮದಿ ಅಂದುಕೊಂಡು, 15 ದಿನಗಳ ಮಟ್ಟಿಗೆ ಊರಿಗೆ ಹೋಗೋಣ, ಅಷ್ಟರೊಳಗೆ ಎಲ್ಲಾ ಸರಿ ಹೋಗಬಹುದು ಅಂದುಕೊಂಡು ಊರಿಗೆ ಬಂದಿದ್ದಾಯ್ತು. ಉಹೂಂ, ಏನೇನೂ ಬದಲಾಗಲಿಲ್ಲ. ಈಗ ಮಾಡುವುದೇನು? ನಾನು ಬದುಕಲೇಬೇಕಿತ್ತು. ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೆಲಸವಾದರೇನು
ಎಂದು ಯೋಚಿಸಿ, ಬೆಂಗಳೂರಿನ ಮನೆ ಖಾಲಿ ಮಾಡಿದೆ. ಊರಿನಲ್ಲಿ ಒಂದು ಚಿಲ್ಲರೆ ಅಂಗಡಿ ತೆರೆಯಲು ನಿರ್ಧರಿಸಿದೆ. ನನ್ನ ಬಳಿ ಇದ್ದ ಹಣದ ಜೊತೆಗೆ, ಗೆಳೆಯರ ಬಳಿ ಸ್ವಲ್ಪ ಸಾಲ ಪಡೆದು ಕಡೆಗೊಮ್ಮೆ ಅಂಗಡಿ ತೆರೆದೂ ಬಿಟ್ಟೆ. ಒಂದು ಕಾಲದಲ್ಲಿ ಲೆಕ್ಚರರ್ ಹುದ್ದೆ ನನಗೆ ಅನ್ನ ಕೊಟ್ಟಿದ್ದು ನಿಜ, ಈಗ ಪ್ರಾವಿಶನ್ ಸ್ಟೋರ್ ಕೂಡ ನನ್ನ ಹೊಟ್ಟೆ ತುಂಬಿಸುತ್ತಿದೆ ಅನ್ನುವುದೂ ನಿಜವೇ.
-ಮಹಾದೇವ ಸ್ವಾಮಿ, ಯಳಂದೂರು