ಆದರೆ ಇದು ಒಂದೆಡೆಯಾದರೆ, ಮಲೆನಾಡು ಕೊಡಗು ಜಿಲ್ಲೆಯಲ್ಲಿಯೇ ಕಳೆದ ನಾಲ್ಕು ವರ್ಷಗಳಿಂದ ಸರಾಸರಿ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬಂದಿರುವುದು ಕಾವೇರಿ ಕಣಿವೆಯ ಜನತೆಯಲ್ಲಿ ಆತಂಕಕ್ಕೆ ದೂಡಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆ ಮಳೆಯಾದರೆ ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳು ಭರ್ತಿಯಾಗುತ್ತಿದ್ದವು, ಆದರೆ ಹಾರಂಗಿ ಜಲಾಶಯ ಹೊರತುಪಡಿಸಿ ಕೃಷರಾಜ ಸಾಗರ, ಕಬಿನಿ, ಹೇಮಾವತಿ ಜಲಾಶಯಗಳು ಭರ್ತಿಯಾಗದಿರುವುದು ಎಲ್ಲರನ್ನೂ ಚಿಂತೆಗೆ ದೂಡಿದೆ. ಜುಲೈ ಅಂತ್ಯ ಹಾಗೂ ಆಗಸ್ಟ್ ಆರಂಭದಲ್ಲಿ ಹಾಗಾಗ ಮಳೆ ಮತ್ತು ಮೊಡಕವಿದ ವಾತಾವರಣವಿದೆಯೇ ಹೊರತು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ, ಇದರಿಂದ ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವುದಾದರೂ ಹೇಗೆ ಎಂಬುದು ಕಾಡುತ್ತಿದೆ.
ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿನ ಸರಾಸರಿ ಮಳೆಯ ಪ್ರಮಾಣವನ್ನು ಅವಲೋಕನ ಮಾಡಿದಾಗ ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1669.86 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಜುಲೈ ಅಂತ್ಯದವರೆಗೆ 1224.43 ಮಿ.ಮೀ.ಮಳೆಯಾಗಿದ್ದು, ಶೇ.73.33 ರಷ್ಟು ಮಳೆಯಾಗಿದೆ. 2016ರಲ್ಲಿ 1184.31 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 1544.27 ಮಿ.ಮೀ. ಮಳೆಯಾಗಿತ್ತು. ಒಟ್ಟಾರೆ ಜಿಲ್ಲೆಯಲ್ಲಿ ಶೇ. 26 ಮಳೆ ಕೊರತೆ ಉಂಟಾಗಿದೆ.
ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ ತಾಲ್ಲೂಕಿನಲ್ಲಿ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1992.30ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಜುಲೈ, 31ರ ವರೆಗೆ 1683.75 ಮಿ.ಮೀ.ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 1759.32 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 2286.70 ಮಿ.ಮೀ.ಮಳೆಯಾಗಿತ್ತು. ಒಟ್ಟಾರೆ ತಾಲ್ಲೂಕಿನಲ್ಲಿ ಈ ಬಾರಿ ಶೇ 84.51 ರಷ್ಟು ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1294 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಇಲ್ಲಿಯವರೆಗೆ 952.55 ಮಿ.ಮೀರಷ್ಟು ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 912.60 ಮಿ.ಮೀ.ಮಳೆಯಾಗಿದೆ. ಹಾಗೆಯೇ 2015ರ ಇದೇ ಅವಧಿಯಲ್ಲಿ 1059.41 ಮಿ.ಮೀ. ಮಳೆಯಾಗಿತ್ತು. ತಾಲ್ಲೂಕಿನಲ್ಲಿ ಶೇ.73.61ರಷ್ಟು ಮಳೆಯಾಗಿದೆ.
ವಿರಾಜಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1723.30 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಇಲ್ಲಿಯವರೆಗಿನ ಮಳೆ 1036.98 ಮಿ.ಮೀ.ರಷ್ಟು ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 881.05 ಮಿ.ಮೀ. ಮಳೆಯಾಗಿದೆ. ಹಾಗೆಯೇ 2015ರ ಇದೇ ಅವಧಿಯಲ್ಲಿ 1286.68 ಮಿ.ಮೀ. ಮಳೆಯಾಗಿ ಶೇ. 60.17ರಷ್ಟು ಮಾತ್ರ ಮಳೆಯಾಗಿದೆ.
ಒಟ್ಟಾರೆ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು, ಆದರೆ ಕಳೆದ ಮೂರು ವರ್ಷಗಳಲ್ಲಿ ಮಳೆಯ ಕೊರತೆ ಉಂಟಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
Advertisement