Advertisement

ಪೆರಂಪಳ್ಳಿ ರೈಲ್ವೇ ಸೇತುವೆ: ಅಪಘಾತಗಳ ಜಂಕ್ಷನ್‌!​​​​​​​

12:30 AM Feb 02, 2019 | Team Udayavani |

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಅಂಬಾಗಿಲು-ಪೆರಂಪಳ್ಳಿ ಮುಖ್ಯ ರಸ್ತೆಯ ಪೆರಂಪಳ್ಳಿ ರೈಲ್ವೆ ಸೇತುವೆ ಹೆಚ್ಚು ಹೆಚ್ಚು ಅಪಘಾತಗಳು ನಡೆಯುವ ಜಾಗವಾಗಿದೆ. ಸೇತುವೆ ಮತ್ತು ರಸ್ತೆಯ ವಿನ್ಯಾಸ ಅವೈಜ್ಞಾನಿಕವಾಗಿರುವುದೇ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. 

Advertisement

ಹಿಂದೆ ಇಲ್ಲಿ ಇದ್ದ ಸೇತುವೆ ಸಮರ್ಪಕವಾಗಿತ್ತು. ಆದರೆ ಅನಂತರ ನಿರ್ಮಾಣವಾದ ಸೇತುವೆ ಅಸಮರ್ಪಕವಾಗಿದ್ದು, ಎದುರಿಂದ ಬರುವ ವಾಹನಗಳು ಕಾಣುವುದಿಲ್ಲ. ಹಂಪ್ಸ್‌ಗಳು ಕೂಡ ಇಲ್ಲ. ಅಂಬಾಗಿಲು ಕಡೆಯಿಂದ ಬರುವ ರಸ್ತೆಯ ಎಡ ಭಾಗ (ಸೇತುವೆ ಸಮೀಪ) ಅಗಲಗೊಳಿಸಿದರೆ ಅಪಘಾತಗಳನ್ನು ತಪ್ಪಿಸಬಹುದು ಎನ್ನುತ್ತಾರೆ ಸ್ಥಳೀಯರು. ಈಗಾಗಲೇ ಮಾಜಿ ಸಚಿವರು, ಜಿಲ್ಲಾಧಿಕಾರಿ ಯವರು, ಲೋಕೋಪಯೋಗಿ ಇಲಾಖೆಯವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಕೆಲವು ತಿಂಗಳುಗಳ ಹಿಂದೆ ಪೊಲೀಸರು ಟ್ರಾಫಿಕ್‌ ಕೋನ್ಸ್‌ಗಳನ್ನು ಹಾಕಿ ವಾಹನಗಳು ರಸ್ತೆಯ ಎರಡೂ ಬದಿ ವಿಭಜಿಸಿ ಹೋಗುವ ಪ್ರಯತ್ನ ಮಾಡಿದ್ದಾರೆ. ಆದರೆ ಈಗ ಟ್ರಾಫಿಕ್‌ ಕೋನ್‌ಗಳೇ ವಾಹನಗಳ ಹೊಡೆತಕ್ಕೆ ಸಿಲುಕಿ ಪುಡಿಯಾಗಿವೆ. ಒಂದು ಮಾತ್ರ ಉಳಿದುಕೊಂಡಿದೆ. 

ವಾಹನ ದಟ್ಟಣೆ
ಅಂಬಾಗಿಲು- ಪೆರಂಪಳ್ಳಿ- ಮಣಿಪಾಲವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು ಇಲ್ಲಿ ರಾತ್ರಿ ಹಗಲು ವಾಹನ ದಟ್ಟಣೆ ಇದೆ. ಈ ರಸ್ತೆಯಲ್ಲಿ ವಾಹನಗಳ ವೇಗವೂ ಹೆಚ್ಚು. ರಾ.ಹೆದ್ದಾರಿ 66ರಲ್ಲಿ ಕುಂದಾಪುರ ಕಡೆಯಿಂದ ಬಂದು ಮಣಿಪಾಲ- ಧರ್ಮಸ್ಥಳ-ಸುಬ್ರಹ್ಮಣ್ಯ ಕಡೆಗೆ ತೆರಳುವವರು, ವಾಪಸ್ಸು ಕುಂದಾಪುರ ಕಡೆಗೆ ಹೋಗುವವರು ಇದೇ ರಸ್ತೆ ಬಳಸುತ್ತಾರೆ.  ಮಾತ್ರವಲ್ಲದೆ ಕುಂದಾ ಪುರ ಭಾಗದಿಂದ ಬರುವ ಆ್ಯಂಬುಲೆನ್ಸ್‌ಗಳು ಕೂಡ ಇದೇ ರಸ್ತೆಯನ್ನು ಬಳಸುತ್ತವೆ. ಕಕ್ಕುಂಜೆ ಪ್ರಾಥಮಿಕ ಶಾಲೆ, ಗರೋಡಿ ಕಡೆಗೆ ಹೋಗುವವರು ಕೂಡ ಇಲ್ಲಿಯೇ ತಿರುವು ಪಡೆದುಕೊಳ್ಳಬೇಕು. ಜ. 1ರಿಂದ ಜ. 24ರ ವರೆಗೆ ಇಲ್ಲಿ 6 ಅಪಘಾತಗಳು ಸಂಭವಿಸಿವೆ. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದೆ ಅಪಘಾತಗಳು ಹೆಚ್ಚಾಗುವ ಭೀತಿ ಇದೆ.

ಭರವಸೆ ಸಿಕ್ಕಿದೆ
ಇಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿರುತ್ತವೆ. ನಾನು ಅಪಘಾತ ಸಂದರ್ಭ ರಕ್ಷಣೆಗೆ ಧಾವಿಸುತ್ತಲೇ ಇರುತ್ತೇನೆ. ಇಲ್ಲಿನ ರಸ್ತೆ ಮತ್ತು ಸೇತುವೆ ಸರಿಯಾಗಿಲ್ಲ. ಸೇತುವೆ ಸರಿಪಡಿಸುವುದು ವಿಳಂಬವಾದರೂ ರಸ್ತೆಯನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಧಿಕಾರಿಯವರ ಗಮನಕ್ಕೂ ತಂದಿದ್ದೇವೆ. ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. 
– ಫೆಲಿಕ್ಸ್‌ ಡಿ’ಸೋಜಾ,
ಸ್ಥಳೀಯ ನಿವಾಸಿ

“ರಸ್ತೆ ಸುರಕ್ಷತೆ’ಯಡಿ ಪ್ರಸ್ತಾವನೆ
“ರಸ್ತೆ ಸುರಕ್ಷತೆ ಯೋಜನೆ’ಯಡಿ ಈ ಭಾಗದಲ್ಲಿ ರಸ್ತೆ ಅಗಲಗೊಳಿಸಲು ಅಥವಾ ಇತರ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳಲು ಮಂಜೂರಾತಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. 
– ಎಂಜಿನಿಯರ್‌,
ಲೋಕೋಪಯೋಗಿ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next