ಉಡುಪಿ: ಅಂಬಾಗಿಲು- ಪೆರಂಪಳ್ಳಿ ಮೂಲಕ ಮಣಿಪಾಲ ಸಂಪರ್ಕಿಸುವ ಚತುಷ್ಪಥ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಹಲವು ತಿಂಗಳುಗಳು ಕಳೆದಿದ್ದು, ಸಂಪೂರ್ಣ ಹದಗೆಟ್ಟಿರುವ ರಸ್ತೆಗೆ ಇದೀಗ ತೇಪೆ ಕಾರ್ಯ ನಡೆಸಲಾಗುತ್ತಿದೆ. ಪ್ರಸ್ತುತ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಯಲ್ಲಿ ಜಿಲ್ಲಾಧಿಕಾರಿಗಳು ಪೆರಂಪಳ್ಳಿ ಮೂಲಕ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಿದ್ದರು.
ಆದರೆ ಪೆರಂಪಳ್ಳಿ ಮಾರ್ಗವೇ ದುಃ ಸ್ಥಿತಿಯಲ್ಲಿರುವುದರಿಂದ ಸವಾರರು ಇಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಉದಯವಾಣಿ ಸುದಿನ ಅ.20ರಂದು “ಪೆರಂಪಳ್ಳಿ: ಬದಲಿ ಮಾರ್ಗವೇ ಅವ್ಯವಸ್ಥೆ’ ಶೀರ್ಷಿಕೆಯಡಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು. ಕಂಟ್ರಿ ಇನ್ ಹೊಟೇಲ್ ನಿಂದ ಸಾಯಿರಾಧಾ ಗ್ರೀನ್ ವ್ಯಾಲಿವರೆಗೆ ರಸ್ತೆಯ ಪರಿಸ್ಥಿತಿ ಭೀಕರವಾಗಿದ್ದು, ಧೂಳು, ಕಲ್ಲುಗಳ ಕಣದಿಂದ ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಸಂಕಷ್ಟಪಡುತ್ತಿದ್ದರು. ಇದರಿಂದ ಕೆಲವು ವಾಹನ ಸವಾರರು ನಿಯಂತ್ರಣ ತಪ್ಪಿ ಜಾರಿಯೂ ಬಿದ್ದಿದ್ದರು.
ಸುದಿನ ವರದಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ತೇಪೆ ಕಾರ್ಯ ನಡೆಸುವ ಮೂಲಕ ರಸ್ತೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ವ್ಯವಸ್ಥಿತವಾಗಿಸಲು ಮುಂದಾಗಿದೆ. ಕಂಟ್ರಿ ಇನ್ ಹೊಟೇಲ್ ಕಡೆಯಿಂದ ಪೆರಂಪಳ್ಳಿ ಕಡೆಗೆ ಸಾಗುವ ರಸ್ತೆಯಲ್ಲಿ ಅಲ್ಲಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸ ಕಳೆದ 2-3 ದಿನಗಳಿಂದ ನಡೆಯುತ್ತಿದೆ. ಹೊಸ ರಸ್ತೆ ನಿರ್ಮಾಣ ಎಂದು ? ಅಂಬಾಗಿಲಿನಿಂದ ಮಣಿಪಾಲ ಸಂಪರ್ಕಿಸುವ ಈ ರಸ್ತೆ ಪೂರ್ಣ ಪ್ರಮಾಣದಲ್ಲಿ ಉತ್ತಮ ರಸ್ತೆಯಾಗಿ ರೂಪುಗೊಳ್ಳಬೇಕು ಎಂಬುದು ಜನರ ಅಭಿಲಾಶೆಯಾಗಿದೆ.
ಅಂಬಾಗಿಲು-ಪೆರಂಪಳ್ಳಿ ಹಳೆಯ ಇಕ್ಕಟ್ಟಾದ ರಸ್ತೆ ವಿಸ್ತರಣೆಗೊಳಿಸಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವ್ಯವಸ್ಥಿತ ರಸ್ತೆ ರೂಪಿಸುವ ಯೋಜನೆ ಇದಾಗಿತ್ತು. ಪೆರಂಪಳ್ಳಿ ಮೇಲ್ಸೇತುವೆಯಿಂದ ಮೂಡು ಪೆರಂಪಳ್ಳಿ ಚರ್ಚ್‌ವರೆಗೆ ಉತ್ತಮ ರಸ್ತೆ ನಿರ್ಮಾಣಗೊಂಡಿದೆ. ಆದರೆ ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆ ವರೆಗಿನ ರಸ್ತೆಗೆ ಮೊದಲ ಲೇಯರ್ ಡಾಮರು ಕೆಲಸ ಮಾಡಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಮಳೆಯ ವೇಳೆ ಹಲವೆಡೆ ಮೊದಲ ಲೇಯರ್ ಡಾಮರು ಸಂಪೂರ್ಣ ಹದ ಗೆಟ್ಟು, ಹೋಗಿತ್ತು. ಪೂರ್ಣ ಪ್ರಮಾಣದಲ್ಲಿ ಮೊದಲ ಹಾಗೂ 2ನೇ ಹಂತದ ಲೇಯರ್ ಡಾಮರು ಕೆಲಸವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗುವುದು. ನವೆಂಬರ್ ಅಂತ್ಯದ ಒಳಗೆ ಕೆಲಸ ಮುಗಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸ್ಪಷ್ಟಪಡಿಸಿದೆ.