Advertisement

ಯಕ್ಷಗಾನಕ್ಕೂ ಕಠಿನ ಕೃತಿ ಸ್ವಾಮ್ಯ ಕಾಯ್ದೆ: ಚಿತ್ರೀಕರಣ ಮಾಡಿ ಹಂಚಿದರೆ ಜೈಲು, ದಂಡ ಶಿಕ್ಷೆ

08:21 AM Nov 24, 2022 | Team Udayavani |

ಕೋಟ : ಸಿನೆಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಕೃತಿ ಸ್ವಾಮ್ಯ ಕಾಯ್ದೆ ಇದೀಗ ಯಕ್ಷಗಾನ ಮೇಳಕ್ಕೂ ಕಾಲಿಟ್ಟಿದೆ. ಬಡಗು ತಿಟ್ಟಿನ ಪ್ರಸಿದ್ಧ ಡೇರೆ ಮೇಳವಾದ ಪೆರ್ಡೂರು ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯವರು ಹೊಸ ಪ್ರಸಂಗ “ಪಾವನ ತುಳಸಿ’ ಪ್ರದರ್ಶನವನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವುದನ್ನು ಶಿಕ್ಷಾರ್ಹ ಅಪರಾಧವಾಗಿಸಿದ್ದಾರೆ.

Advertisement

ಹೊಸ ಪ್ರಸಂಗಗಳೇ ಡೇರೆ ಮೇಳಗಳ ಜೀವಾಳ. ಪ್ರಸಂಗ ಬಿಡುಗಡೆಯಾಗಿ ವಾರದಲ್ಲೇ ಪ್ರಮುಖ ತುಣುಕುಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದರೆ ಆಕರ್ಷಣೆ ಕಡಿಮೆಯಾಗುತ್ತದೆ. ಕಳೆದ ಬಾರಿಯ ಪೆರ್ಡೂರು ಮೇಳದ ಬಹುತೇಕ ಇಡೀ ಪ್ರಸಂಗವೇ 5-10 ನಿಮಿಷದ ತುಣುಕುಗಳ ರೀತಿಯಲ್ಲಿ ಜಾಲತಾಣ ತಲುಪಿತ್ತು. ಇದರಿಂದ ಹಾಸ್ಯ ಸನ್ನಿವೇಶಗಳಿಗಂತೂ ಸಾಕಷ್ಟು ಹೊಡೆತವಿದೆ. ಕ್ಯಾಂಪ್‌ ವಹಿಸಿಕೊಳ್ಳುವವರಿಗೆ ನಷ್ಟವಾಗಿ ಮೇಳಗಳ ಭವಿಷ್ಯಕ್ಕೆ ಕುತ್ತಾಗುತ್ತಿದೆ.

ಕೃತಿ ಸ್ವಾಮ್ಯ ಹೇಗೆ?
ಸಿನೆಮಾಗಳಲ್ಲಿ ಅದರ ಹಕ್ಕು ಸಂಸ್ಥೆಯ ಬಳಿ ಇರುತ್ತದೆ. ಅದೇ ರೀತಿ ಯಕ್ಷಗಾನದಲ್ಲಿ ಮೇಳದ ಯಜಮಾನರು ಕೃತಿ ಸ್ವಾಮ್ಯ ಹೊಂದಿರುತ್ತಾರೆ. ಈ ಹಿಂದೆಯೂ ಒಂದು ಮೇಳಕ್ಕೆ ನಿಶ್ಚಯವಾದ ಪ್ರಸಂಗವನ್ನು ಆ ಮೇಳದ ಅನುಮತಿ ಇಲ್ಲದೆ ಇನ್ನೊಂದು ಮೇಳದವರು ಪ್ರದರ್ಶಿಸುವಂತಿರಲಿಲ್ಲ. ತೆಂಕು ಹಾಗೂ ಬಡಾಬಡಗಿನ ಕೆಲವು ಮೇಳಗಳಲ್ಲಿ ಅನುಮತಿ ಇಲ್ಲದೆ ಪ್ರದರ್ಶನದ ಚಿತ್ರೀಕರಣ ನಿಷೇಧಿಸಲಾಗಿತ್ತು. ಆದರೆ ಕಾಯ್ದೆ, ಕಾನೂನಿನಡಿ ಕಟ್ಟುನಿಟ್ಟಾಗಿರಲಿಲ್ಲ. ಈಗ 1957 ಸೆಕ್ಷನ್‌ 63ರ ಪ್ರಕಾರ ಅನುಮತಿ ಇಲ್ಲದೆ ಚಿತ್ರೀಕರಣ ಮಾಡಿದರೆ 6 ತಿಂಗಳಿನಿಂದ 1 ವರ್ಗದ ವರೆಗೆ ಕಠಿನ ಕಾರಾಗೃಹ ಶಿಕ್ಷೆ ಅಥವಾ 50 ಸಾವಿರದಿಂದ 1 ಲಕ್ಷ ರೂ. ತನಕ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಹೊಸ ಪ್ರಸಂಗದ ಕೆಲವೊಂದು ಪದ್ಯಗಳು, ಸನ್ನಿವೇಶಗಳು ಪ್ರತೀ ವರ್ಷ ಟೀಕೆಗೆ ಒಳಪಡುವು ದರಿಂದ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗುತ್ತಿದೆ. ಡೇರೆ ಮೇಳಗಳಲ್ಲಿ ಸಿನೆಮಾ ಕಥೆಗಳೂ ಪ್ರಸಂಗ ವಾಗುತ್ತವೆ; ಅದು ಕೂಡ ಕೃತಿ ಸ್ವಾಮ್ಯಕ್ಕೆ ಒಳ ಪಡುವುದಿಲ್ಲವೇ? ಬಯಲಾಟ ಮೇಳಗಳಿಗಿಲ್ಲದ ಕೃತಿಸ್ವಾಮ್ಯ ಡೇರೆ ಮೇಳಗಳಿಗೇಕೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಸಿನೆಮಾ ಕಥೆಯನ್ನು ಯಕ್ಷಗಾನಕ್ಕೆ ತರುವಾಗ ಸಾಕಷ್ಟು ಮಾರ್ಪಾಟು ಮಾಡುವುದರಿಂದ ನೇರವಾಗಿ ಕೃತಿ ಸ್ವಾಮ್ಯಕ್ಕೆ ಒಳಪಡುವುದಿಲ್ಲ. ಬಯಲಾಟ ಮೇಳಗಳಲ್ಲಿ ಪೌರಾಣಿಕ ಪ್ರಸಂಗಗಳೇ ಹೆಚ್ಚಾಗಿ ಪ್ರದರ್ಶನವಾಗುತ್ತವೆ. ಅಲ್ಲಿ ಕಥೆ ಮೊದಲೇ ತಿಳಿದಿದ್ದರೂ ಕಲಾವಿದ ಪಾತ್ರವನ್ನು ಪ್ರಸ್ತುತಪಡಿಸುವುದರ ಮೇಲೆ ಆಟದ ಯಶಸ್ಸು ನಿರ್ಧಾರವಾಗುವುದರಿಂದ ಅಲ್ಲಿ ಈ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎನ್ನುವುದು ಮೇಳದವರ ಅಭಿಪ್ರಾಯವಾಗಿದೆ.

ಕಥೆ, ರೋಚಕ ಸನ್ನಿವೇಶಗಳೇ ಹೊಸ ಪ್ರಸಂಗಗಳ ಜೀವಾಳ. ಪ್ರಸಂಗ ಬಿಡುಗಡೆಯಾದ ತತ್‌ಕ್ಷಣ ಮೊಬೈಲ್‌, ಯೂಟ್ಯೂಬ್‌ ಸೇರಿದರೆ ಪ್ರಸಂಗ ಸೋಲುತ್ತದೆ. ಹೀಗಾಗಿ ಕೃತಿ ಸ್ವಾಮ್ಯ ಅನಿವಾರ್ಯ.
– ಪವನ್‌ ಕಿರಣ್‌ಕೆರೆ, ಪ್ರಸಂಗಕರ್ತರು, ಪೆರ್ಡೂರು ಮೇಳ

Advertisement

ಹೊಸ ಪ್ರಸಂಗ ಪ್ರದರ್ಶನ ವೇಳೆ ಚಿತ್ರೀಕರಿಸದಂತೆ ವಿನಂತಿಸಿದರೂ ಕೆಲವರು ಬೆಲೆ ನೀಡುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟವಾಗುತ್ತಿದೆ. ಡೇರೆ ಮೇಳವನ್ನು ಉಳಿಸುವ ನಿಟ್ಟಿನಲ್ಲಿ ಕಾನೂನು ಪರಿಣಿತರ ಸಲಹೆ ಪಡೆದು ಕೃತಿ ಸ್ವಾಮ್ಯ ಪಡೆಯಲಾಗಿದೆ.
– ವೈ. ಕರುಣಾಕರ ಶೆಟ್ಟಿ, ಪೆರ್ಡೂರು ಮೇಳದ ಯಜಮಾನರು

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next