Advertisement

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

01:26 AM Jan 07, 2025 | Team Udayavani |

ಬೆಂಗಳೂರು: ರಾಜ್ಯದಲ್ಲಿ 60 ಪರ್ಸೆಂಟ್‌ ಕಮಿಷನ್‌ ಆರೋಪ ಜೋರಾಗಿದ್ದು ಈ ವಿಚಾರದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement

ಕುಮಾರಸ್ವಾಮಿಯವರು ರಾಜ್ಯ ಸರಕಾರದ ಕಮಿಷನ್‌ ಪ್ರಮಾಣ ಶೇ. 60ಕ್ಕೆ ತಲುಪಿದೆ ಎಂದು ಹೇಳಿಕೆ ನೀಡಿರುವ ಹೇಳಿಕೆಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅವರೇನು ದಾಖಲೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು. ಹಿಂದಿನ ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಕಮಿಷನ್‌ ಆರೋಪವನ್ನು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನವರೇ ಮಾಡಿದ್ದರು. ಬಿಜೆಪಿಯವರು ಕಮಿಷನ್‌ ತೆಗೆದುಕೊಂಡಿರುವುದಾಗಿ ಅವರು ಆರೋಪಿಸಿದ್ದಾಗಿ ತಿಳಿಸಿದರು.

ಹಿಟ್‌ ಆ್ಯಂಡ್‌ ರನ್‌ ಸಿಎಂ
ಶೇ. 60ರಷ್ಟು ಕಮಿಷನ್‌ ವಸೂಲಿ ಆರೋಪವನ್ನು ಅಲ್ಲಗಳೆದು ಸೂಕ್ತ ದಾಖಲೆ ನೀಡುವಂತೆ ಕೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣ “ಎಕ್ಸ್‌ʼನಲ್ಲಿ ವಾಗ್ಧಾಳಿ ನಡೆಸಿರುವ ಅವರು, 60 ಪರ್ಸೆಂಟ್‌ ಕಮಿಷನ್‌ ಆಧಾರವಿಲ್ಲದೆ ಆರೋಪದ ಮಾತೆಲ್ಲಿ ಬಂತು ಮಾನ್ಯ ಮುಖ್ಯಮಂತ್ರಿಗಳೇ?. ನಿಮ್ಮ ಪಕ್ಷದ ಪರವೇ ಇರುವ ಗುತ್ತಿಗೆದಾರರು, ತುಮಕೂರಿನ ನಿಮ್ಮ ಪಕ್ಷದ ಮುಖಂಡರೇ ಮಾಡಿರುವ ಆರೋಪವಿದು. ಕಾಂಗ್ರೆಸ್‌ ಸರಕಾರಕ್ಕಿಂತ ಹಿಂದಿನ ಬಿಜೆಪಿಯೇ ವಾಸಿ ಇತ್ತು ಎಂದು ಅಲವತ್ತುಕೊಂಡಿದ್ದರು ಎಂದು ಟೀಕಿಸಿದ್ದಾರೆ.

ದಾವಣಗೆರೆ ಗುತ್ತಿಗೆದಾರನೊಬ್ಬ ದಯಾಮರಣ ಕರುಣಿಸಿ ಎಂದು ನಿಮ್ಮ ಘನ ಸನ್ನಿಧಾನಕ್ಕೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅವರಿಗೆ ಬಾಕಿ ಹಣ ಕೊಡಿಸುತ್ತೀರೋ ಅಥವಾ ದಯಾಮರಣ ಕರುಣಿಸುತ್ತೀರೋ? ನಿಮ್ಮ ಕಮಿಷನ್‌ ದುರಾಸೆ ಬಿಟ್ಟು ಮೊದಲು ಆ ಗುತ್ತಿಗೆದಾರನನ್ನು ರಕ್ಷಿಸಿ 60 ಪರ್ಸೆಂಟ್‌ ಕಮಿಷನ್‌, ಹಿಟ್‌ ಆ್ಯಂಡ್‌ ರನ್‌ ಮುಖ್ಯಮಂತ್ರಿಗಳೇ ಎಂದು ಸಿದ್ದರಾಮಯ್ಯಗೆ ಚಾಟಿ ಬೀಸಿದ್ದಾರೆ.

ಆರೋಪಕ್ಕೆ ಆಧಾರವಿಲ್ಲ: ಜಾರಕಿಹೊಳಿ
ಯಾದಗಿರಿ: 60 ಪರ್ಸೆಂಟ್‌ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಅವರ ಆರೋಪಕ್ಕೆ ಯಾವುದೇ ಆಧಾರ ಇಲ್ಲ. ಆರೋಪ ಮಾಡುವಾಗ ಆಧಾರ ಬೇಕು ಎಂದು ಲೋಕೋಪಯೋಗಿ ಸಚಿವ ಸತಿಶ್‌ ಜಾರಕಿಹೊಳಿ ಹೇಳಿದರು.

Advertisement

ರಾಜ್ಯದಲ್ಲಿರುವುದು 100 ಪರ್ಸೆಂಟ್‌ ಕಮಿಷನ್‌ ಸರಕಾರ
ಬೆಂಗಳೂರು: ರಾಜ್ಯದಲ್ಲಿರುವುದು 100 ಪರ್ಸೆಂಟ್‌ ಕಮಿಷನ್‌ ಸರಕಾರ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ| ಸಿ.ಎನ್‌.ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈಗಿರುವುದು 60 ಪರ್ಸೆಂಟ್‌ ಕಮಿಷನ್‌ ಸರಕಾರ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. 100 ಪರ್ಸೆಂಟ್‌ ಕಮಿಷನ್‌ ಹೊಡೆಯುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು. ಕುಮಾರಸ್ವಾಮಿ ಸುಖಾ ಸುಮ್ಮನೆ ಆರೋಪ ಮಾಡಿಲ್ಲ. ಎಲ್ಲ ಇಲಾಖೆಗಳಲ್ಲೂ ಇದು ಜಗಜ್ಜಾಹೀರು ಆಗಿದೆ ಎಂದರು.

ದಯಾಮರಣ ಕೋರಿ ಸಿಎಂಗೆ ಗುತ್ತಿಗೆದಾರರ ಪತ್ರ
ತೀರ್ಥಹಳ್ಳಿ: ಕಾಮಗಾರಿ ಪೂರ್ಣಗೊಂಡರೂ 2-3 ವರ್ಷದಿಂದ ಬಿಲ್‌ ಪಾವತಿಯಾಗಿಲ್ಲ. ಆದ್ದರಿಂದ ಆರ್ಥಿಕ ಸಮಸ್ಯೆ ಉಂಟಾಗಿ ಜೀವನ ನಿರ್ವಹಣೆಗೆ ಕಷ್ಟವಾಗಿದ್ದು ದಯಾಮರಣ ಕಲ್ಪಿಸಿ ಎಂದು ತೀರ್ಥಹಳ್ಳಿ ತಾಲೂಕಿನ ಗುತ್ತಿಗೆದಾರರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ನಾವು ಕೆಲವು ವರ್ಷಗಳಿಂದ ಅನೇಕ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಆದರೆ 2-3 ವರ್ಷಗಳಿಂದ ಕಾಮಗಾರಿಯ ಹಣ ಪಾವತಿ ಆಗಿಲ್ಲ. ಹಲವು ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಸರಕಾರ ಸ್ಪಂದಿಸುತ್ತಿಲ್ಲ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next