Advertisement
ಗುಹೆಯನ್ನು ಪರಿಶೀಲಿಸಿದ ಇತಿಹಾಸ ತಜ್ಞ ಪ್ರೊ| ಟಿ. ಮುರುಗೇಶಿಯವರು ಇದು ಬೃಹತ್ ಶಿಲಾಯುಗದ ಸಮಾಧಿ ಎಂದು ಹೇಳಿದ್ದಾರೆ. ಕೊಡಪಾನದ ಆಕೃತಿಯಲ್ಲಿ ಕೊರೆದು ರಚಿಸಿರುವ ಈ ಸಮಾಧಿಯಲ್ಲಿ ವಿವಿಧ ರೀತಿಯ ಮಡಕೆ ಅವಶೇಷಗಳು ಕಂಡುಬಂದಿವೆ. ಅಸ್ಥಿ ಅವಶೇಷಗಳನ್ನು ತುಂಬಿಸಿದ ಮಡಕೆ ಸುಮಾರು 2 ಮೀ. ಆಳದಲ್ಲಿ ಇತ್ತು. ಕಡು ಕೆಂಪು ಬಣ್ಣದ ಮಡಕೆ, ಕಪ್ಪು ಬಣ್ಣದ ಮಡಕೆ, ಕಪ್ಪು ಮತ್ತು ಕೆಂಪು ಬಣ್ಣದ ಮಡಕೆ, ನಸುಗೆಂಪು ಬಣ್ಣದ ಮಡಕೆ ಅವಶೇಷಗಳು ಸಮಾಧಿಯಲ್ಲಿ ಪತ್ತೆಯಾಗಿವೆೆ.
ಉಡುಪಿ ಜಿಲ್ಲೆಯ ಕನ್ನರ್ಪಾಡಿ, ಕೊರಂಗ್ರಪಾಡಿ, ಕಪ್ಪೆಟ್ಟು, ಉಪ್ಪೂರು, ಶಿರ್ವ, ಬಂಟಕಲ್ಲು, ಸಾಂತೂರು ಕೊಪ್ಲ, ಹೆಬ್ರಿ, ಸೂಡಾ ಮೊದಲಾದ ಕಡೆ ಈ ರೀತಿ ಸಮಾಧಿಗಳು ಈಗಾಗಲೇ ಕಂಡುಬಂದಿವೆ. ಅವೆಲ್ಲವೂ ಕೆಂಪು ಮುರಕಲ್ಲಿನಲ್ಲಿ ಮಾಡಿದ್ದಾಗಿತ್ತು. ವಿಶೇಷವೆಂದರೆ ಪೆರಂಪಳ್ಳಿಯಲ್ಲಿ ಪತ್ತೆಯಾಗಿರುವ ಸಮಾಧಿಯು ಮಣ್ಣಿನಲ್ಲಿಯೇ ಕೊರೆದು ಮಾಡಿದ ಸಮಾಧಿಯಾಗಿದೆ. ಈ ಸಮಾಧಿ ರಚನೆಗೆ ಉಪಯೋಗಿಸಿದ ಕಲ್ಲಿನ ಆಯುಧಗಳೂ ಸಹ ಸಮಾಧಿಯಲ್ಲಿ ದೊರಕಿವೆ. 2,500 ವರ್ಷ ಹಿಂದಿನದ್ದೇ?
ಪೆರಂಪಳ್ಳಿ ಶಿವಳ್ಳಿಯ ಒಂದು ಭಾಗವಾಗಿದೆ. ಶಿವಳ್ಳಿಯನ್ನು 7 ಮತ್ತು 8ನೇ ಶತಮಾನದ ಶಾಸನಗಳಲ್ಲಿ ಉಲ್ಲೇಖೀಸಲಾಗಿದೆ. ಈ ಗುಹಾ ಸಮಾಧಿಯ ಸಂಶೋಧನೆ ಶಿವಳ್ಳಿಯ ಪ್ರಾಚೀನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸರಿಸುಮಾರು ಕ್ರಿ.ಪೂ. 800ರಷ್ಟು ಪ್ರಾಚೀನ ಸಮಾಧಿಯೆಂದು ಅಂದಾಜಿಸಲಾಗಿದೆ. ಇದು ನಿಜವೇ ಆಗಿದ್ದಲ್ಲಿ ಶಿವಳ್ಳಿಯ ಪರಿಸರವು ಸುಮಾರು 2,500 ವರ್ಷಗಳಷ್ಟು ಮೊದಲೇ ಜನವಸತಿ ಪ್ರದೇಶವಾಗಿತ್ತೆಂಬುದಕ್ಕೆ ಈ ಸಮಾಧಿಯ ಶೋಧ ಮಹತ್ತರ ಸಾಕ್ಷಿಯಾಗುತ್ತದೆ.